Site icon Vistara News

ind vs wi : ವಿಂಡೀಸ್ ವಿರುದ್ಧ ಮೊದಲ ಪಂದ್ಯವಾಡಿ ಐತಿಹಾಸಿಕ ದಾಖಲೆ ಬರೆದ ಭಾರತ ಕ್ರಿಕೆಟ್​ ತಂಡ

Team India

ತರೋಬಾ (ವೆಸ್ಟ್​ ಇಂಡೀಸ್​): ಟೆಸ್ಟ್ ಮತ್ತು ಏಕದಿನ ಸರಣಿ ಮುಗಿದ ನಂತರ ಭಾರತದ ತಂಡ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಐದು ಪಂದ್ಯಗಳ ಟಿ 20 ಐ ಸರಣಿಯತ್ತ ಗಮನ ಹರಿಸಿದೆ. ಗುರುವಾರ ಸರಣಿಯ ಮೊದಲ ಪಂದ್ಯ ನಡೆದಿದೆ. ಟ್ರಿನಿಡಾಡ್​ನ ತರೂಬಾದ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ಉಭಯ ತಂಡಗಳು ಮುಖಾಮುಖಿಯಾಯಿತು. ವಿಶೇಷವೆಂದರೆ, 2006 ರಲ್ಲಿ ತಮ್ಮ ಮೊದಲ ಪಂದ್ಯವನ್ನು ಆಡಿದ ಮೆನ್ ಇನ್ ಬ್ಲೂಗೆ ಇದು ಐತಿಹಾಸಿಕ ಪಂದ್ಯವಾಯಿತು. ಏಕೆಂದರೆ ಭಾರತ ತಂಡಕ್ಕೆ ಇದು 200ನೇ ಟಿ20 ಪಂದ್ಯ. ಈ ಮೂಲಕ ಹೊಸ ಮೈಲುಗಲ್ಲು ಸ್ಥಾಪಿಸಿದೆ ಭಾರತ ತಂಡ.

ಈ ಪಂದ್ಯಕ್ಕೆ ಮೊದಲು ಭಾರತ ಇದುವರೆಗೆ 199 ಟಿ20 ಪಂದ್ಯಗಳನ್ನು ಆಡಿದ್ದು ಅದರಲ್ಲಿ 127 ಪಂದ್ಯಗಳನ್ನು ಗೆದ್ದಿದೆ. ಒಂದು ಟಿ 20 ವಿಶ್ವಕಪ್ ಟ್ರೋಫಿ ಕೂಡ ಪಡೆದುಕೊಂಡಿದೆ. ಆಡಿದ 223 ಪಂದ್ಯಗಳಲ್ಲಿ 134 ಪಂದ್ಯಗಳನ್ನು ಗೆದ್ದಿರುವ ಪಾಕಿಸ್ತಾನದ ಹೆಚ್ಚು ಪಂದ್ಯಗಳನ್ನುಗೆ ಗೆದ್ದಿರುವ ತಂಡಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಡಿದ ಭಾರತ 200 ಟಿ20 ಪಂದ್ಯಗಳನ್ನಾಡಿದ ಎರಡನೇ ತಂಡ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಇದನ್ನೂ ಓದಿ : Hardik Pandya : ರಾಷ್ಟ್ರಗೀತೆ ಹಾಡುವಾಗ ಭಾವುಕರಾದ ಹಾರ್ದಿಕ್ ಪಾಂಡ್ಯ

ಡಿಸೆಂಬರ್ 1, 2006 ರಂದು ಜೋಹಾನ್ಸ್ ಬರ್ಗ್​​ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವೀರೇಂದ್ರ ಸೆಹ್ವಾಗ್ ನೇತೃತ್ವದ ಭಾರತ ತಂಡ ಟಿ20 ಅಂತಾರಾಷ್ಟ್ರೀಯ ಮಾದರಿಗೆ ಪದಾರ್ಪಣೆ ಮಾಡಿತ್ತು, ಪಂದ್ಯವನ್ನು ಆರು ವಿಕೆಟ್ ಗಳಿಂದ ಗೆದ್ದುಕೊಂಡಿತ್ತು. 2007ರಲ್ಲಿ ಎಂ.ಎಸ್.ಧೋನಿ ನಾಯಕತ್ವದಲ್ಲಿ ಭಾರತ ತಂಡ ಚೊಚ್ಚಲ ಟಿ20 ವಿಶ್ವಕಪ್​ ತನ್ನದಾಗಿಸಿಕೊಂಡಿದೆ. ಫೈನಲ್ ಪಂದ್ಯದಲ್ಲಿ ಪಾಕಿಸ್ತಾನವನ್ನು ಸೋಲಿಸುವ ಮೂಲಕ ಟ್ರೋಫಿಯನ್ನು ಗೆಲ್ಲುವಲ್ಲಿ ಯಶಸ್ವಿಯಾದ ಭಾರತ ತಂಡವು ಟಿ 20 ಸ್ವರೂಪದ ಮೊದಲ ವಿಶ್ವ ಚಾಂಪಿಯನ್ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಹಾರ್ದಿಕ್ ಪಾಂಡ್ಯ ನಾಯಕತ್ವ ಮುಂದುವರಿಕೆ

ಹಾರ್ದಿಕ್ ಪಾಂಡ್ಯ ವೆಸ್ಟ್ ಇಂಡೀಸ್ ವಿರುದ್ಧದ ಟಿ 20 ಐ ಸರಣಿಯಲ್ಲಿ ಮತ್ತೊಂದು ಯುವ ಭಾರತೀಯ ತಂಡವನ್ನು ಮುನ್ನಡೆಸಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಅವರಂತಹ ಐಪಿಎಲ್ 2023ರ ಹಲವಾರು ಸ್ಟಾರ್ ಆಟಗಾರರು ತಮ್ಮ ಚೊಚ್ಚಲ ಟಿ 20 ಐ ಕರೆಯನ್ನು ಪಡೆದಿದ್ದಾರೆ. ಇತ್ತೀಚೆಗೆ ಟೆಸ್ಟ್ ಕ್ರಿಕೆಟ್​ಗೆ ಪದಾರ್ಪಣೆ ಮಾಡಿದ ವೇಗಿ ಮುಖೇಶ್ ಕುಮಾರ್ ಕೂಡ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಯುಎಸ್ಎ ಮತ್ತು ವೆಸ್ಟ್ ಇಂಡೀಸ್ನಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ 2024ಗಾಗಿ ಭಾರತ ತಂಡ ತನ್ನ ಸಂಯೋಜನೆಯನ್ನು ಆರಂಭಿಸುತ್ತಿದೆ. ಐದು ಪಂದ್ಯಗಳಲ್ಲಿ ತಮ್ಮ ಛಾಪು ಮೂಡಿಸುವ ಮೂಲಕ ಅಭಿಯಾನ ಶುರುವಾಗಲಿದೆ. ಮತ್ತೊಂದೆಡೆ, ಏಕದಿನ ಮತ್ತು ಟೆಸ್ಟ್​​ನಲ್ಲಿ ಸೋತ ನಂತರ ವೆಸ್ಟ್ ಇಂಡೀಸ್ ತಂಡದ ಆಟಗಾರರು ಹೆಚ್ಚು ಆಡಲು ಇಷ್ಟಪಡುವ ಟಿ20 ಮಾದರಿಯಲ್ಲಿ ಭಾರತಕ್ಕೆ ತಿರುಗೇಟು ನೀಡಲು ಮುಂದಾಗಿದೆ.

Exit mobile version