Site icon Vistara News

Team India ಜಿಂಬಾಬ್ವೆ ಪ್ರವಾಸ ಯಾವಾಗ?

team India

ಮುಂಬಯಿ: ಅಂತಾರಾಷ್ಟ್ರೀಯ ಪಂದ್ಯಗಳು ಹಾಗೂ ಲೀಗ್‌ ಕ್ರಿಕೆಟ್‌ಗಳ ನಡುವೆ ಕ್ರಿಕೆಟ್‌ ಕ್ಷೇತ್ರ ಸಿಕ್ಕಾಪಟ್ಟೆ ಬ್ಯುಸಿಯಾಗಿದೆ. ಎಷ್ಟೆಂದರೆ, ತಂಡವೊಂದು ತಿಂಗಳೊಂದರಲ್ಲಿ ಎರಡ್ಮೂರು ಸರಣಿಗಳಲ್ಲಿ ಪಾಲ್ಗೊಳ್ಳುತ್ತವೆ. Team India ಕೂಡ ಅದೇ ರೀತಿ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದು, ಏಷ್ಯಾ ಕಪ್‌ಗಿಂತ ಮೊದಲು ನಾಲ್ಕು ದಿನಗಳ ಜಿಂಬಾಬ್ವೆ ಪ್ರವಾಸವನ್ನೂ ಮಾಡಲಿದೆ.

ಕ್ರಿಕ್‌ಬಜ್‌ ಮಾಹಿತಿ ನೀಡಿರುವ ಪ್ರಕಾರ, ಆಗಸ್ಟ್‌ ೧೮ರಂದು ಮೊದಲ ಪಂದ್ಯ ನಡೆಯಲಿದ್ದು, ೨೦ ಹಾಗೂ ೨೨ರಂದು ಮುಂದಿನೆರಡು ಪಂದ್ಯಗಳು ನಡೆಯಲಿವೆ. ಇದು ಐಸಿಸಿ ಒನ್‌ಡೇ ಸೂಪರ್‌ ಲೀಗ್‌ನ ಭಾಗವಾಗಿದೆ. ಜತೆಗೆ ಜಿಂಬಾಬ್ವೆ ತಂಡಕ್ಕೆ ಮುಂದಿನ ಏಕದಿನ ವಿಶ್ವ ಕಪ್‌ಗೆ ಅರ್ಹತೆ ಗಳಿಸಲು ಈ ಸರಣಿಯ ಅಂಕಗಳೂ ನೆರವಾಗಲಿವೆ.

ಜಿಂಬಾಬ್ವೆ ಸ್ವಾಗತ

Team India ಜಿಂಬಾಬ್ವೆ ಪ್ರವಾಸ ಕೈಗೊಳ್ಳಲು ಮುಂದಾಗಿರುವುದಕ್ಕೆ ಅಲ್ಲಿನ ಕ್ರಿಕೆಟ್‌ ಸಂಸ್ಥೆ ಸಂತಸ ವ್ಯಕ್ತಪಡಿಸಿದೆ. ಪ್ರಮುಖವಾಗಿ ತಂಡದ ತಾಂತ್ರಿಕ ವಿಭಾಗದ ಅಧಿಕಾರಿ ಹಾಗೂ ಮಾಜಿ ಕೋಚ್‌ ಲಾಲ್‌ಚಂದ್‌ ರಜಪೂತ್‌ ಅವರು, “ನಮ್ಮ ತಂಡದ ಆಟಗಾರರಿಗೆ ಇದೊಂದು ಸದವಕಾಶ. ಭಾರತ ತಂಡವನ್ನು ಎದುರಿಸುವ ಮೂಲಕ ಆಟಗಾರರಿಗೆ ಪ್ರದರ್ಶನ ಸುಧಾರಣೆಯ ಅವಕಾಶ ದೊರೆಯಲಿದೆ,ʼʼ ಎಂದು ಹೇಳಿದ್ದಾರೆ.

ಭಾರತ ತಂಡ ಜಿಂಬಾಬ್ವೆಗೆ ಪ್ರವಾಸ ಮಾಡದೇ ೬ ವರ್ಷಗಳು ಆಯಿತು. ಕಳೆದ ಬಾರಿ ಹೋದಾಗ ಮಹೇಂದ್ರ ಸಿಂಗ್‌ ಧೋನಿ ತಂಡದ ನಾಯಕರಾಗಿದ್ದರು. ಆ ವೇಳೆ ತಲಾ ೨ ಟಿ೨೦ ಹಾಗೂ ಏಕದಿನ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಂಡಿತ್ತು. ಈ ಬಾರಿ ಕೇವಲ ಏಕದಿನ ಸರಣಿಯಲ್ಲಿ ಮಾತ್ರ ಪಾಲ್ಗೊಳ್ಳಲಿದೆ.

ಭಾರತ ತಂಡ ಬ್ಯುಸಿ

ಭಾರತ ತಂಡ ಸದ್ಯ ಇಂಗ್ಲೆಂಡ್‌ನಲ್ಲಿದೆ. ಟಿ೨೦ ಸರಣಿಯ ಮೊದಲ ಪಂದ್ಯ ನಡೆದಿದ್ದು, ಇನ್ನೆರಡು ಪಂದ್ಯಗಳು ನಡೆಯಬೇಕಾಗಿದೆ. ಬಳಿಕ ಮೂರು ಪಂದ್ಯಗಳ ಏಕ ದಿನ ಸರಣಿಯಲ್ಲಿ ಆಡಬೇಕಾಗಿದೆ. ಅದಾದ ಬಳಿಕ ಬಳಿಕ ವೆಸ್ಟ್‌ ಇಂಡೀಸ್‌ಗೆ ತೆರಳಲಿದ್ದು, ಜುಲೈ ೨೨ರಿಂದ ಆಗಸ್ಟ್‌ ೭ರವರೆಗೆ ಮೂರು ಏಕದಿನ ಪಂದ್ಯಗಳು ಹಾಗೂ ಐದು ಟಿ೨೦ ಪಂದ್ಯಗಳ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಅದಾದ ತಕ್ಷಣವೇ ಜಿಂಬಾಬ್ವೆ ಪ್ರವಾಸ ಮುಗಿಸಿ ಆಗಸ್ಟ್‌ ೨೭ರಿಂದ ಏಷ್ಯಾ ಕಪ್‌ಗಾಗಿ ಶ್ರೀಲಂಕಾಗೆ ಪ್ರವಾಸ ಮಾಡಲಿದೆ.

ಹರಾರೆಯಲ್ಲಿ ಎಲ್ಲ ಪಂದ್ಯಗಳು

ಭಾರತ ತಂಡ ಜಿಂಬಾಬ್ವೆ ರಾಜಧಾನಿ ಹರಾರೆಯಲ್ಲಿ ಆಗಸ್ಟ್‌ ೧೫ರಂದು ಇಳಿಯಲಿದೆ. ಎಲ್ಲ ಪಂದ್ಯಗಳೂ ಅಲ್ಲಿಯೇ ನಡೆಯಲಿವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Practice Match : ಇಂಗ್ಲೆಂಡ್‌ನಲ್ಲಿ ಬೌಲರ್‌ಗಳದ್ದೇ ಕಾರುಬಾರು

Exit mobile version