Site icon Vistara News

U19 World Cup: ಕಣ್ಣೀರಿಟ್ಟ ದಕ್ಷಿಣ ಆಫ್ರಿಕಾ ನಾಯಕನನ್ನು ಸಂತೈಸಿದ ಟೀಮ್​ ಇಂಡಿಯಾ ನಾಯಕ

India U19 Captain

ಬೆನೋನಿ (ದಕ್ಷಿಣ ಆಫ್ರಿಕಾ): ಮಂಗಳವಾರ ನಡೆದ ಅಂಡರ್‌-19 ವಿಶ್ವಕಪ್‌(U19 World Cup) ಸೆಮಿಫೈನಲ್​ ಪಂದ್ಯದಲ್ಲಿ ಭಾರತ(India U19 vs South Africa U19 Semi-Final 1) ವಿರುದ್ಧ ಸೋಲು ಕಂಡ ಬೇಸರದಲ್ಲಿ ದಕ್ಷಿಣ ಆಫ್ರಿಕಾ ಆಟಗಾರರು ಕಣ್ಣೀರು ಸುರಿಸಿದರು. ಈ ವೇಳೆ ಭಾರತ ತಂಡದ ನಾಯಕ ಉದಯ್‌ ಸಹಾರಣ್‌(Uday Saharan) ತೋರಿದ ಕ್ರೀಡಾ ಸ್ಪೂರ್ತಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಸೋಲಿನ ಹತಾಶೆಯಲ್ಲಿದ್ದ ಎದುರಾಳಿ ತಂಡದ ನಾಯಕ ಜುವಾನ್ ಜೇಮ್ಸ್(Juan James) ಅವರನ್ನು ಸಹಾರಣ್‌ ಆಲಿಂಗಿಸಿ, ಬೆನ್ನುತಟ್ಟಿ ಸಮಧಾನ ಪಡಿಸಿದ್ದಾರೆ. ಈ ಫೋಟೊವನ್ನು ಐಸಿಸಿ ಕೂಡ ತನ್ನ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡು ‘ಕ್ರಿಕೆಟ್ ಸ್ಪಿರಿಟ್’ ಎಂದು ಬರೆದುಕೊಂಡಿದೆ.

ಮಂಗಳವಾರ ನಡೆದ ಈ ರೋಚಕ ಸೆಮಿ ಫೈನಲ್​ ಹೋರಾಟದಲ್ಲಿ ಭಾರತ ಆತಿಥೇಯ ದಕ್ಷಿಣ ಆಫ್ರಿಕಾವನ್ನು 2 ವಿಕೆಟ್‌ಗಳಿಂದ ಮಣಿಸಿ ಫೈನಲ್​ ಪ್ರವೇಶ ಪಡೆಯಿತು. ಈಗಾಗಲೇ ದಾಖಲೆ 5 ಬಾರಿ ಕಪ್‌ ಎತ್ತಿರುವ ಭಾರತ, ಭಾನುವಾರ ನಡೆಯುವ ಫೈನಲ್‌ನಲ್ಲಿ ಆಸ್ಟ್ರೇಲಿಯಾ ಅಥವಾ ಪಾಕಿಸ್ತಾನವನ್ನು ಎದುರಿಸಲಿದೆ. ಆಸೀಸ್​ ಮತ್ತು ಪಾಕ್​ ನಡುವಿನ 2ನೇ ಸೆಮಿಫೈನಲ್‌ ಗುರುವಾರ ನಡೆಯಲಿದೆ.

ಇದನ್ನೂ ಓದಿ

ಚೇಸಿಂಗ್​ ನಡೆಸಿದ ಭಾರತ ತಂಡ ಮೊದಲ ಎಸೆತದಲ್ಲೇ ವಿಕೆಟ್​ ಕಳೆದುಕೊಂಡಿತು. ಕೂಟದ ಯಶಸ್ವಿ ಬೌಲರ್‌ ಕ್ವೇನ ಎಂಫ‌ಕ ಮೊದಲ ಎಸೆತದಲ್ಲೇ ಆದರ್ಶ್‌ ಸಿಂಗ್‌ ವಿಕೆಟ್‌ ಕಿತ್ತು ಭಾರತಕ್ಕೆ ಆಘಾತವಿಕ್ಕಿದರು. 32 ರನ್ನಿಗೆ 4 ವಿಕೆಟ್‌ ಬಿದ್ದಾಗ ಭಾರತ ಪಂದ್ಯ ಸೋಲಲಿದೆ ಎಂದು ಎಲ್ಲರು ನಿರೀಕ್ಷೆ ಮಾಡಿದರು. ಆದರೆ, ಆತ್ಮವಿಶ್ವಾಸ ಕಳೆದುಕೊಳ್ಳದ ಸಹಾರಣ್‌ ಮತ್ತು ಸಚಿನ್‌ ದಿಟ್ಟ ಜತೆಯಾಟವೊಂದನ್ನು ನಡೆಸಿ ಭಾರತಕ್ಕೆ ಸ್ಮರಣೀಯ ಗೆಲುವೊಂದನ್ನು ತಂದುಕೊಟ್ಟರು. 31 ಓವರ್‌ಗಳ ತನಕ ಕ್ರೀಸ್​ ಆಕ್ರಮಿಸಿಕೊಂಡ ಈ ಜೋಡಿ 5ನೇ ವಿಕೆಟಿಗೆ 172 ರನ್‌ ಪೇರಿಸಿ ಗೆಲುವಿನ ರೂವಾರಿ ಎನಿಸಿತು.

ಸಚಿನ್‌ ದಾಸ್‌ 95 ಎಸೆತಗಳಿಂದ ಸರ್ವಾಧಿಕ 96 ರನ್‌ ಬಾರಿಸಿದರೆ(11 ಬೌಂಡರಿ, 1 ಸಿಕ್ಸರ್‌), ಕಪ್ತಾನನ ಆಟವಾಡಿದ ಉದಯ್‌ ಸಹಾರಣ್‌ 124 ಎಸೆತ ಎದುರಿಸಿ 81 ರನ್‌ ಗಳಿಸಿದರು. ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ದಕ್ಷಿಣ ಆಫ್ರಿಕಾ 7 ವಿಕೆಟಿಗೆ 244 ರನ್‌ ಮಾಡಿದರೆ, ಭಾರತ 48.5 ಓವರ್‌ಗಳಲ್ಲಿ 8 ವಿಕೆಟಿಗೆ 248 ರನ್‌ ಬಾರಿಸಿ ಗೆಲುವಿನ ನಗೆ ಬೀರಿತು.

Exit mobile version