ಬರ್ಮಿಂಗ್‌ಹ್ಯಾಮ್ : ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಸಂಭ್ರಮದ ಸುದ್ದಿಯೊಂದಿದೆ. ಮುಂದಿನ ಮೂರು ವರ್ಷಗಳಲ್ಲಿ ಭಾರತದಲ್ಲಿ ಎರಡು ವಿಶ್ವ ಕಪ್ ಕ್ರಿಕೆಟ್ ಟೂರ್ನಿಗಳು ನಡೆಯಲಿದ್ದು, ಜಿದ್ದಾಜಿದ್ದಿನ ಹೋರಾಟಗಳಿಗೆ ಸಾಕ್ಷಿಯಾಗುವ ಅವಕಾಶ ಲಭಿಸಿದೆ. ಈಗಾಗಲೇ ನಿಗದಿಯಾಗಿರುವಂತೆ ೨೦೨೩ರ ಪುರುಷರ ಏಕದಿನ ವಿಶ್ವ ಕಪ್ ICC cricket world Cup ಭಾರತದಲ್ಲಿ ನಡೆಯಿಲಿದೆ. ಅದಾದ ಎರಡೇ ವರ್ಷದಲ್ಲಿ ಮಹಿಳೆಯ ವಿಶ್ವ ಕಪ್ ಕೂಡ ಭಾರತದಲ್ಲೇ ನಡೆಯಲಿದೆ. ಮಂಗಳವಾರ ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಈ ತೀರ್ಮಾನ ಪ್ರಕಟವಾಗಿದೆ.
ಭಾರತದಲ್ಲಿ ನಡೆಯಲಿರುವುದು ಏಕದಿನ ಪಂದ್ಯಗಳ ವಿಶ್ವ ಕಪ್. ಇದೇ ವೇಳೆ ಇನ್ನೂ ಮೂರು ಐಸಿಸಿ ಮಹಿಳೆಯ ಕ್ರಿಕೆಟ್ ಟೂರ್ನಿಗಳನ್ನು ಘೋಷಿಸಲಾಗಿದೆ. ೨೦೨೪ರ ಮಹಿಳೆಯರ ಟಿ೨೦ ವಿಶ್ವ ಕಪ್‌ಗೆ ಬಾಂಗ್ಲಾದೇಶ ಆತಿಥ್ಯ ವಹಿಸಲಿದ್ದು, ೨೦೨೬ರ ಟಿ೨೦ ವಿಶ್ವ ಕಪ್ ಆಯೋಜನೆ ಹಕ್ಕು ಇಂಗ್ಲೆಂಡ್‌ಗೆ ಲಭಿಸಿದೆ. ಅದೇ ರೀತಿ ೨೦೨೭ರ ಟಿ೨೦ ಚಾಂಪಿಯನ್ಸ್ ಟ್ರೋಫಿ ಆತಿಥ್ಯ ಶ್ರೀಲಂಕಾ ಪಾಲಾಗಿದೆ.
ರಷ್ಯಾದ ಸದಸ್ಯತ್ವ ರದ್ದು
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆದ ಸಭೆಯಲ್ಲಿ ರಷ್ಯಾ ಕ್ರಿಕೆಟ್ ಸಂಸ್ಥೆಯ ಸದಸ್ಯತ್ವವನ್ನೂ ರದ್ದುಮಾಡಲಾಗಿತು. ೨೦೨೧ರಿಂದ ರಷ್ಯಾ ಕ್ರಿಕೆಟ್ ಸಂಸ್ಥೆಯು ಐಸಿಸಿಯ ಸದಸ್ಯತ್ವ ನಿಯಮಾವಳಿಗಳನ್ನು ಪೂರೈಸಿಲ್ಲ. ಹೀಗಾಗಿ ಸದಸ್ಯತ್ವ ರದ್ದು ಮಾಡಲು ಸಭೆಯಲ್ಲಿ ತೀರ್ಮಾನ ಪ್ರಕಟಿಸಲಾಯಿತು.
ಇದೇ ವೇಳೆ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದ ಉಕ್ರೇನ್ ಕ್ರಿಕೆಟ್ ಸಂಸ್ಥೆಯ ಅರ್ಜಿಯನ್ನೂ ತಿರಸ್ಕರಿಸಲಾಯಿತು. ಆ ದೇಶದಲ್ಲಿ ಸುರಕ್ಷಿತ ವಾತಾವರಣ ಸೃಷ್ಟಿಯಾಗುವ ತನಕ ಅರ್ಜಿಯನ್ನು ಪರಿಗಣಿಸದೇ ಇರುವುದು ಐಸಿಸಿಯ ತೀರ್ಮಾನ.
ಇದೇ ಸಭೆಯಲ್ಲಿ ವಿವಿಎಸ್ ಲಕ್ಷ್ಮಣ್ ಅವರನ್ನು ಐಸಿಸಿ ಕ್ರಿಕೆಟ್ ಸಮಿತಿಗೆ ನೇಮಕ ಮಾಡಲಾಗಿದೆ. ಅವರು ಹಾಲಿ ಆಟಗಾರರನ್ನು ಪ್ರತಿನಿಧಿಸಲಿದ್ದಾರೆ. ನ್ಯೂಜಿಲೆಂಡ್‌ನ ಮಾಜಿ ಸ್ಪಿನ್ನರ್ ಡೇನಿಯಲ್ ವೆಟೋರಿ ಹಾಗೂ ರೋಜರ್ ಹಾರ್ಪರ್ ಜತೆ ಲಕ್ಷ್ಮಣ್ ಕೆಲಸ ಮಾಡಲಿದ್ದಾರೆ.
ನವೆಂಬರ್‌ನಲ್ಲಿ ಐಸಿಸಿಗೆ ಹೊಸ ಅಧ್ಯಕ್ಷ
ಮುಂದಿನ ನವೆಂಬರ್‌ನಲ್ಲಿ ಐಸಿಸಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಲು ಸಭೆಯಲ್ಲಿ ತೀರ್ಮಾನ ಪ್ರಕಟಿಸಲಾಯಿತು. ಸಭೆಯಲ್ಲಿ ಸರಳ ಬಹುಮತ ಪಡೆದವರು ಅಧ್ಯಕ್ಷರಾಗಲಿದ್ದಾರೆ. ಕಳೆದ ಬಾರಿ ಮೂರನೇ ಎರಡು ಭಾಗ ಬೆಂಬಲ ಬೇಕಾಗಿತ್ತು.
ಇದನ್ನೂ ಓದಿ | ICC ಪುರುಷರ ಕ್ರಿಕೆಟ್ ಸಮಿತಿಗೆ ಲಕ್ಷ್ಮಣ್ ನೇಮಕ