ನವದೆಹಲಿ: ಭಾರತ ಮತ್ತು ಅಫಘಾನಿಸ್ತಾನ(India vs Afghanistan) ನಡುವಣ ವಿಶ್ವಕಪ್ ಪಂದ್ಯ ಇನ್ನೇನು ಕೆಲವೇ ಗಂಟೆಗಳಲ್ಲಿ ಆರಂಭವಾಗಲಿದೆ. ಇತ್ತಂಡಗಳ ಈ ಮುಖಾಮುಖಿ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ(Arun Jaitley Stadium)ನಲ್ಲಿ ನಡೆಯಲಿದೆ. ಲೇಟೆಸ್ಟ್ ಹವಾಮಾನ ವರದಿಯ(Delhi Weather) ಪ್ರಕಾರ ಪಂದ್ಯಕ್ಕೆ ಯಾವುದೇ ಮಳೆಯ ಆತಂಕವಿಲ್ಲ ಎಂದು ತಿಳಿಸಿದೆ.
ಇಲ್ಲಿದೆ ಹವಾಮಾನ ವರದಿ
ರಾತ್ರಿಯ ವೇಳೆ ಮೋಡ ಕವಿದ ವಾತಾವರಣ ಇದ್ದರೂ ಪಂದ್ಯಕ್ಕೆ ಮಳೆಯ ಸಾಧ್ಯತೆ ಇಲ್ಲ. ಹಗಲಿನಲ್ಲಿ ತಾಪಮಾನವು ಹಗಲಿನಲ್ಲಿ 26 ರಿಂದ 36 ಡಿಗ್ರಿ ಸೆಲ್ಸಿಯಸ್ ವರೆಗೆ ಇರಲಿದೆ ಎಂದು ತಿಳಿಸಿದೆ. ಮಳೆಯ ಭಯವಿಲ್ಲದ ಕಾರಣ ಅಭಿಮಾನಿಗಳು ಈ ಪಂದ್ಯವನ್ನು ಸಂಪೂರ್ಣವಾಗಿ ಕಣ್ತುಂಬಿಕೊಳ್ಳಬಹುದು. ರಾತ್ರಿಯ ವೇಳೆ ಮಂಜಿನ ಕಾಟ ಇರುವ ಕಾರಣ ಬೌಲರ್ಗಳು ಕೊಂಚ ಕಷ್ಟಪಡಬೇಕಾದಿತು. ಏಕೆಂದರೆ ಚೆಂಡು ಕೈಯಿಂದ ಜಾರುದರಿಂದ ನಿರ್ದಿಷ್ಟ ಗುರಿಗೆ ಎಸೆಯಲು ಕಷ್ಟಕರವಾಗಬಹುದು.
ಪಿಚ್ ರಿಪೋರ್ಟ್
ಅರುಣ್ ಜೇಟ್ಲಿ ಕ್ರಿಕೆಟ್ ಸ್ಟೇಡಿಯಂನ ಪಿಚ್ ಸಂಪೂರ್ಣ ಬ್ಯಾಟಿಂಗ್ ಟ್ರ್ಯಾಕ್ ಆಗಿದೆ. ಇದು ಬ್ಯಾಟರ್ಗಳ ಸರ್ಗದ ತಾಣ. ಬೌಲರ್ಗಳು ಸರಿಯಾಗಿ ದಂಡಿಸಿಕೊಳ್ಳುವುದರಲ್ಲಿ ಅನುಮಾನವೇ ಬೇಡ. ಕಳೆದ ದಕ್ಷಿಣ ಆಫ್ರಿಕಾ ಮತ್ತು ಲಂಕಾ ನಡುವಣ ಪಂದ್ಯದಲ್ಲಿ ಒಟ್ಟು 754 ರನ್ ದಾಖಲಾಗಿತ್ತು. ಹೀಗಾಗಿ ಈ ಪಂದ್ಯದಲ್ಲಿಯೂ ರನ್ ಮಳೆಯೇ ಸುರಿಯುವ ನಿರೀಕ್ಷೆ ಇದೆ. ಬೌಲರ್ಗಳು ಇಲ್ಲಿ ಶಕ್ತಿ ಮೀರಿ ಪ್ರದರ್ಶನ ತೋರಬೇಕಿದೆ. ಸ್ಪಿನ್ ಬೌಲರ್ಗಳ ಆಟ ಇಲ್ಲಿ ನಡೆಯದು. ಹೀಗಾಗಿ ಭಾರತ ಮೂರು ಸ್ಪಿನ್ನರ್ ಆಡಿಸುವುದು ಅನುಮಾನ.
ರಾಹುಲ್-ಕೊಹ್ಲಿ ಮೇಲೆ ನಂಬಿಕೆ
ಗಾಯದಿಂದ ಚೇತರಿಕೆ ಕಂಡು ಏಷ್ಯಾಕಪ್ನಲ್ಲಿ ತಂಡಕ್ಕೆ ಆಗಮಿಸಿದ್ದ ಕೆ.ಎಲ್ ರಾಹುಲ್ ಪ್ರಚಂಡ ಬ್ಯಾಟಿಂಗ್ ಫಾರ್ಮ್ನಲ್ಲಿದ್ದಾರೆ. ಆಡಿದ ಪ್ರತಿ ಪಂದ್ಯದಲ್ಲಿಯೂ ಉತ್ತಮ ಪ್ರದರ್ಶನ ತೋರುವ ಮೂಲಕ ತಮ್ಮ ಹಳೆಯ ಬ್ಯಾಟಿಂಗ್ ವೈಭವವನ್ನು ತೋರ್ಪಡಿಸುತ್ತಿದ್ದಾರೆ. ಅವರನ್ನು ವಿಶ್ವಕಪ್ ತಂಡಕ್ಕೆ ಆಯ್ಕೆ ಮಾಡುವ ವೇಳೆ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್, ರಾಹುಲ್ ಉಪಸ್ಥಿತಿ ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಅತ್ಯುತ್ತಮ ಸಮತೋಲನ ಒದಗಿಸಲಿದೆ ಎಂದು ಹೇಳಿದ್ದರು. ಈ ಮಾತನ್ನು ರಾಹುಲ್ ಉಳಿಸಿಕೊಂಡಿದ್ದಾರೆ. ರಾಹುಲ್ ಮಾತ್ರವಲ್ಲದೆ ವಿರಾಟ್ ಕೊಹ್ಲಿಯೂ ಉತ್ತಮ ಫಾರ್ಮ್ನಲ್ಲಿರುವುದು ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಹೆಚ್ಚಿನ ಬಲ ಒದಗಿದೆ.
ಇದನ್ನೂ ಓದಿ ವಿಶ್ವಕಪ್ನಿಂದ ಸ್ಟಾರ್ ಆಟಗಾರ ಔಟ್; ಬದಲಿ ಆಟಗಾರನ ರೇಸ್ನಲ್ಲಿ ಗಾಯಕ್ವಾಡ್,ಜೈಸ್ವಾಲ್
ಅಪಾಯಕಾರಿ ಆಫ್ಘನ್
ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಸೋಲು ಕಂಡರೂ ಅಫಘಾನಿಸ್ತಾನ ಬಲಿಷ್ಠವಾಗಿದೆ. ಹೆಚ್ಚಾಗಿ ಆಲ್ರೌಂಡರ್ಗಳೇ ಈ ತಂಡದಲ್ಲಿ ತುಂಬಿಕೊಂಡಿದ್ದಾರೆ. ಕಳೆದ 2019ರಲ್ಲಿ ಲಂಡನ್ನಲ್ಲಿ ನಡದಿದ್ದ ವಿಶ್ವಕಪ್ ಟೂರ್ನಿಯಲ್ಲಿ ಭಾರತ ತಂಡ ಆಫ್ಘಾನ್ ವಿರುದ್ಧ ಪರದಾಡಿ ಗೆಲುವು ಸಾಧಿಸಿತ್ತು. ಅದು ಕೂಡ ಕೇವಲ 11 ರನ್ ಅಂತರದಲ್ಲಿ ಹೀಗಾಗಿ ಈ ಬಾರಿ ಆಫ್ಘಾನ್ ಸವಾಲನ್ನು ಹಗುರವಾಗಿ ಪರಿಗಣಿಸಬಾರದು. ಕಡೆಗಣಿಸಿದರೆ ಸೋಲು ಕಟ್ಟಿಟ್ಟ ಬುತ್ತಿ ಎನ್ನಲಡ್ಡಿಯಿಲ್ಲ. ರಶೀದ್ ಖಾನ್, ಮೊಹಮ್ಮದ್ ನಬಿ, ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್ ಇವರೆಲ್ಲ ತಂಡದ ಸ್ಟಾರ್ ಬ್ಯಾಟರ್ಗಳು
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮ, ಇಶಾನ್ ಕಿಶನ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್.
ಅಫಘಾನಿಸ್ತಾನ: ಹಷ್ಮತುಲ್ಲಾ ಶಾಹಿದಿ (ನಾಯಕ), ರಹಮಾನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ಮೊಹಮ್ಮದ್ ನಬಿ, ನಜಿಬುಲ್ಲಾ ಝದ್ರಾನ್,ಅಜ್ಮತುಲ್ಲಾ ಒಮರ್ಝೈ, ರಶೀದ್ ಖಾನ್, ಮುಜೀಬ್ ಉರ್ ರಹಮಾನ್, ಫಜಲ್ಹಕ್ ಫಾರೂಕಿ, ನವೀನ್ ಉಲ್ ಹಕ್.