Site icon Vistara News

Hockey World Cup | ಲೆಕ್ಕಕ್ಕಿಲ್ಲದ ಪಂದ್ಯದಲ್ಲಿ ಭಾರತೀಯ ವನಿತೆಯರಿಗೆ ಕೆನಡಾ ವಿರುದ್ಧ ಜಯ

ನವ ದೆಹಲಿ: ಎಫ್‌ಐಎಚ್ ಹಾಕಿ ವಿಶ್ವ ಕಪ್‌ನ (FIH Women’s Hockey World Cup) ೯ರಿಂದ ೧೨ನೆಯವರೆಗಿನ ಸ್ಥಾನಗಳಿಗಾಗಿ ನಡೆದ ಪಂದ್ಯದಲ್ಲಿ ಭಾರತ ವನಿತೆಯರ ತಂಡ ಕೆನಡಾ ವಿರುದ್ಧ ೩-೨ ಪೆನಾಲ್ಟಿ ಶೂಟೌಟ್‌ ಗೋಲ್‌ಗಳಿಂದ ಜಯ ಗಳಿಸಿದೆ. ಇದೂ ಟೂರ್ನಿಯಲ್ಲಿ ಭಾರತಕ್ಕೆ ದಕ್ಕಿದ ಮೊದಲ ಗೆಲುವು.

ಪಂದ್ಯದ ಪೂರ್ಣ ಅವಧಿಯಲ್ಲಿ ಇತ್ತಂಡಗಳು ೧-೧ ಸಮಬಲದ ಗೋಲ್‌ ದಾಖಲಿಸಿದ ಕಾರಣ ಪೆನಾಲ್ಟಿ ಶೂಟೌಟ್‌ ಮೊರೆ ಹೋಗಲಾಯಿತು. ಅದರಲ್ಲಿ ಭಾರತ ತಂಡದ ನಾಯಕಿ ಸವಿತಾ ಪೂನಿಯಾ ಎದುರಾಳಿ ತಂಡದ ಗೋಲ್‌ ಬಾರಿಸುವ ಯತ್ನವನ್ನು ೬ ಬಾರಿ ತಡೆದರು. ಹೀಗಾಗಿ ೩-೨ರ ಮುನ್ನಡೆಯೊಂದಿಗೆ ಭಾರತ ಯಶಸ್ಸು ಸಾಧಿಸಿತು.

ಪೂರ್ಣ ಅವಧಿಯಲ್ಲಿ ಕೆನಡಾ ಪರ ಮೆಡಲಿನಾ ಸೆಕ್ಕೋ ೧೧ ನೇ ನಿಮಿಷದಲ್ಲಿ ಗೋಲ್‌ ಬಾರಿಸಿದರೆ, ಭಾರತ ಪರ ೫೮ನೇ ನಿಮಿಷದಲ್ಲಿ ಸಲೀಮಾ ಟೆಟೆ ಗೋಲ್‌ ಬಾರಿಸುವ ಮೂಲಕ ಸಮಬಲದ ಫಲಿತಾಂಶ ಮೂಡಿ ಬರುವಂತೆ ನೋಡಿಕೊಂಡರು.

ಭಾರತ ತಂಡ ಹಾಲಿ ವಿಶ್ವ ಕಪ್‌ನಲ್ಲಿ ಪದಕದ ಬೇಟೆಯ ಅವಕಾಶ ಕಳೆದುಕೊಂಡಿದೆ. ಆತಿಥೇಯ ಸ್ಪೇನ್‌ ವಿರುದ್ಧದ ಕ್ರಾಸ್‌ಓವರ್‌ ಪಂದ್ಯದಲ್ಲಿ ಸಾಲಿಟರಿ ಗೋಲ್‌ನೊಂದಿಗೆ ಸೋತಿದ್ದ ಭಾರತ ತಂಡ ಕ್ವಾರ್ಟರ್‌ ಫೈನಲ್ಸ್‌ಗೆ ಎಂಟ್ರಿಯಾಗುವ ಕೊನೇ ಅವಕಾಶವನ್ನೂ ನಷ್ಟಮಾಡಿಕೊಂಡಿತ್ತು.

ರೋಚಕ ಶೂಟೌಟ್‌

ಪೂರ್ಣ ಅವಧಿಯಲ್ಲಿ ೧-೧ ಗೋಲ್‌ ಗಳಿಸಿಕೊಂಡಿದ್ದ ಇತ್ತಂಡಗಳಿಗೆ ಪೆನಾಲ್ಟಿ ಶೂಟೌಟ್‌ನಲ್ಲಿ ಸಿಗುವ ಏಳು ಅವಕಾಶಗಳಲ್ಲಿ ಮುನ್ನಡೆ ಪಡೆದರೆ ಗೆಲುವು ಸಾಧ್ಯವಿತ್ತು. ಅಂತೆಯೇ ಕೆನಡಾ ಮೊದಲ ಯತ್ನವನ್ನೇ ಗೋಲಾಗಿ ಪರಿವರ್ತಿಸಿ ಮುನ್ನಡೆ ಪಡೆದುಕೊಂಡಿತು. ಆದರೆ, ನಂತರದ ಎದುರಾಳಿ ತಂಡದ ನಂತರ ಆರು ಪ್ರಯತ್ನಗಳನ್ನು ಗೋಲ್‌ಕೀಪರ್‌ ಹಾಗೂ ನಾಯಕಿ ಸವಿತಾ ಪೂನಿಯಾ ತಡೆದರು. ಭಾರತ ಪರ ನವನೀತ್‌ ಕೌರ್‌, ಸೋನಿಕಾ ಹಾಗೂ ನೇಹಾ ಗೋಲ್‌ಗಳನ್ನು ಬಾರಿಸಿ ಭಾರತದ ಗೆಲುವಿಗೆ ನೆರವಾದರು.

೯ರಿಂದ ೧೨ನೇ ಸ್ಥಾನಗಳಿಗಾಗಿ ನಡೆಯುತ್ತಿರುವ ಈ ಸ್ಪರ್ಧೆಯಲ್ಲಿ ಭಾರತ ತಂಡ ಬುಧವಾರ ಜಪಾನ್‌ಗೆ ಎದುರಾಗಲಿದೆ.

ಇದನ್ನೂ ಓದಿ: Hockey World Cup : ಸೋತ ಭಾರತ ವನಿತೆಯರಿಗೆ ಇನ್ನೂ ಇದೆ ಚಾನ್ಸ್

Exit mobile version