ಮುಂಬಯಿ: ತಮ್ಮ ಹೇಳಿಕೆ ವಿವಾದದ ರೂಪ ಪಡೆಯುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ತಂಡದ ಮಾಜಿ ನಾಯಕ ಜಾವೆದ್ ಮಿಯಾಂದಾದ್ (Asia Cup 2023) ಅವರು, ಭಾರತ ತಂಡ ನರಕಕ್ಕೆ ಹೋಗಲಿ ಎಂದ ಹೇಳಿಯೇ ಇಲ್ಲ ಎಂದು ನುಡಿದಿದ್ದಾರೆ. ಈ ಮೂಲಕ ಕೆಲವೇ ದಿನಗಳಲ್ಲಿ ಅವರು ಯೂಟರ್ನ್ ಹೊಡೆದು ವಿವಾದದಿಂದ ಪಾರಾಗಲು ಯತ್ನಿಸಿದ್ದಾರೆ. ಭಾರತ ತಂಡದ ಏಷ್ಯಾ ಕಪ್ ಆಡುವುದಕ್ಕೆ ಪಾಕಿಸ್ತಾನಕ್ಕೆ ಹೋಗುವುದಿಲ್ಲ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದ ಮಿಯಾಂದಾದ್ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಏಷ್ಯಾ ಕಪ್ 2023 ಟೂರ್ನಿಯನ್ನು ಪಾಕಿಸ್ತಾನದಿಂದ ಹೊರಗೆ ನಡೆಸಲು ಏಷ್ಯಾ ಕ್ರಿಕೆಟ್ ಕೌನ್ಸಿಲ್ ಯೋಜನೆ ರೂಪಿಸುತ್ತಿದೆ. ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳುಹಿಸಲು ಬಿಸಿಸಿಐ ಹಿಂದೇಟು ಹಾಕಿರುವುದೇ ಅದಕ್ಕೆ ಕಾರಣ. ಆದರೆ, ನಮ್ಮ ಆತಿಥ್ಯದ ಟೂರ್ನಿ ನಮ್ಮ ನೆಲದಲ್ಲೇ ನಡೆಯಬೇಕು ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪಟ್ಟು ಹಿಡಿದಿದೆ. ಈ ವಿಚಾರವಾಗಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗರು ಪ್ರಮುಖ ವಾದ ಮಂಡಿಸುತ್ತಿದ್ದಾರೆ. ಈ ಭರದಲ್ಲಿ ಮಿಯಾಂದಾದ್, ಪಾಕಿಸ್ತಾನಕ್ಕೆ ಬರದ ಭಾರತ ತಂಡ ನರಕಕ್ಕೆ ಹೋಗಲಿ ಎಂಬರ್ಥದ ಹೇಳಿಕೆ ಕೊಟ್ಟಿದ್ದರು. ನನ್ನ ಮಾತಿನ ಅರ್ಥ ಅದಲ್ಲ. ಹೇಳಿಕೆಯನ್ನೇ ತಿರುಚಲಾಗಿದೆ ಎಂಬುದಾಗಿ ಅವರೀಗ ಹೇಳಿದ್ದಾರೆ.
ಇದನ್ನೂ ಓದಿ : Asia Cup 2023 : ಭಾರತ ತಂಡಕ್ಕೆ ಸೋಲಿನ ಭಯ, ಅದಕ್ಕೆ ಪಾಕ್ಗೆ ಬರುವುದಿಲ್ಲ ಎಂದ ಮಾಜಿ ನಾಯಕ ಮಿಯಾಂದಾದ್
ನಾನು ಈಗಲೂ ಅದೇ ಮಾತನ್ನು ಹೇಳುತ್ತೇನೆ. ಭಾರತ ತಂಡ ಪಾಕಿಸ್ತಾನಕ್ಕೆ ಬರದೇ ಹೋದರೆ ನಮಗೇನೂ ನಷ್ಟವಿಲ್ಲ. ಇದು ಎರಡೂ ದೇಶಗಳ ಕ್ರಿಕೆಟ್ ತಂಡಗಳ ನಡುವಿನ ಸಮರ. ರಾಜಕೀಯ ಗಲಾಟೆಯಲ್ಲ. ಅವರು ಬರದೇ ಹೋದರೆ ನಾವು ಕಳೆದುಕೊಳ್ಳುವುದೇನೂ ಇಲ್ಲ. ಇಂಥದ್ದನ್ನೆಲ್ಲ ಐಸಿಸಿ ನಿಯಂತ್ರಣ ಮಾಡಬೇಕು. ಹಾಗೆಂದು ಭಾರತ ತಂಡ ನರಕಕ್ಕೆ ಹೋಗಲಿ ಎಂದು ನಾನು ಹೇಳಿಲ್ಲ. ಈ ವಿಚಾರದಲ್ಲಿ ನನ್ನ ಹೇಳಿಕೆಯನ್ನೇ ತಿರುಚಲಾಗಿದೆ ಎಂದು ಹೇಳಿದ್ದಾರೆ.