Site icon Vistara News

IND vs ENG ODI : ಕೊಹ್ಲಿ ಸ್ಥಾನ ತುಂಬುವವರು ಯಾರು? ಸಂಭಾವ್ಯ ತಂಡದಲ್ಲಿ ಯಾರಿರಬಹುದು?

ಲಂಡನ್‌: ಕೆನಿಂಗ್ಟನ್‌ ಓವಲ್‌ ಸ್ಟೇಡಿಯಮ್‌ನಲ್ಲಿ ಭಾರತ ಹಾಗೂ ಇಂಗ್ಲೆಂಡ್‌ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿ (IND vs ENG ODI) ಆರಂಭಗೊಳ್ಳಲಿದೆ. ಆದರೆ, ಸ್ಟಾರ್‌ ಬ್ಯಾಟ್ಸ್‌ಮನ್‌ ವಿರಾಟ್‌ ಕೊಹ್ಲಿ ಪಂದ್ಯಕ್ಕೆ ಅಲಭ್ಯರಾಗಿದ್ದು, ಅವರ ಸ್ಥಾನವನ್ನು ಯಾರು ತುಂಬುತ್ತಾರೆ ಎಂಬ ಕೌತುಕ ಸೃಷ್ಟಿಯಾಗಿದೆ.

ಲಂಡನ್‌ನ ಕೆನಿಂಗ್ಟನ್ ಓವಲ್‌ನಲ್ಲಿ ಸಂಜೆ ೫.೩೦ರಿಂದ ಪಂದ್ಯ ನಡೆಯಲಿದೆ. ಶಿಖರ್‌ ಧವನ್‌ ತಂಡಕ್ಕೆ ಸೇರಿಕೊಂಡಿದ್ದು, ಅವರಿಗೆ ಆರಂಭಿಕ ಬ್ಯಾಟಿಂಗ್‌ನ ಹೊಣೆಗಾರಿಕೆ ವಹಿಸಿಕೊಳ್ಳಲಿದ್ದಾರೆ . ಜತೆಗೆ ವಿರಾಟ್‌ ಕೊಹ್ಲಿಯ ಮೂರನೇ ಸ್ಥಾನವನ್ನು ತುಂಬುವ ಆಟಗಾರರನ್ನು ಆಯ್ಕೆ ಮಾಡುವ ಜವಾಬ್ದಾರಿ ಕೋಚ್‌ ರಾಹುಲ್‌ ದ್ರಾವಿಡ್‌ ಹಾಗೂ ನಾಯಕ ರೋಹಿತ್‌ ಶರ್ಮ ಹೆಗಲೇರಿದೆ.

ಭಾರತ ತಂಡ ಕಳೆದ ಎರಡ್ಮೂರು ವರ್ಷಗಳಿಂದ ಏಕದಿನ ಪಂದ್ಯಗಳನ್ನು ಆಡಿಲ್ಲ. ಮುಂಬರುವ ಟಿ೨೦ ವಿಶ್ವ ಕಪ್‌ ಸಿದ್ಧತೆಗಾಗಿ ಟಿ೨೦ ಸರಣಿಯಲ್ಲೇ ಪಾಲ್ಗೊಳ್ಳುತ್ತಿವೆ. ಆದರೆ, ೨೦೨೩ರಲ್ಲಿ ಏಕದಿನ ವಿಶ್ವ ಕಪ್‌ ನಡೆಯಲಿರುವ ಕಾರಣ ಅದಕ್ಕೂ ಸಿದ್ಧತೆ ನಡೆಸಿಕೊಳ್ಳಬೇಕಾಗುತ್ತದೆ.

ಕೊಹ್ಲಿಗೆ ಹಿನ್ನಡೆ

ಕೊಹ್ಲಿ ಅಲಭ್ಯತೆ ತಂಡಕ್ಕೆ ನಷ್ಟವಾಗುವ ಜತೆಗೆ ಸ್ವತಃ ಅವರಿಗೇ ನಷ್ಟ ಎನಿಸಿದೆ. ಸತತ ಕಳಪೆ ಫಾರ್ಮ್‌ನಿಂದ ಬಳಲುತ್ತಿರುವ ಅವರು ಹಿರಿಯ ಆಟಗಾರರಿಂದ ಟೀಕೆಗೆ ಒಳಗಾಗುತ್ತಿದ್ದಾರೆ. ಹೀಗಾಗಿ ಈ ಸರಣಿಯಲ್ಲಿ ಆಡಿ ತಮ್ಮ ಸಾಮರ್ಥ್ಯ ಸಾಬೀತುಪಡಿಸಬೇಕಾಗಿದೆ.

ಧವನ್‌- ರೋಹಿತ್‌ ಜೋಡಿ

ಶಿಖರ್‌ ಧವನ್‌ ಸಾಕಷ್ಟು ಸಮಯಗಳ ಬಳಿಕ ಏಕದಿನ ತಂಡಕ್ಕೆ ಪ್ರವೇಶ ಪಡೆದುಕೊಂಡಿದ್ದಾರೆ. ರೋಹಿತ್‌ ಶರ್ಮ ಜತೆ ಅವರು ಇನಿಂಗ್ಸ್‌ ಆರಂಭಿಸುವುದು ಬಹುತೇಕ ಖಚಿತ. ಅಂತೆಯೇ ಮುಂದಿನ ವೆಸ್ಟ್‌ ಇಂಡೀಸ್‌ ಪ್ರವಾಸದ ಏಕ ದಿನ ಸರಣಿಯಲ್ಲಿ ಪಾಲ್ಗೊಳ್ಳುವ ತಂಡಕ್ಕೆ ಶಿಖರ್‌ ಧವನ್‌ ನಾಯಕ. ಹೀಗಾಗಿ ಈ ಸರಣಿಯಿಂದಲೇ ಅವರು ತಮ್ಮ ಸಾಮರ್ಥ್ಯ ಸಾಬೀತು ಮಾಡಬೇಕಾಗಿತ್ತು. ಆ ಅವಕಾಶ ಕಳೆದುಕೊಂಡಿರುವ ಕಾರಣ ಇನ್ನಷ್ಟು ಟೀಕೆಗಳನ್ನು ಎದುರಿಸಬೇಕಾಗುತ್ತದೆ.

ಬೌಲಿಂಗ್‌ ವಿಭಾಗದಲ್ಲಿ ಯಾರು?

ಬೌಲಿಂಗ್‌ ವಿಭಾಗಕ್ಕೆ ಆಯ್ಕೆಯಾಗಲು ಶಾರ್ದುಲ್‌ ಠಾಕೂರ್‌ ಹಾಗೂ ಕನ್ನಡಿಗ ಪ್ರಸಿದ್ಧ್‌ ಕೃಷ್ಣ ನಡುವೆ ಪೈಪೋಟಿಯಿದೆ. ಉಳಿದಂತೆ ಮೊಹಮ್ಮದ್‌ ಶಮಿ, ಜಸ್‌ಪ್ರಿತ್‌ ಬುಮ್ರಾ, ಯಜ್ವೇಂದ್ರ ಚಹಲ್‌ ಸ್ಥಾನ ಖಾತ್ರಿ. ಅರ್ಶ್‌ದೀಪ್‌ ಸಿಂಗ್‌, ಮೊಹಮ್ಮದ್‌ ಸಿರಾಜ್‌, ಅಕ್ಷರ್‌ ಪಟೇಲ್‌ ತಂಡದಲ್ಲಿದ್ದು, ಆಡುವ ಬಳಗದಲ್ಲಿ ಸ್ಥಾನ ಪಡೆಯುವರೇ ಎಂದು ನೋಡಬೇಕು.

ಸಂಭಾವ್ಯ ಭಾರತ ತಂಡ

ರೋಹಿತ್‌ ಶರ್ಮ (ನಾಯಕ), ಶಿಖರ್‌ ಧವನ್‌, ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌, ರಿಷಭ್‌ ಪಂತ್‌ (ವಿಕೆಟ್‌ಕೀಪರ್‌), ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ, ಯಜ್ರೇಂದ್ರ ಚಹಲ್‌.

ಪಂದ್ಯದ ವಿವರ

ಸಮಯ: ಸಂಜೆ ೫.೩೦ರಿಂದ

ಸ್ಥಳ: ಕೆನಿಂಗ್ಟನ್‌ ಓವಲ್‌, ಲಂಡನ್‌

ನೇರ ಪ್ರಸಾರ: ಸೋನಿ ನೆಟ್ವರ್ಕ್‌, ಸೋನಿ ಲೈವ್‌ನಲ್ಲಿ ಆನ್‌ಲೈನ್‌ ಸ್ಟ್ರೀಮಿಂಗ್‌

ಇನ್ನೂ ಇದೆ: Ind vs Eng T20 : ಕೊಹ್ಲಿಯ ಸಾಧನೆಯನ್ನು ಮೀರಿದ ರೋಹಿತ್‌ ಶರ್ಮ

Exit mobile version