ಮುಂಬಯಿ: ಟಿ20 ವಿಶ್ವಕಪ್ ಗೆಲುವಿನ ಬಳಿಕ ವಿಶ್ರಾಂತಿಯಲ್ಲಿರುವ ಟೀಮ್ ಇಂಡಿಯಾ(Team India) ನಾಯಕ ರೋಹಿತ್ ಶರ್ಮಾ(Rohit Sharma) ಅವರು ಶ್ರೀಲಂಕಾ(India Squad Announcement) ವಿರುದ್ಧದ ಏಕದಿನ ಸರಣಿಯನ್ನಾಡಲಿದ್ದಾರೆ ಎಂದು ವರದಿಯಾಗಿದೆ. ನೂತನ ಕೋಚ್ ಗೌತಮ್ ಗಂಭೀರ್(Gautam Gambhir) ಅವರು ವಿಶ್ರಾಂತಿ ಪಡೆದಿರುವ ವಿರಾಟ್ ಕೊಹ್ಲಿ, ರೋಹಿತ್ ಲಂಕಾ ಸರಣಿಯಲ್ಲಿ ಆಡಬೇಕು ಎಂದು ಬಿಸಿಸಿಐಗೆ(BCCI) ಮನವಿ ಮಾಡಿದ್ದರು. ಇದೀಗ ರೋಹಿತ್ ಆಡಲು ಸಿದ್ಧರಾಗಿದ್ದಾರೆ ಎನ್ನಲಾಗಿದೆ.
ಮುಂದಿನ ವರ್ಷ ಪಾಕಿಸ್ತಾನ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಗೂ ಮೊದಲು ಭಾರತ ತಂಡ ಕೆಲವೇ ಏಕದಿನ ಪಂದ್ಯಗಳನ್ನು ಮಾತ್ರ ಆಡುತ್ತಿದೆ. ಹೆಚ್ಚಾಗಿ ಟಿ20 ಸರಣಿ ಮಾತ್ರ ಆಡಲಿದೆ. ಕಡಿಮೆ ಏಕದಿನ ಪಂದ್ಯ ಇರುವ ಕಾರಣ ಅನುಭವಿ ಆಟಗಾರರು ಈ ಪ್ರವಾಸದಲ್ಲಿ ಪಾಲ್ಗೊಳ್ಳಬೇಕು ಎಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟಿದ್ದರು. ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ತಂಡವನ್ನು ರೋಹಿತ್ ಮುನ್ನಡೆಸುವುದನ್ನು ಈಗಾಗಲೇ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಖಾತ್ರಿ ಪಡಿಸಿದ್ದಾರೆ. ವಿರಾಟ್ ಕೊಹ್ಲಿ ಲಂಕಾ ಏಕದಿನ ಸರಣಿ ಆಡುವ ಬಗ್ಗೆ ಯಾವುದೇ ಮಾಹಿತಿ ಹೊರಬಿದ್ದಿಲ್ಲ.
ಏಕದಿನ ಮತ್ತು ಟಿ20 ಸರಣಿಗೆ ಭಾರತ ತಂಡ ಇಂದು ಪ್ರಕಟಗೊಳ್ಳುವ ಸಾಧ್ಯತೆ ಇದೆ. ಆಯ್ಕೆ ಸಮಿತಿಯ ಅಧ್ಯಕ್ಷ ಅಜೀತ್ ಅಗರ್ಕರ್ ಮತ್ತು ಕೋಚ್ ಗಂಭೀರ್ ಸಭೆ ನಡೆಸಿ ಬಳಿಕ ತಂಡ ಪ್ರಕಟಿಸಲಿದ್ದಾರೆ. ಈ ಹಿಂದೆ ರೋಹಿತ್ ವಿಶ್ರಾಂತಿ ಪಡೆಯುವ ಕಾರಣ ಹಂಗಾಮಿ ನಾಯಕನಾಗಿ ಕನ್ನಡಿಗ ಕೆ.ಎಲ್ ರಾಹುಲ್ ತಂಡವನ್ನು ಮುನ್ನಡೆಸಲಿದ್ದಾರೆ ಎನ್ನಲಾಗಿತ್ತು. ಆದರೆ, ರೋಹಿತ್ ತಂಡಕ್ಕೆ ಲಭ್ಯರಿದ್ದರೆ, ರಾಹುಲ್ಗೆ ಉಪನಾಯಕ ಸ್ಥಾನ ನೀಡುವ ಸಾಧ್ಯತೆ ಇದೆ. ಟಿ20ಗೆ ಸೂರ್ಯಕುಮಾರ್ ಯಾದವ್ ನಾಯಕನಾಗುವುದು ಬಹುತೇಖ ಖಚಿತ ಎನ್ನುವಂತಿದೆ.
ಇದನ್ನೂ ಓದಿ Rohit Sharma: ‘ಎಲಾ ಉನ್ನಾರು?’; ತೆಲುಗಿನಲ್ಲಿ ಮಾತನಾಡಿದ ರೋಹಿತ್ ಶರ್ಮ; ವಿಡಿಯೊ ವೈರಲ್
ರಣಜಿ ಆಡಲು ನಿರಾಕರಿಸಿ ಅಶಿಸ್ತು ತೋರಿದ ಕಾರಣದಿಂದ ಬಿಸಿಸಿಐ(BCCI) ವಾರ್ಷಿಕ ಗುತ್ತಿಗೆಯಿಂದ ಹೊರಬಿದ್ದಿರುವ ಶ್ರೇಯಸ್ ಅಯ್ಯರ್(Shreyas Iyer) ಅವರು ಶ್ರೀಲಂಕಾ(IND vs SL) ವಿರುದ್ದದ ಏಕದಿನ ಸರಣಿಗೆ ಆಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ.
ಕೋಚ್ ಗೌತಮ್ ಗಂಭೀರ್ ಅವರ ಉಸ್ತುವಾರಿಯಲ್ಲಿ ಭಾರತ ತಂಡ ಆಡುವ ಮೊದಲ ಸರಣಿ ಇದಾಗಲಿದೆ. ಹೀಗಾಗಿ ನಿರೀಕ್ಷೆ ಹೆಚ್ಚಾಗಿಯೇ ಇರಲಿದೆ. 2021ರ ಬಳಿಕ ಭಾರತ ಮೊದಲ ಬಾರಿಗೆ ಶ್ರೀಲಂಕಾದಲ್ಲಿ ದ್ವಿಪಕ್ಷೀಯ ಸರಣಿ ಆಡಲಿದೆ. ಉಭಯ ತಂಡಗಳು ಹೊಸ ಕೋಚ್ ಮಾರ್ಗದರ್ಶನದಲ್ಲಿ ಕಣಕ್ಕಿಳಿಯಲಿದೆ.
ಪ್ರವಾಸದ ಮೊದಲ 3 ಟಿ20 ಪಂದ್ಯಗಳು ಜುಲೈ 27, 28 ಮತ್ತು 30ರಂದು ಪಲ್ಲೆಕಿಲೆಯಲ್ಲಿ ನಡೆಯಲಿವೆ. ಮೊದಲು ಪ್ರಕಟಗೊಂಡಿದ್ದ ವೇಳಾಪಟ್ಟಿಯಲ್ಲಿ 26ರಿಂದ ಟಿ20 ಪಂದ್ಯ ಆರಂಭವಾಗಬೇಕಿತ್ತು. ಏಕದಿನ ಸರಣಿ ಕೂಡ ಒಂದು ದಿನ ತಡವಾಗಿ ಶುರುವಾಗಬೇಕಿತ್ತು. ಏಕದಿನ ಆಗಸ್ಟ್ 1ರದ ಬದಲಾಗಿ ಆಗಸ್ಟ್ 2ರಿಂದ ಆರಂಭಗೊಳ್ಳಲಿದೆ. ಉಳಿದ ಪಂದ್ಯಗಳ ದಿನಾಂಕ ಬದಲಾಗಲಿಲ್ಲ. ಈ ಹಿಂದಿನಂತೆ ಆಗಸ್ಟ್ 4 ಮತ್ತು 7ರಂದೇ ನಡೆಯಲಿದೆ.