Site icon Vistara News

Team India : ಕ್ರಿಕೆಟ್ ಅಭಿಮಾನಿಗಳಿಗೆ ಬೇಸರದ ಸುದ್ದಿ; ಭಾರತಕ್ಕೆ ಅಫಘಾನಿಸ್ತಾನ ಕ್ರಿಕೆಟ್​​ ತಂಡದ ಪ್ರವಾಸ ರದ್ದು!

Team India

#image_title

ಮುಂಬಯಿ: ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಸೇರಿದಂತೆ ಭಾರತ ಕ್ರಿಕೆಟ್​ ತಂಡದ ಆಟಗಾರರು (Team India) ವಿಶ್ವ ಟೆಸ್ಟ್​ ಚಾಂಪಿಯನ್​ಷಿಪ್​ ಫೈನಲ್​ ಪಂದ್ಯದ ಬಳಿಕ ಒಂದು ತಿಂಗಳ ಕಾಲ ವಿಶ್ರಾಂತಿ ಪಡೆಯಲಿದ್ದಾರೆ. ಬಿಡುವಿಲ್ಲದ ಕ್ರಿಕೆಟ್​ನಿಂದ ಬಳಲಿರುವ ಅವರಿಗೆ ಈ ಅವಧಿ ಪುನಶ್ಚೇತನಕ್ಕೆ ನೆರವು ನೀಡಲಿದೆ. ಅದಕ್ಕೆ ಕಾರಣ ಅಫಘಾನಿಸ್ತಾನ ತಂಡದ ವಿರುದ್ಧ ತವರಿನಲ್ಲಿ ಆಯೋಜಿಸಲಾಗಿದ್ದ ಏಕ ದಿನ ಸರಣಿಯ ರದ್ದಾಗಿರುವುದು. ವರದಿಗಳ ಪ್ರಕಾರ ಸರಣಿಯನ್ನು ರದ್ದು ಮಾಡಲು ಬಿಸಿಸಿಐ (BCCI) ಯೋಜನೆ ರೂಪಿಸಿಕೊಂಡಿದ್ದು, ಮುಂದಿನ ವೆಸ್ಟ್​​ ಇಂಡೀಸ್ ಪ್ರವಾಸಕ್ಕೆ ಇದು ಚೈತನ್ಯ ನೀಡಲಿದೆ ಎಂದು ಹೇಳಲಾಗಿದೆ.

ಭಾರತ ಕ್ರಿಕೆಟ್ ತಂಡದ ಆಟಗಾರರು ನಿರಂತರವಾಗಿ ಕ್ರಿಕೆಟ್ ಆಡುತ್ತಿದ್ದಾರೆ. ಕೆಲವು ಆಟಗಾರರು ನಡುವೆ ವಿರಾಮಗಳನ್ನು ಹೊಂದಿದ್ದರೂ, ನಿರಂತರವಾಗಿ ಅವರಿಗೆ ವಿಶ್ರಾಂತಿ ಪಡೆಯಲು ಸಾಧ್ಯವಾಗಿಲ್ಲ. ಆದ್ದರಿಂದ ಐಪಿಎಲ್ 2023 ಋತುವಿನ ನಂತರ ಟೀಮ್ ಇಂಡಿಯಾದ ಆಟಗಾರಿಗೆ ಕನಿಷ್ಠ ಒಂದು ತಿಂಗಳು ಬಿಡುವು ಸಿಗಲಿದೆ. ಜುಲೈ ಮೊದಲ ವಾರದಲ್ಲಿ ತಂಡ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ತೆರಳಲಿದೆ.

ಇದನ್ನೂ ಓದಿ : Team India : ಗಿಲ್​ ಯಾರಂತೆ ಆಡುತ್ತಾರೆ; ಸಚಿನ್​ ಅಥವಾ ಕೊಹ್ಲಿ? ಮೊಹಮ್ಮದ್ ಕೈಫ್​​ ನೀಡಿದ್ದಾರೆ ಉತ್ತರ​​

ಹೌದು, ಡಬ್ಲ್ಯುಟಿಸಿ ಫೈನಲ್ ನಂತರ ಆಟಗಾರರಿಗೆ ವಿರಾಮ ಇರುತ್ತದೆ. ನಾವು ಇನ್ನೂ ಅಫ್ಘಾನಿಸ್ತಾನ ಸರಣಿಗೆ ಅಂತಿಮ ಒಪ್ಪಿಗೆ ಸಿಕ್ಕಿಲ್ಲ. ಈ ಹಂತದಲ್ಲಿ ಪ್ರಸಾರಕ ಸಂಸ್ಥೆಯ ಜತೆ ಒಪ್ಪಂದ ಮಾಡಿಕೊಳ್ಳುವುದು ಹಾಗೂ ವೆಸ್ಟ್ ಇಂಡೀಸ್ ಪ್ರವಾಸದೊಂದಿಗೆ ಹೊಂದಿಕೆ ಮಾಡುವುದು ಕಷ್ಟ. ಆದ್ದರಿಂದ, ಆಟಗಾರರ ವಿಶ್ರಾಂತಿಗೆ ಇದು ಪರಿಪೂರ್ಣ ಅವಕಾಶ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಇನ್​​ಸೈಡ್​ ಸ್ಪೋರ್ಟ್ಸ್​​ಗೆ ತಿಳಿಸಿದ್ದಾರೆ.

ಭಾರತ-ಅಫ್ಘಾನಿಸ್ತಾನ ಸರಣಿ ಯಾಕೆ ಇಲ್ಲ?

ಬಿಸಿಸಿಐ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ಮೂರು ಪಂದ್ಯಗಳ ಏಕದಿನ ಸರಣಿಯನ್ನು ನಡೆಸಲು ಮಾತುಕತೆ ನಡೆಸಿತ್ತು. ಬಳಿಕ ಟಿ20 ಸರಣಿ ಬಗ್ಗೆ ಮಾತುಕತೆ ನಡೆದಿತ್ತು. ಆದಾಗ್ಯೂ, ಎರಡೂ ಯೋಜನೆಗಳನ್ನು ಈಗ ತಡೆಹಿಡಿಯಲಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ಪ್ರಸಾರಕರ ಅಲಭ್ಯತೆ . ಆಸ್ಟ್ರೇಲಿಯಾ ಏಕದಿನ ಸರಣಿಯೊಂದಿಗೆ ಡಿಸ್ನಿ- ಸ್ಟಾರ್ ಜೊತೆಗಿನ ಬಿಸಿಸಿಐನ ಒಪ್ಪಂದ ಕೊನೆಗೊಂಡಿದೆ. ಬಿಸಿಸಿಐ ಮಾಧ್ಯಮ ಹಕ್ಕುಗಳಿಗಾಗಿ ಟೆಂಡರ್ ಕರೆಯಬೇಕಿತ್ತಾದರೂ, ಅದು ನಿರೀಕ್ಷಿತ ಅವಧಿಯಲ್ಲಿ ಸಾಧ್ಯವಾಗಿಲ್ಲ. ಆದ್ದರಿಂದ, ಸರಣಿಗೆ ತಾತ್ಕಾಲಿಕ ನೇರಪ್ರಸಾರ ಪಾಲುದಾರರ ಸಾಧ್ಯತೆ ಬಗ್ಗೆ ಮಾತುಕತೆಗಳು ನಡೆದಿದ್ದವು. ಆದರೆ ಭಾರತ ಮತ್ತು ಅಫ್ಘಾನಿಸ್ತಾನ ಸರಣಿಯು ಹೆಚ್ಚಿನ ಮೌಲ್ಯವನ್ನು ಪಡೆಯುವ ಸಾಧ್ಯತೆಯಿಲ್ಲ . ಇದರಿಂದ ಮಾಧ್ಯಮ ಹಕ್ಕುಗಳ ಒಪ್ಪಂದದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ತಾತ್ಕಾಲಿಕ ವ್ಯವಸ್ಥೆಗೆ ಯಾರೂ ಆಸಕ್ತಿ ವಹಿಸಿಲ್ಲ ಎನ್ನಲಾಗಿದೆ.

ಬಿಸಿಸಿಐ ಮಾಧ್ಯಮ ಹಕ್ಕುಗಳ ಒಪ್ಪಂದಕ್ಕಾಗಿ ಟೆಂಡರ್​ಗಳನ್ನು ಅಂತಿಮಗೊಳಿಸುತ್ತಿದೆ. ಅದು ಅಂತಿಮಗೊಂಡ ಬಳಿಕ ಜೂನ್ ವಿಂಡೋ ಬದಲು, ಅಫ್ಘಾನಿಸ್ತಾನ ಏಕದಿನ ಸರಣಿಯನ್ನು ಸೆಪ್ಟೆಂಬರ್​ನಲ್ಲಿ ಆಸ್ಟ್ರೇಲಿಯಾ ಸರಣಿಗೆ ಮೊದಲು ಅಥವಾ ನಂತರ ನಡೆಯುವ ಸಾಧ್ಯತೆ ಇದೆ. ಇದು 2023 ರ ವಿಶ್ವ ಕಪ್​ಗೆ ಎರಡೂ ತಂಡಗಳಿಗೆ ಪರಿಪೂರ್ಣ ಅಭ್ಯಾಸದ ಅವಕಾಶವನ್ನು ಒದಗಿಸಲಿದೆ.

Exit mobile version