Site icon Vistara News

India Open 2023 | ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌; ಮೊದಲ ಸುತ್ತಿನಲ್ಲೇ ಸೋತು ಹೊರಬಿದ್ದ ಪಿ.ವಿ. ಸಿಂಧು!

pv sindu

ನವದೆಹಲಿ: ಇಲ್ಲಿ ನಡೆಯುತ್ತಿರುವ ಇಂಡಿಯಾ ಓಪನ್‌ ಬ್ಯಾಡ್ಮಿಂಟನ್‌(India Open 2023) ಕೂಟದಲ್ಲಿ ವಿಶ್ರ ಫಲಿತಾಂಶ ದಾಖಲಾಗಿದೆ. ಅವಳಿ ಒಲಿಂಪಿಕ್ಸ್​ ಪದಕ ವಿಜೇತೆ ಪಿ.ವಿ. ಸಿಂಧು ವನಿತೆಯರ ಸಿಂಗಲ್ಸ್‌ನಲ್ಲಿ ಥಾಯ್ಲೆಂಡಿನ ಸುಪನಿದಾ ಕಾತೆಹಾಂಗ್‌ ವಿರುದ್ಧ ಸೋತು ಕೂಟದಿಂದ ಹೊರಬಿದ್ದಿದ್ದಾರೆ. ಹಾಲಿ ಚಾಂಪಿಯನ್‌ ಲಕ್ಷ್ಯ ಸೇನ್‌ ಗೆಲುವು ದಾಖಲಿಸಿ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.

ಮಾಜಿ ಚಾಂಪಿಯನ್‌ ಪಿ.ವಿ. ಸಿಂಧು ಅವರು ಕಾತೆಹಾಂಗ್‌ ಎದುರು 12-21, 20-22 ನೇರ ಗೇಮ್​ಗಳಿಂದ ಪರಾಭವಗೊಂಡರು. ಎದುರಾಳಿಯ ಆಕ್ರಮಣಕಾರಿ ಆಟದ ಮುಂದೆ ಸಿಂಧು ಸಂಪೂರ್ಣ ವೈಫಲ್ಯ ಕಂಡರು. ಕಳೆದ ಋತುವಿನ ಸೆಮಿಫೈನಲ್‌ನಲ್ಲಿಯೂ ಸಿಂಧು ಇವರೆದುರು ಸೋಲುಕಂಡಿದ್ದರು.

ಸೇಡು ತೀರಿಸಿದ ಲಕ್ಷ್ಯ ಸೇನ್‌

ಪುರುಷರ ಸಿಂಗಲ್ಸ್​ ವಿಭಾಗದ ಪಂದ್ಯದಲ್ಲಿ ವಿಶ್ವದ 12ನೇ ಶ್ರೇಯಾಂಕಿತ ಲಕ್ಷ್ಯ ಸೇನ್‌ ಅವರು ತನ್ನದೇ ದೇಶದವರಾದ ಎಚ್‌.ಎಸ್‌. ಪ್ರಣಯ್‌ ಅವರನ್ನು ನೇರ ಗೇಮ್‌ಗಳಿಂದ ಸೋಲಿಸಿದರು. ಈ ಮೂಲಕ ಕಳೆದ ವಾರ ಮುಕ್ತಾಯಕಂಡ ಮಲೇಷ್ಯಾ ಓಪನ್‌ ಟೂರ್ನಿಯ ಸೋಲಿಗೆ ಇಲ್ಲಿ ಸೇಡು ತೀರಿಸಿಕೊಂಡರು. ಲಕ್ಷ್ಯ ಸೇನ್‌ ವಿರುದ್ಧ ಪ್ರಣಯ್‌ 21-14, 21-15 ಗೇಮ್‌ಗಳಿಂದ ಸೋಲು ಕಂಡರು. ಸೇನ್‌ ಮುಂದಿನ ಸುತ್ತಿನ ಹೋರಾಟದಲ್ಲಿ ಡೆನ್ಮಾರ್ಕ್‌ನ ರಾಸ್ಮಸ್ ಗೆಮ್ಕೆ ಅವರ ಸವಾಲು ಎದುರಿಸಲಿದ್ದಾರೆ.

ಸಾತ್ವಿಕ್‌-ಚಿರಾಗ್‌ ಶೆಟ್ಟಿ ಜೋಡಿಗೆ ಗೆಲುವು

ಭಾರತದ ಭರವಸೆಯ ಬ್ಯಾಡ್ಮಿಂಟನ್​ ತಾರೆಗಳಾದ ಹಾಲಿ ಚಾಂಪಿಯನ್ಸ್‌ ಸಾತ್ವಿಕ್‌ಸಾಯಿರಾಜ್‌ ರಾಂಕಿರೆಡ್ಡಿ ಮತ್ತು ಚಿರಾಗ್‌ ಶೆಟ್ಟಿ ಅವರು ಸ್ಕಾಟ್ಲೆಂಡಿನ ಕ್ರಿಸ್ಟೋಫ‌ರ್‌ ಗ್ರಿಮ್ಲೆ ಮತ್ತು ಮ್ಯಾಥ್ಯೂ ಗ್ರಿಮ್ಲೆ ಅವರನ್ನು 21-13, 21-15 ಗೇಮ್‌ಗಳಿಂದ ಮಣಿಸಿ ದ್ವಿತೀಯ ಸುತ್ತು ತಲುಪಿದ್ದಾರೆ.

ಇದನ್ನೂ ಓದಿ | PV Sindhu | ಗಾಯದ ಸಮಸ್ಯೆಯಿಂದ ಮುಕ್ತಿ ಪಡೆದ ಪಿ. ವಿ ಸಿಂಧೂ, ಮಲೇಷ್ಯಾ ಓಪನ್​ಗೆ ಸಜ್ಜು

Exit mobile version