ಮುಂಬಯಿ: ಇಂಗ್ಲೆಂಡ್(IND vs ENG) ವಿರುದ್ಧದ ಉಳಿದ ಮೂರು ಪಂದ್ಯಗಳಿಗೆ(India Squad For Last 3 Tests) ಇಂದು(ಶುಕ್ರವಾರ) ಭಾರತ ತಂಡ ಪ್ರಕಟಗೊಳ್ಳಲಿದೆ. ವೈಯಕ್ತಿಕ ಕಾರಣ ನೀಡಿ ಮೊದಲ 2 ಟೆಸ್ಟ್ ಪಂದ್ಯಗಳಿಗೆ ಅಲಭ್ಯರಾಗಿದ್ದ ತಾರಾ ಬ್ಯಾಟರ್ ವಿರಾಟ್ ಕೊಹ್ಲಿ(Virat Kohli) ಸರಣಿಯಿಂದಲೇ ಹೊರಗುಳಿಯಲಿದ್ದಾರೆ ಎಂದು ಬಿಸಿಸಿಐ ಮೂಲಗಳು ತಿಳಿಸಿದೆ.
ಇನ್ನೊಂದು ವರದಿಯ ಪ್ರಕಾರ ವಿರಾಟ್ ಕೊಹ್ಲಿ ಅವರು ಮಾರ್ಚ್ 6ಕ್ಕೆ ಧರ್ಮಶಾಲಾದಲ್ಲಿ ಆರಂಭಗೊಳ್ಳಲಿರುವ ಕೊನೆಯ ಟೆಸ್ಟ್‌ನಲ್ಲಿ ಆಡಲಿದ್ದಾರೆ ಎನ್ನಲಾಗಿದೆ. ಒಟ್ಟಾರೆಯಾಗಿ ಕೊಹ್ಲಿ ಯಾವಾಗ ತಂಡದ ಆಯ್ಕೆಗೆ ಲಭ್ಯವಿರುತ್ತಾರೆ ಎಂಬುದು ಇಂದು ಸ್ಪಷ್ಟಗೊಳ್ಳಲಿದೆ.
2ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬುದನ್ನು ಬಿಟ್ಟು ಬೇರೆ ಯಾವ ಕಾರಣಕ್ಕೆ ಕೊಹ್ಲಿ ಸರಣಿಗೆ ಗೈರಾಗಿದ್ದಾರೆ ಎಂಬುದು ಈವರೆಗೆ ಅಧಿಕೃತವಾಗಿ ತಿಳಿದು ಬಂದಿಲ್ಲ. ಕೆಲ ದಿನಗಳ ಹಿಂದೆ ಪಾಕಿಸ್ತಾನದ ಕೆಲ ಮಾಧ್ಯಮಗಳು ವಿರಾಟ್ ಕೊಹ್ಲಿ ತಾಯಿ ಅಸೌಖ್ಯದಿಂದ ಬಳಲುತ್ತಿದ್ದಾರೆ ಎಂದು ವರದಿ ಮಾಡಿತ್ತು. ಆದರೆ ಕೊಹ್ಲಿಯ ಸಹೋದರ ಈ ವದಂತಿಯನ್ನು ತಳ್ಳಿ ಹಾಕಿದ್ದರು. ತಾಯಿ ಆರೋಗ್ಯವಾಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದರು.
ಇದನ್ನೂ ಓದಿ IND vs ENG: ರಾಜ್‌ಕೋಟ್‌ನಲ್ಲಿ ಭಾರತ vs ಇಂಗ್ಲೆಂಡ್ ಟೆಸ್ಟ್ ಸಾಧನೆ ಹೇಗಿದೆ?
ವಿರಾಟ್ ಕ್ರಿಕೆಟ್ ಕಂಡ ಶ್ರೇಷ್ಠ ಆಟಗಾರರಲ್ಲಿ ಒಬ್ಬರು. ಅವರ ಆಗಮನ ಆ ತಂಡದ ಬಲವನ್ನು ಸುಧಾರಿಸುತ್ತದೆ ಎಂಬುದರಲ್ಲಿ ಸಂದೇಹವಿಲ್ಲ. ಭಾರತೀಯ ಕ್ರಿಕೆಟ್ನಲ್ಲಿ ಆಳದಲ್ಲಿ ಹಲವಾರು ಪ್ರತಿಭೆಗಳಿವೆ. ಆದ್ದರಿಂದ ನಾವು ಎದುರಾಳಿ ತಂಡದ ಪ್ರತಿಯೊಬ್ಬ ಆಟಗಾರನನ್ನು ಗೌರವಿಸುತ್ತೇವೆ ಎಂದು ಮೆಕಲಮ್ ಹೇಳಿದ್ದರು.
ರಾಹುಲ್-ಜಡೇಜಾ ಕಮ್ಬ್ಯಾಕ್
ಗಾಯದಿಂದಾಗಿ ಕಳೆದ ಪಂದ್ಯಕ್ಕೆ ಗೈರಾಗಿದ್ದ ಕನ್ನಡಿಗ ಕೆ.ಎಲ್.ರಾಹುಲ್(kl rahul) ಹಾಗೂ ರವೀಂದ್ರ ಜಡೇಜಾ(ravindra jadeja) ಇಬ್ಬರೂ ಚೇತರಿಸಿಕೊಳ್ಳುತ್ತಿದ್ದು, ಸರಣಿಯ ಉಳಿದ ಪಂದ್ಯಗಳಲ್ಲಿ ಆಡುವ ಸಾಧ್ಯತೆಯಿದೆ. ಈಗಾಗಲೇ ಉಭಯ ಆಟಗಾರರು ಬೆಂಗಳೂರಿನ ಎನ್ಸಿಎಯಲ್ಲಿ ಫಿಟ್ನೆಸ್ ತರಬೇತಿ ಪಡೆಯುತ್ತಿದ್ದಾರೆ. ಮೂರನೇ ಪಂದ್ಯಕ್ಕೆ ಇನ್ನೂ ಕೂಡ ಒಂದು ವಾರಗಳ ಕಾಲಾವಕಾಶವಿದೆ. ಈ ವೇಳೆಗೆ ಉಭಯ ಆಟಗಾರರು ಕೂಡ ಫಿಟ್ ಆಗಬಹುದು. 3ನೇ ಪಂದ್ಯ ಫೆ.15ರಿಂದ ರಾಜ್‌ಕೋಟ್‌ನಲ್ಲಿ ಆರಂಭಗೊಳ್ಳಲಿದೆ. ದ್ವಿತೀಯ ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದ ಮೊಹಮ್ಮದ್ ಸಿರಾಜ್ ಕೂಡಾ ತಂಡಕ್ಕೆ ಮರಳುವ ನಿರೀಕ್ಷೆಯಿದೆ.
ಮೊದಲ 2 ಟೆಸ್ಟ್ ಪಂದ್ಯಗಳಲ್ಲಿ ಒಟ್ಟು 57 ಓವರ್ ಬೌಲಿಂಗ್ ಮಾಡಿದ್ದ ಜಸ್ಪ್ರೀತ್ ಬುಮ್ರಾ(Jasprit Bumrah) ಅವರಿಗೆ ಕಾರ್ಯದೊತ್ತಡ ಕಡಿಮೆ ಮಾಡುವ ನಿಟ್ಟಿನಲ್ಲಿ ಬಿಸಿಸಿಐ ಮೂರನೇ ಪಂದ್ಯಕ್ಕೆ ವಿಶ್ರಾಂತಿ ನೀಡಲು ಬಯಸಿದೆ. ಈ ವಿಚಾರ ಈಗಾಗಲೇ ತಿಳಿದುಬಂದಿದೆ. ತಂಡದಲ್ಲಿ ಅವರು ಸ್ಥಾನ ಪಡೆದರೂ ಕೂಡ ಆಡುವ ಬಳಗದಲ್ಲಿ ಕಾಣಿಸಿಕೊಳ್ಳುವುದಿಲ್ಲ. ಆಗ ಬುಮ್ರಾ ಅನುಪಸ್ಥಿತಿಯಲ್ಲಿ ಸಿರಾಜ್ ಅವರು ಬೌಲಿಂಗ್ ಜವಾಬ್ದಾರಿ ನೋಡಿಕೊಳ್ಳಬೇಕಿದೆ.
ಇಂಗ್ಲೆಂಡ್ ಆಟಗಾರರು ಸದ್ಯ ಅಬುಧಾಬಿಯಲ್ಲಿ ವಿಶ್ರಾಂತಿ ಮತ್ತು ತರಬೇತಿ ಪಡೆಯುತ್ತಿದೆ. ದ್ವಿತೀಯ ಟೆಸ್ಟ್ ಪಂದ್ಯ ಮುಕ್ತಾಯ ಕಂಡ ತಕ್ಷಣವೇ ಸ್ಟೋಕ್ಸ್ ಪಡೆ ಅಬುಧಾಬಿಗೆ ವಿಮಾನ ಏರಿತ್ತು. ಭಾರತ ಪ್ರವಾಸಕ್ಕೆ ಬರುವ ಮುನ್ನವೂ ಇಂಗ್ಲೆಂಡ್ ಅಬುಧಾಬಿಯಲ್ಲೇ ತರಬೇತಿ ಶಿಬಿರ ಆಯೋಜಿಸಿತ್ತು