ಹೈದರಾಬಾದ್: ಟಿ೨೦ ವಿಶ್ವ ಕಪ್ ಟೂನಿಯಲ್ಲಿ (IND-PAK) ಭಾರತ ಮತ್ತು ಪಾಕಿಸ್ತಾನ ತಂಡ ನಾಳೆ ಮೆಲ್ಬೋರ್ನ್ ಅಂಗಳದಲ್ಲಿ ಮುಖಾಮುಖಿಯಾಗಲಿದೆ. ಹೈವೋಲ್ಟೇಜ್ ಪಂದ್ಯಕ್ಕಾಗಿ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ. ಏತನ್ಮಧ್ಯೆ, ಎಐಎಂಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸಾದುದ್ದೀನ್ ಓವೈಸಿ (Asaduddin Owaisi) ಪಾಕಿಸ್ತಾನ ವಿರುದ್ಧ ಭಾರತ ತಂಡ ಆಡಬಾರದು ಎಂದು ಹೇಳಿದ್ದಾರೆ. ಅಂದರೆ ಅವರು ಆ ಪಂದ್ಯಕ್ಕೆ ವಿರೋಧ ವ್ಯಕ್ತಪಡಿಸುತ್ತಿಲ್ಲ. ಬದಲಾಗಿ ಬಿಸಿಸಿಐ ತಂತ್ರವನ್ನು ಆಕ್ಷೇಪಿಸಿದ್ದಾರೆ.
ಪಕ್ಷದ ಸಭೆಯೊಂದರಲ್ಲಿ ಮಾತನಾಡಿದ ಅಸಾದುದ್ದೀನ್, ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾಕಪ್ಗೆ ಭಾರತ ತಂಡವನ್ನು ಕಳುಹಿಸಲು ಬಿಸಿಸಿಐ ಸಿದ್ಧವಿಲ್ಲ ಎಂದ ಮೇಲೆ, ನಾಳೆ ಪಾಕಿಸ್ತಾನ ವಿರುದ್ಧದ ವಿಶ್ವ ಕಪ್ ಪಂದ್ಯದಲ್ಲಿ ಪಾಲ್ಗೊಳ್ಳುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.
“ಭಾರತ ತಂಡ ಪಾಕಿಸ್ತಾನದಲ್ಲಿ ಮುಂದಿನ ವರ್ಷ ನಡೆಯಲಿರುವ ಏಷ್ಯಾ ಕಪ್ ಆಡಲು ಹೋಗುವುದಿಲ್ಲ, ಆದರೆ ಆಸ್ಟ್ರೇಲಿಯಾದಲ್ಲಿ ನಡೆಯುವ ಟಿ೨೦ ವಿಶ್ವ ಕಪ್‌ನಲ್ಲಿ ಪಾಕ್ ವಿರುದ್ಧ ಪಂದ್ಯ ಆಡುತ್ತದೆ. ಏಕೆಂದರೆ ಟೀಮ್ ಇಂಡಿಯಾ ಒಂದು ವೇಳೆ ಭಾನುವಾರದ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಕಣಕ್ಕಿಳಿಯದಿದ್ದರೆ ಬಿಸಿಸಿಐಗೆ 2 ಸಾವಿರ ಕೋಟಿ ರೂ. ನಷ್ಟವಾಗುತ್ತದೆ. ಹೀಗಾಗಿ ಆಡಿಸುತ್ತಿದ್ದಾರೆ. ಹಾಗಾದರೆ ಈ ಹಣ ಭಾರತಕ್ಕಿಂತ ಮುಖ್ಯವೇ?” ಎಂದು ಓವೈಸಿ, ಬಿಸಿಸಿಐ ವಿರುದ್ಧ ಕಿಡಿಕಾರಿದ್ದಾರೆ.
“ನಾಳೆ ನಡೆಯುವ ಪಂದ್ಯದಲ್ಲಿ ಗೆಲುವು ಯಾರ ಪಾಲಾಗಲಿದೆ ಎಂದು ನನಗೆ ತಿಳಿದಿಲ್ಲ. ಆದರೆ ಭಾರತ ತಂಡ ಗೆಲ್ಲಬೇಕು. ನಮ್ಮ ಹುಡುಗರಾದ ಮೊಹಮ್ಮದ್ ಶಮಿ ಮತ್ತು ಮೊಹಮ್ಮದ್ ಸಿರಾಜ್ ತಂಡದ ಗೆಲುವಿಗೆ ಶಕ್ತಿ ಮೀರಿ ಪ್ರಯತ್ನಿಸಬೇಕಿದೆ. ಭಾರತ ಈ ಪಂದ್ಯದಲ್ಲಿ ಗೆದ್ದರೆ ಇಡೀ ದೇಶವೆ ಸಂಭ್ರಮಿಸುತ್ತದೆ. ಒಂದೊಮ್ಮೆ ಭಾರತ ಸೋತರೆ ಆಗ ಜನ, ತಂಡದಲ್ಲಿರುವ ಮುಸ್ಲಿಂ ಆಟಗಾರರತ್ತ ಕೈ ತೋರಿಸಿ ಪದೇಪದೆ ಟ್ರೋಲ್ ಮಾಡುತ್ತಾರೆ. ಇದು ಸಲ್ಲದು. ತಂಡದ ಗೆಲುವಿನಲ್ಲಿ ಮುಸ್ಲಿಂ ಆಟಗಾರರ ಪಾತ್ರ ಪ್ರಧಾನವಾದಾಗ ಯಾರು ಈ ಆಟಗಾರರನ್ನು ಗುರುತಿಸುವುದಿಲ್ಲ. ನಮ್ಮ ಹಿಜಾಬ್, ಗಡ್ಡ ಮತ್ತು ಕ್ರಿಕೆಟ್‌ನಲ್ಲೂ ನಿಮಗೆ ಸಮಸ್ಯೆ ಇದೆ. ಕ್ರಿಕೆಟ್ ಒಂದು ಆಟವಾಗಿದ್ದು ಇಲ್ಲಿ ಸೋಲು ಮತ್ತು ಗೆಲುವು ಸಹಜ ಎಂದಿದ್ದಾರೆ. ಇದೀಗ ಓವೈಸಿ ಅವರ ಈ ಹೇಳಿಕೆ ಹೊಸ ವಿವಾದವೊಂದನ್ನು ಹುಟ್ಟುಹಾಕಿದೆ.
ಕಳೆದ ಮಂಗಳವಾರ ನಡೆದ ಬಿಸಿಸಿಐ ವಾರ್ಷಿಕ ಮಹಾಸಭೆಯ ಬಳಿಕ ಕಾರ್ಯದರ್ಶಿ ಜಯ್ ಶಾ ಮುಂದಿನ ವರ್ಷ ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯುವ ಏಷ್ಯಾ ಕಪ್‌ನಲ್ಲ ಪಾಲ್ಗೊಳ್ಳಲು ಭಾರತ ತಂಡ ಅಲ್ಲಿಗೆ ಹೋಗುವುದಿಲ್ಲ. ಟೂರ್ನಿ ತಟಸ್ಥ ಜಾಗದಲ್ಲಿ ನಡೆಯಲಿದೆ ಎಂದು ಹೇಳಿದ್ದರು. ಇದು ಪರ-ವಿರೋಧ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ | IND-PAK | ಪಾಕಿಸ್ತಾನ ವಿರುದ್ಧ ಭಾರತ ತಂಡದ ಡಜನ್ ಗೆಲುವು ಸಾಧನೆ