ಲಕ್ನೋ: ಹಾಲಿ ಚಾಂಪಿಯನ್ ಇಂಗ್ಲೆಂಡ್(IND vs ENG) ವಿರುದ್ಧ ಭಾನುವಾರ ನಡೆದ ವಿಶ್ವಕಪ್ನ 29ನೇ ಪಂದ್ಯದಲ್ಲಿ ಭರ್ಜರಿ 100 ರನ್ಗಳ ಗೆಲುವು ಸಾಧಿಸಿದ ಭಾರತ ಆಡಿದ ಆರೂ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಿ 12 ಅಂಕದೊಂದಿಗೆ ಅಂಕ ಪಟ್ಟಿಯಲ್ಲಿ(Cricket World Cup Points Table) ಮತ್ತೆ ನಂ.1 ಸ್ಥಾನಕ್ಕೇರಿದೆ. ಇದಕ್ಕೂ ಮುನ್ನ ಅಗ್ರಸ್ಥಾನದಲ್ಲಿದ್ದ ದಕ್ಷಿಣ ಆಫ್ರಿಕಾ ದ್ವಿತೀಯ ಸ್ಥಾನಕ್ಕೇರಿದೆ. ಸೋಲು ಕಂಡ ಇಂಗ್ಲೆಂಡ್ ಕೊನೆಯ ಸ್ಥಾನದಲ್ಲೇ ಉಳಿದು ಟೂರ್ನಿಯಿಂದ ಹೊರಬಿದ್ದಿದೆ.
ಸದ್ಯ ಭಾರತ 6 ಪಂದ್ಯಗಳಲ್ಲಿ 6ನ್ನೂ ಗೆದ್ದು +1.405 ರನ್ ರೇಟ್ನೊಂದಿಗೆ ಮೊದಲ ಸ್ಥಾನ ಪಡೆದಿದೆ. ಭಾರತ ಮುಂದಿನ ಪಂದ್ಯವನ್ನು ಶ್ರೀಲಂಕಾ ವಿರುದ್ಧ ನವೆಂಬರ್ 2ರಂದು ಆಡಲಿದೆ. ಈ ಪಂದ್ಯವನ್ನೂ ಗೆದ್ದರೆ ಅಧಿಕೃತವಾಗಿ ಸೆಮಿಫೈನಲ್ ಪ್ರವೇಶ ಪಡೆಯಲಿದೆ.
ಇದನ್ನೂ ಓದಿ Rohit Sharma: ಅರ್ಧಶತಕ ಬಾರಿಸಿ 2 ದಾಖಲೆ ಬರೆದ ರೋಹಿತ್ ಶರ್ಮ
ಭಾರತದ ಪಂದ್ಯಕ್ಕೂ ಮುನ್ನ ದಕ್ಷಿಣ ಆಫ್ರಿಕಾ ತಂಡ ನ್ಯೂಜಿಲ್ಯಾಂಡ್ ವಿರುದ್ಧ ಆಡಲಿದೆ. ಈ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಗೆದ್ದರೆ ಮತ್ತೆ ನಂ.1ಸ್ಥಾನಕ್ಕೇರಲಿದೆ. ಆಗ ಭಾರತ ದ್ವಿತೀಯ ಸ್ಥಾನಕ್ಕೆ ಜಾರಲಿದೆ. ದಕ್ಷಿಣ ಆಫ್ರಿಕಾ, ಭಾರತಕ್ಕಿಂತ ಒಂದು ಪಂದ್ಯ ಕಡಿಮೆ ಗೆದ್ದಿದ್ದರೂ ರನ್ ರೇಟ್ ಉತ್ತಮವಾಗಿರುವುದರಿಂದ ಈ ಲಾಭ ಪಡೆಯಲಿದೆ. ಕಿವೀಸ್ ಗೆದ್ದರೆ ಭಾರತದ ಅಗ್ರಸ್ಥಾನ ಭದ್ರವಾಗಲಿದೆ. ಉತ್ತಮ ರನ್ ರೇಟ್ ಹೊಂದಿದ್ದರೆ ಕಿವೀಸ್ ಮೂರನೇ ಸ್ಥಾನದಿಂದ 2ನೇ ಸ್ಥಾನಕ್ಕೂ ಏರಬಹುದು. 6ರಲ್ಲಿ 4 ಪಂದ್ಯ ಗೆದ್ದ ಆಸ್ಟ್ರೇಲಿಯಾ ನಾಲ್ಕನೇ ಸ್ಥಾನದಲ್ಲಿದೆ.
ಇದನ್ನೂ ಓದಿ 20 ವರ್ಷಗಳ ಬಳಿಕ ಆಂಗ್ಲರನ್ನು ಸದೆಬಡಿದ ಭಾರತ; ಸೆಮಿ ಟಿಕೆಟ್ ಬಹುತೇಕ ಖಚಿತ
ನೂತನ ಅಂಕಪಟ್ಟಿ ಹೀಗಿದೆ
ತಂಡ | ಪಂದ್ಯ | ಗೆಲುವು | ಸೋಲು | ಅಂಕ | ನೆಟ್ ರನ್ರೇಟ್ |
ಭಾರತ | 6 | 6 | 0 | 12 | +1.405 |
ದಕ್ಷಿಣ ಆಫ್ರಿಕಾ | 6 | 5 | 1 | 10 | +2.032 |
ನ್ಯೂಜಿಲ್ಯಾಂಡ್ | 6 | 4 | 2 | 8 | +1.232 |
ಆಸ್ಟ್ರೇಲಿಯಾ | 6 | 4 | 2 | 8 | +0.970 |
ಶ್ರೀಲಂಕಾ | 5 | 2 | 3 | 4 | -0.205 |
ಪಾಕಿಸ್ತಾನ | 6 | 2 | 4 | 4 | -0.387 |
ಅಫಘಾನಿಸ್ತಾನ | 5 | 2 | 3 | 4 | -0.969 |
ನೆದರ್ಲ್ಯಾಂಡ್ಸ್ | 6 | 2 | 4 | 4 | -1.277 |
ಬಾಂಗ್ಲಾದೇಶ | 6 | 1 | 5 | 2 | -1.338 |
ಇಂಗ್ಲೆಂಡ್ | 6 | 1 | 5 | 2 | -1.652 |
100 ರನ್ ಅಂತರದಲ್ಲಿ ಗೆದ್ದ ಭಾರತ
ಲಕ್ನೋದ ಭಾರತ ರತ್ನ ಶ್ರೀ ಅಟಲ್ ಬಿಹಾರಿ ವಾಜಪೇಯಿ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಭಾರತ ರೋಹಿತ್ ಮತ್ತು ಸೂರ್ಯಕುಮಾರ್ ಅವರ ಬ್ಯಾಟಿಂಗ್ ಸಾಹಸದಿಂದ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ನಷ್ಟಕ್ಕೆ 229 ರನ್ ಗಳಿಸಿತು. ಸಣ್ಣ ಮೊತ್ತಕ್ಕೆ ಭಾರತವನ್ನು ಕಟ್ಟಿಹಾಕಿದ ಜೋಶ್ನಲ್ಲಿ ಗುರಿ ಬೆನ್ನಟ್ಟಲಾರಂಭಿಸಿದ ಇಂಗ್ಲೆಂಡ್ ಉತ್ತಮ ಆರಂಭ ಪಡೆದರೂ ಆ ಬಳಿಕ ನಾಟಕೀಯ ಕುಸಿತ ಕಂಡು 34.5 ಓವರ್ಗಳಲ್ಲಿ 129 ರನ್ಗೆ ಸರ್ವಪತನ ಕಂಡು ಹೀನಾಯ ಸೋಲು ಕಂಡಿತು. ಘಾತಕ ಬೌಲಿಂಗ್ ದಾಳಿ ನಡೆಸಿ 22 ರನ್ ವೆಚ್ಚದಲ್ಲಿ 4 ವಿಕೆಟ್ ಕಿತ್ತ ಮೊಹಮ್ಮದ್ ಶಮಿ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಜಸ್ಪ್ರೀತ್ ಬುಮ್ರಾ ಮೂರು ವಿಕೆಟ್ ಪಡೆದರು. ಭಾರತ ಭರ್ತಿ 100ರನ್ ಅಂತರದ ಗೆಲುವು ಸಾಧಿಸಿತು.