ನವ ದೆಹಲಿ : ಸಿಡ್ನಿಯಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ (T20 World Cup) ತಂಗಳು ಆಹಾರ ಕೊಟ್ಟಿರುವ ವಿಷಯ ಭಾರತ ತಂಡದ ಮಾಜಿ ಸ್ಫೋಟಕ ಬ್ಯಾಟರ್ ವೀರೇಂದ್ರ ಸೆಹ್ವಾಗ್ ಅವರಿಗೆ ಕೋಪ ತರಿಸಿದೆ. ಆಟಗಾರರ ಕಾಳಜಿ ನೋಡಿಕೊಳ್ಳಬೇಕಾದ ಐಸಿಸಿಯ ಕ್ರಮವನ್ನು ಅವರು ಟ್ವೀಟ್ ಮಾಡಿ ವಿರೋಧಿಸಿದ್ದಾರೆ. ವಿದೇಶದಲ್ಲಿ ಕ್ರೀಡಾಪಟುಗಳಿಗೆ ಉತ್ತಮ ಆಹಾರ ದೊರಕುತ್ತದೆ ಎಂಬದು ಭ್ರಮೆಯಾಗಿದೆ ಎಂದು ಅವರು ಹೇಳಿದ್ದಾರೆ.
ಮೆಲ್ಬೋರ್ನ್‌ನಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯ ಗೆದ್ದ ಬಳಿಕ ಭಾರತ ತಂಡ ಸಿಡ್ನಿಗೆ ತೆರಳಿತ್ತು. ಅಲ್ಲಿಯೂ ಭಾರತ ತಂಡದ ಆಟಗಾರರಿಗೆ ಕಳಪೆ ದರ್ಜೆಯ ಹೋಟೆಲ್‌ಗಳನ್ನು ಬುಕ್ ಮಾಡಿಕೊಡಲಾಗಿತ್ತು. ಅದಕ್ಕಿಂತ ಹೆಚ್ಚಾಗಿ ಟೀಮ್ ಇಂಡಿಯಾ ಆಟಗಾರರಿಗೆ ಅಭ್ಯಾಸದ ವೇಳೆ ಪೂರ್ತಿ ತಣ್ಣಗಾಗಿರುವ ಸ್ಯಾಂಡ್‌ವಿಚ್, ಫಲಾಫೆಲ್, ಹಣ್ಣುಗಳು ಹಾಗೂ ಸಲಾಡ್‌ಗಳನ್ನು ನೀಡಲಾಗಿತ್ತು. ಟೀಮ್ ಇಂಡಿಯಾ ಆಟಗಾರರು ಅದನ್ನು ತಿನ್ನಲು ನಿರಾಕರಿಸಿ, ಹೋಟೆಲ್‌ಗೆ ಮರಳಿದ ಬಳಿಕ ಊಟ ಮಾಡಿದ್ದರು. ಆಟಗಾರರ ಆತಿಥ್ಯ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಲಾಗಿದೆ ಎಂದು ಐಸಿಸಿಗೆ ದೂರು ನೀಡಲಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ವೀರೇಂದ್ರ ಸೆಹ್ವಾಗ್, ಇದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.
“ಒಂದು ಕಾಲದಲ್ಲಿ ವಿದೇಶದಲ್ಲಿ ಆಟಗಾರರಿಗೆ ವಿಶೇಷ ಆತಿಥ್ಯ ನೀಡಲಾಗುತ್ತಿತ್ತು ಎಂದು ಹೇಳಲಾಗುತ್ತಿತ್ತು. ಆದರೆ, ಈಗ ವಿದೇಶದ ಟೀಮ್‌ಗಳು ಬಂದಾಗ ಭಾರತವೇ ಉತ್ತಮ ಆಹಾರವನ್ನು ಪೂರೈಕೆ ಮಾಡುತ್ತದೆ,” ಎಂದು ಅವರು ಬರೆದುಕೊಂಡಿದ್ದಾರೆ.
“ಉತ್ತಮ ಆಹಾರ ಪೂರೈಕೆ ಮಾಡದಿರುವುದು ಐಸಿಸಿಯ ಸಮಸ್ಯೆ. ಅಭ್ಯಾಸ ಮುಗಿದ ಬಳಿಕ ಬಿಸಿಯಾದ ಸ್ಯಾಂಡ್‌ವಿಚ್ ಕೊಡಬೇಕು. ಅದು ಬಿಟ್ಟು ತಣ್ಣಗಾಗಿರುವ ಆಹಾರ ಕೊಟ್ಟರೆ ಹೇಗೆ? ಬಿಸಿ ಆಹಾರ ಕೊಡಬೇಕು ಎಂಬ ನಿಯಮ ಎಲ್ಲರಿಗೂ ಅನ್ವಯ. ಬೆಣ್ಣೆ ಹಣ್ಣು, ಟೊಮೆಟೊ ಹಾಗೂ ಸೌತೆಕಾಯಿಯನ್ನು ನೀಡಬೇಕು,” ಎಂಬುದಾಗಿ ವೀರೇಂದ್ರ ಸೆಹ್ವಾಗ್ ಒತ್ತಾಯಿಸಿದ್ದಾರೆ.
ಇದನ್ನೂ ಓದಿ | IND | ವಿಶ್ವ ಕಪ್‌ನಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ತಂಗಳು ಊಟ ಸರಬರಾಜು! ಐಸಿಸಿಗೆ ದೂರು ನೀಡಿದ ಬಿಸಿಸಿಐ