ನವದೆಹಲಿ: ಇಲ್ಲಿ ನಡೆದ ಇಂಡಿಯಾ ಓಪನ್ ಬ್ಯಾಡ್ಮಿಂಟನ್(India Open Badminton) ಟೂರ್ನಿಯ ಫೈನಲ್ ಪಂದ್ಯದಲ್ಲಿ ಡೆನ್ಮಾರ್ಕ್‌ನ ವಿಕ್ಟರ್ ಆ್ಯಕ್ಸೆಲ್ಸೆನ್ ಮತ್ತು ಜಪಾನಿನ ಅಕಾನೆ ಯಮಗುಚಿ ಅವರು ಸೋತು ನಿರಾಸೆ ಅನುಭವಿಸಿದರು.
ಭಾನುವಾರ ನಡೆದ ಪುರುಷರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ ಒಲಿಂಪಿಕ್ ಚಾಂಪಿಯನ್ ವಿಕ್ಟರ್ ಆ್ಯಕ್ಸೆಲ್ಸೆನ್ ಅಚ್ಚರಿ ಎಂಬಂತೆ ಕುನ್ಲಾವುತ್ ವಿತಿಸರ್ನ್ ವಿರುದ್ಧ 22-20, 10-21, 21-12 ಗೇಮ್ಗಳಿಂದ ಪರಾಭವಗೊಂಡರು. ಉಭಯ ಆಟಗಾರರ ಈ ಹೋರಾಟ 64 ನಿಮಿಷಗಳ ವರೆಗೆ ಸಾಗಿತು. ಕುನ್ಲಾವುತ್ ವಿತಿಸರ್ನ್ ಗೆದ್ದ ಮೊದಲ ಸೂಪರ್ 750 ಪ್ರಶಸ್ತಿ ಇದಾಗಿದೆ.
ಮಹಿಳೆಯರ ವಿಭಾಗದ ಫೈನಲ್ ಪಂದ್ಯದಲ್ಲಿ ಕೊರಿಯದ ಆ್ಯನ್ ಸೆಯಾಂಗ್ ವಿರುದ್ಧ ವಿಶ್ವದ ನಂಬರ್ 1 ಆಟಗಾರ್ತಿ ಯಮಗುಚಿ 15-21, 21-16, 21-12 ಗೇಮ್ಗಳ ಅಂತರದಿಂದ ಸೋಲು ಕಂಡರು. ಕಳೆದ ವಾರ ನಡೆದ ಮಲೇಷ್ಯಾ ಓಪನ್‌ನ ಫೈನಲ್‌ನಲ್ಲೂ ಇವರಿಬ್ಬರು ಮುಖಾಮಖೀಯಾಗಿದ್ದರು. ಆದರೆ ಇಲ್ಲಿ ಯಮಗುಚಿ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿದ್ದರು. ಇದೀಗ ಕಳೆದ ಫೈನಲ್ನ ಸೋಲಿಗೆ ಆ್ಯನ್ ಸೆಯಾಂಗ್ ಈ ಟೂರ್ನಿಯಲ್ಲಿ ಸೇಡು ತೀರಿಸಿಕೊಂಡಿದ್ದಾರೆ.
ಪುರುಷರ ಡಬಲ್ಸ್ ವಿಭಾಗದಲ್ಲಿ ಚೀನಾದ ಲಿಯಾಂಗ್ ವಿ ಕೆಂಗ್- ವಾಂಗ್ ಚಾಂಗ್ ಜೋಡಿ 14-21, 21-19, 21-18 ಅಂತರದಿಂದ ಮಲೇಷ್ಯಾದ ಆಯರನ್ ಚಿಯಾ- ಸೊ ವೂ ಯಿಕ್ ವಿರುದ್ಧ ಗೆದ್ದು ಚಾಂಪಿಯನ್ ಆಯಿತು. ಉಳಿದಂತೆ ಮಿಶ್ರ ಡಬಲ್ಸ್ ಜಪಾನ್‌ನ ಯುಟ ವತನಾಬೆ- ಅರಿಸಾ ಹಿಗಶಿನೊ ಜೋಡಿ ಚಾಂಪಿಯನ್ ಆಯಿತು.
ಇದನ್ನೂ ಓದಿ | India Open 2023 | ಇಂಡಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಿಂದ ಹಿಂದೆ ಸರಿದ ಸಾತ್ವಿಕ್-ಚಿರಾಗ್ ಜೋಡಿ!