Site icon Vistara News

ind vs wi : ವಿಂಡೀಸ್ ವಿರುದ್ಧದ ಸರಣಿಗೆ ಅಭ್ಯಾಸ ಆರಂಭಿಸಿದ ಟೀಮ್​ ಇಂಡಿಯಾ

Team India

ಬಾರ್ಬಡೋಸ್​: ವೆಸ್ಟ್ ಇಂಡೀಸ್ (ind vs wi) ವಿರುದ್ಧದ ಎರಡು ಪಂದ್ಯಗಳ ಟೆಸ್ಟ್ ಸರಣಿಗಾಗಿ ಆಯ್ಕೆಯಾಗಿರುವ ಭಾರತ ತಂಡದ ಸದಸ್ಯರೆಲ್ಲರೂ ಸೋಮವಾರ ವೆಸ್ಟ್​ ಇಂಡೀಸ್​ನ ಬಾರ್ಬಡೋಸ್ ತಲುಪಿದ್ದಾರೆ. ನಾನಾ ಹಂತದಲ್ಲಿ ಹಾಗೂ ವಿವಿಧ ಪ್ರದೇಶಗಳಿಂದ ಹೊರಟಿದ್ದ ಆಟಗಾರರಿಗೆ ಜುಲೈ 3ರಂದು ಬಾರ್ಬಡೋಸ್ ತಲುಪುವಂತೆ ಬಿಸಿಸಿಐ ಗಡುವು ನೀಡಿತ್ತು. ಹೀಗಾಗಿ ಎಲ್ಲರೂ ಬಾರ್ಬಡೋಸ್​ನಲ್ಲಿ ಸೇರಿಕೊಂಡು ಅಭ್ಯಾಸ ಆರಂಭಿಸಿದ್ದಾರೆ.

ರೋಹಿತ್ ಶರ್ಮಾ, ರವೀಂದ್ರ ಜಡೇಜಾ ಮತ್ತು ಯಶಸ್ವಿ ಜೈಸ್ವಾಲ್ ಸೇರಿದಂತೆ ಆಟಗಾರರು ಬೇರೆಬೇರೆ ವಿಮಾನದ ಮೂಲಕ ಕೆರಿಬಿಯನ್ ದ್ವೀಪ ತಲುಪಿದ್ದರು. ವಿರಾಟ್ ಕೊಹ್ಲಿ ಲಂಡನ್​ನಿಂದ ನೇರವಾಗಿ ತಂಡವನ್ನು ಸೇರಿಕೊಂಡಿದ್ದಾರೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟೆಸ್ಟ್ ಸರಣಿ ಜುಲೈ 12ರಿಂದ ಆರಂಭವಾಗಲಿದ್ದು, ಅದಕ್ಕೂ ಮೊದಲು ತಂಡವು ಎರಡು ಅಭ್ಯಾಸ ಪಂದ್ಯಗಳು ಸೇರಿದಂತೆ ಒಂದು ವಾರದ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.

ಬಾರ್ಬಡೋಸ್​ನಲ್ಲಿ ಸಹಾಯಕ ಸಿಬ್ಬಂದಿಯನ್ನು ಸೇರಿಕೊಂಡ ತಕ್ಷಣ ಆಟಗಾರರು ಅಭ್ಯಾಸ ಆರಂಭಿಸಬೇಕು ಎಂದು ಬಿಸಿಸಿಐ ಸೂಚನೆ ಕೊಟ್ಟಿತ್ತು. ಅಂತೆಯೇ ಸ್ಟ್ರೆಂಥ್​ ಆ್ಯಂಡ ಕಂಡೀಷನಿಂಗ್​ ಕೋಚ್​ಗಳ ಮೂಲಕ ಆಟಗಾರರು ಅಭ್ಯಾಸ ಶುರು ಮಾಡಿದ್ದಾರೆ. ಮೊದಲಾಗಿ ಅವರು ಬೀಚ್​ನಲ್ಲಿ ವಾಲಿಬಾಲ್ ಆಡಿದ್ದಾರೆ.

ವಿರಾಟ್ ಕೊಹ್ಲಿ ಕೊನೆಯದಾಗಿ ಟೀಮ್​ ಇಂಡಿಯಾ ಸೇರಿಕೊಂಡಿದ್ದು ಅವರು ಕೂಡ ಅಭ್ಯಾಸ ಆರಂಭಿಸಿದ್ದಾರೆ. ಜುಲೈ 6ರಂದು ಭಾರತ ಸ್ಥಳೀಯ ತಂಡದ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಆದಾಗ್ಯೂ, ಆ ಪಂದ್ಯವು ಪ್ರಥಮ ದರ್ಜೆ ಸ್ಥಾನಮಾನ ಹೊಂದಿರುವುದಿಲ್ಲ. ಫಸ್ಟ್ ಕ್ಲಾಸ್ ಪಂದ್ಯಗಳಿಗಾಗಿ ಟೀಮ್ ಮ್ಯಾನೇಜ್ಮೆಂಟ್ ಕ್ರಿಕೆಟ್ ವೆಸ್ಟ್ ಇಂಡೀಸ್​ಗೆ ವಿನಂತಿ ಮಾಡಿತ್ತು. ಆದರೆ, ಅಲ್ಲಿಂದ ಪ್ರತಿಕ್ರಿಯೆ ಬರದ ಕಾರಣ ಮಿಶ್ರ ತಂಡವಾಗಿ ಅಭ್ಯಾಸ ಪಂದ್ಯ ಅಯೋಜಿಸಿದೆ. ಸ್ಥಳೀಯ ಕೆಲವು ಆಟಗಾರರು ಅಭ್ಯಾಸ ಪಂದ್ಯಗಳಿಗಾಗಿ ಭಾರತೀಯ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಇದನ್ನೂ ಓದಿ : Ashes 2023 : ಖವಾಜ, ವಾರ್ನರ್​ಗೆ ಅವಮಾನ; ಎಂಸಿಸಿಯ ಮೂವರು ಸದಸ್ಯರು ಅಮಾನತು

ವೆಸ್ಟ್ ಇಂಡೀಸ್ ತಂಡವು ಆಂಟಿಗುವಾದಲ್ಲಿ ಕೂಲಿಡ್ಜ್ ಕ್ರಿಕೆಟ್ ಗ್ರೌಂಡ್​​ನ ಹೈ ಪರ್ಫಾರ್ಮೆನ್ಸ್ ಸೆಂಟರ್​ನಲ್ಲಿ ತಮ್ಮ ಶಿಬಿರವನ್ನು ನಡೆಸಲಿದೆ. ಟೆಸ್ಟ್ ಗೆ ಮುಂಚಿತವಾಗಿ ಅವರು ಡೊಮಿನಿಕಾಗೆ ಪ್ರಯಾಣಿಸಲಿದ್ದಾರೆ. ಟೆಸ್ಟ್ ಸ್ಪೆಷಲಿಸ್ಟ್ ಗಳನ್ನು ಹೊರತುಪಡಿಸಿ, ವಿಶ್ವಕಪ್ 2023ರ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಕೆಲವು ಬಹು ಸ್ವರೂಪದ ಆಟಗಾರರು ನೇರವಾಗಿ ಡೊಮಿನಿಕಾ ತಲುಪಲಿದ್ದಾರೆ.

ಟೆಸ್ಟ್‌ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.

Exit mobile version