ಕರಾಚಿ: ಬಹುನಿರೀಕ್ಷಿತ ಪುರುಷರ ಏಕದಿನ ವಿಶ್ವ ಕಪ್ ಟೂರ್ನಿಯ(ICC World Cup 2023) ವೇಳಾಪಟ್ಟಿ ಪ್ರಕಟಗೊಂಡು ಒಂದು ದಿನ ಕಳೆದಿದೆ. ಕ್ರಿಕೆಟ್ ಅಭಿಮಾನಿಗಳು ಭಾರಿ ನಿರೀಕ್ಷೆಯಿಂದ ಕಾಯುತ್ತಿರುವ ಭಾರತ ಮತ್ತು ಪಾಕ್ ಪಂದ್ಯದ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಸರ್ಕಾರದ ಒಪ್ಪಿಗೆ ಸಿಕ್ಕರೆ ಮಾತ್ರ ಭಾರತದಲ್ಲಿ ನಡೆಯುವ ವಿಶ್ವ ಕಪ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯ ಎಂದು ಪಾಕ್ ಕ್ರಿಕೆಟ್ ಮಂಡಳಿ ಮತ್ತೊಮ್ಮೆ ಹೇಳಿಕೆ ನೀಡಿದೆ.
ಇದೇ ವಿಚಾರವಾಗಿ ಮಾತನಾಡಿರುವ ಪಾಕ್ ಕ್ರಿಕೆಟ್ ಮಂಡಳಿಯ ನೂತನ ಅಧ್ಯಕ್ಷ ಝಾಕಾ ಅಶ್ರಫ್ (Zaka Ashraf) ಅವರು, “ಈ ಹಿಂದೆ ನಜಮ್ ಸೇಥಿ ಅವರ ಅಧಿಕಾರವಧಿಯಲ್ಲಿ ಕೈಗೊಂಡ ನಿರ್ಧಾರದ ಬಗ್ಗೆ ನೂತನ ಮಂಡಳಿಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಸರ್ಕಾರದಿಂದ ನಮಗೆ ಒಪ್ಪಿಗೆ ಸಿಕ್ಕರೆ ನಾವು ಭಾರತದಲ್ಲಿ ಪಂದ್ಯ ಆಡಲಿದ್ದೇವೆ. ಉಭಯ ದೇಶಗಳ ನಡುವೆ ಯಾವುದೇ ದ್ವಿಪಕ್ಷಿಯ ಪಂದ್ಯ ನಡೆಯಬೇಕಾದರೆ ಪಂದ್ಯ ನಡೆಯುವ ತಾಣಗಳಿಂದ ಹಿಡಿದು ಇತರ ವಿಚಾರದಲ್ಲಿಯೂ ಎರಡೂ ದೇಶಗಳ ಸರ್ಕಾರದ ಒಪ್ಪಿಗೆ ಮಹತ್ವದ್ದಾಗಿದೆ. ಈ ವಿಚಾರ ಬಿಸಿಸಿಐಗೂ ತಿಳಿದಿದೆ. ಹೀಗಾಗಿ ಸರ್ಕಾರ ಒಪ್ಪಿಗೆ ನೀಡಿದರೆ ಮಾತ್ರ ನಾವು ಭಾರತದಲ್ಲಿ ವಿಶ್ವ ಕಪ್ ಆಡಲು ಸಾಧ್ಯ” ಎಂದು ಹೇಳುವ ಮೂಲಕ ಪಾಕ್ ಮತ್ತೆ ತನ್ನ ಕುತಂತ್ರ ಬುದ್ಧಿಯನ್ನು ತೋರುಸುತ್ತಿದೆ.
“ವಿಶ್ವ ಕಪ್ ಟೂರ್ನಿಯಲ್ಲಿ ಆಡುವ ಸಲುವಾಗಿ ನಾವು ಸರ್ಕಾರದ ಜತೆ ನಿರಂತರ ಸಂಪರ್ಕ ಮತ್ತು ಮಾರ್ಗದರ್ಶನವನ್ನು ನೀಡುತ್ತಿದ್ದೇವೆ. ಸರ್ಕಾರ ನಮ್ಮ ಮನವಿಗೆ ಒಪ್ಪಿಗೆ ನೀಡುವ ಭರವಸೆ ಇದೆ. ಆದರೆ ಅಂತಿಮ ನಿರ್ಧಾರಕ್ಕೆ ನಾವು ತಲೆಬಾಗಲೇ ಬೇಕು” ಎಂದು ಪಾಕ್ ಕ್ರಿಕೆಟ್ ಮಂಡಳಿಯ ವಕ್ತಾರರೊಬ್ಬರು ತಿಳಿಸಿದ್ದಾರೆ.
ಐಸಿಸಿ ಪ್ರಕಟಿಸಿದ ವೇಳಾಪಟ್ಟಿ ಪ್ರಕಾರ ಭಾರತ ಮತ್ತು ಪಾಕ್ ವಿರುದ್ಧದ ಮೊದಲ ಲೀಗ್ ಪಂದ್ಯ ಅಕ್ಟೋಬರ್ 15ರಂದು ಅಹಮದಾಬಾದ್ನ(Ahmedabad) ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ(Narendra Modi Stadium) ನಿಗದಿಯಾಗಿದೆ.
ಇದನ್ನೂ ಓದಿ ICC World Cup 2023: 9 ಪಂದ್ಯಗಳಿಗಾಗಿ 8,400 ಕಿ.ಮೀ. ಸಂಚಾರ ಮಾಡಲಿದೆ ಭಾರತ ತಂಡ
ಈ ಹಿಂದೆ ಪಾಕ್, ಅಹಮದಾಬಾದ್‌ನಲ್ಲಿ ನಡೆಯುವ ಪಂದ್ಯದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಪಟ್ಟು ಹಿಡಿದು ಐಸಿಸಿಗೆ ಆಕ್ಷೇಪಣೆ ಸಲ್ಲಿಸಿತ್ತು. ಅಹಮದಾಬಾದ್ ಬದಲಿಗೆ ಚೆನ್ನೈ ಅಥವಾ ಬೆಂಗಳೂರಿನಲ್ಲಿ ಆಡುವ ಬೇಡಿಕೆ ಇರಿಸಿತ್ತು. ಆದರೆ ಅಂತಿಮವಾಗಿ ಭಾರತ ಮತ್ತು ಪಾಕ್ ತಂಡಗಳ ಪಂದ್ಯ ಅಹಮದಾಬಾದ್ನಲ್ಲಿಯೇ ನಿಗದಿಯಾಗಿದೆ. ಇದಕ್ಕೆ ಸೇಥಿ ನೇತೃತ್ವದ ಪಾಕ್ ಕ್ರಿಕೆಟ್ ಮಂಡಳಿ ಒಪ್ಪಿಗೆ ನೀಡಿತ್ತು. ಆದರೆ ನೂತನ ಮಂಡಳಿ ಇದೀಗ ಮತ್ತೆ ಇದೇ ವಿಚಾರವಾಗಿ ಕ್ಯಾತೆ ತೆಗೆದಿದೆ.
ಭಾರತ ಪಂದ್ಯದ ಸಂಪೂರ್ಣ ವೇಳಾಪಟ್ಟಿ
ಭಾರತ vs ಆಸ್ಟ್ರೇಲಿಯಾ- 8 ಅಕ್ಟೋಬರ್, ಎಂಎ ಚಿದಂಬರಂ ಸ್ಟೇಡಿಯಂ, ಚೆನ್ನೈ
ಭಾರತ vs ಅಫಘಾನಿಸ್ತಾನ- 11 ಅಕ್ಟೋಬರ್, ಅರುಣ್ ಜೇಟ್ಲಿ ಕ್ರೀಡಾಂಗಣ, ದೆಹಲಿ
ಭಾರತ vs ಪಾಕಿಸ್ತಾನ- 15 ಅಕ್ಟೋಬರ್, ನರೇಂದ್ರ ಮೋದಿ ಸ್ಟೇಡಿಯಂ, ಅಹಮದಾಬಾದ್
ಭಾರತ vs ಬಾಂಗ್ಲಾದೇಶ- 19 ಅಕ್ಟೋಬರ್, ಎಂಸಿಎ ಸ್ಟೇಡಿಯಂ, ಪುಣೆ
ಭಾರತ vs ನ್ಯೂಜಿಲ್ಯಾಂಡ್- 22 ಅಕ್ಟೋಬರ್, HPCA ಸ್ಟೇಡಿಯಂ, ಧರ್ಮಶಾಲಾ
ಭಾರತ vs ಇಂಗ್ಲೆಂಡ್- 29 ಅಕ್ಟೋಬರ್, ಏಕನಾ ಕ್ರಿಕೆಟ್ ಸ್ಟೇಡಿಯಂ, ಲಕ್ನೋ
ಭಾರತ vs ಕ್ವಾಲಿಫೈಯರ್ 2- 2 ನವೆಂಬರ್, ವಾಂಖೆಡೆ ಸ್ಟೇಡಿಯಂ, ಮುಂಬೈ
ಭಾರತ vs ದಕ್ಷಿಣ ಆಫ್ರಿಕಾ- 5 ನವೆಂಬರ್, ಈಡನ್ ಗಾರ್ಡನ್ಸ್, ಕೋಲ್ಕತ್ತಾ
ಭಾರತ vs ಕ್ವಾಲಿಫೈಯರ್ 1- 11 ನವೆಂಬರ್, ಎಂ. ಚಿನ್ನಸ್ವಾಮಿ ಕ್ರೀಡಾಂಗಣ, ಬೆಂಗಳೂರು