ಡಬ್ಲಿನ್: ಭಾರತ ಮತ್ತು ಐರ್ಲೆಂಡ್(India vs Ireland) ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಮಳೆ ಅಡ್ಡಿಪಡಿಸಿದ ಕಾರಣ ಪಂದ್ಯ ಪೂರ್ಣವಾಗಿ ನಡೆಯಲಿಲ್ಲ. ಇದೀಗ ದ್ವಿತೀಯ(Ireland vs India, 2nd T20) ಪಂದ್ಯಕ್ಕೂ ಮಳೆ ಕಾಟ ಇದೆ ಎಂದು ಹವಾಮಾನ ಇಲಾಖೆ(weather forecast) ತಿಳಿಸಿದೆ. ಮೊದಲ ಪಂದ್ಯದಂತೇ ಈ ಪಂದ್ಯಕ್ಕೂ ದ್ವಿತೀಯ ಇನಿಂಗ್ಸ್ನಲ್ಲಿ ಮಳೆಯ ಸಮಸ್ಯೆ ಎದುರಾಗುವುದು ಬಹುತೇಖ ಖಚಿತ ಎಂದು ತಿಳಿಸಿದೆ.
ಹಗಲಿನಲ್ಲಿ ತಾಪಮಾನ ಸುಮಾರು 22 ಡಿಗ್ರಿಗಳಷ್ಟು ಇದ್ದರೂ ಸಂಜೆಯಾದಂತೆ ಇಲ್ಲಿ ಮೋಡ ಕವಿದ ವಾತಾವರಣದೊಂದಿಗೆ ಶೇ.44 ರಷ್ಟು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ(IND vs IRE Dublin Weather Report) ಮುನ್ಸೂಚನೆ ನೀಡಿದೆ. ಆದರೆ ಮೊದಲ ಇನಿಂಗ್ಸ್ಗೆ ಯಾವುದೇ ಅಡ್ಡಿಯಾಗದು ಎಂದು ತಿಳಿಸಿದೆ. ಹೀಗಾಗಿ ಟಾಸ್ ಗೆದ್ದ ತಂಡ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡು ಆರಂಭದಿಂದಲೇ ದೊಡ್ಡ ಮೊತ್ತವನ್ನು ಗಳಿಸಿ ಉತ್ತಮ ರನ್ರೇಟ್ ಕಾಯ್ದುಕೊಳ್ಳುವ ಯೋಜನೆ ಹಾಕಿಕೊಳ್ಳಬಹುದು. ಏಕೆಂದರೆ ಡಕ್ವರ್ತ್ ಲೂಯಿಸ್ ನಿಯಮ ಅನ್ವಯವಾದಾಗ ಇದು ಪ್ರಮುಖ ಪಾತ್ರ ವಹಿಸಿಸುತ್ತದೆ. ಇದೇ ಕಾರಣದಿಂದ ಭಾರತ ಕಳೆದ ಪಂದ್ಯದಲ್ಲಿ 2 ರನ್ಗಳ ಗೆಲುವು ಸಾಧಿಸಿತ್ತು.
ಇಲ್ಲಿನ ಪಿಚ್ ಹೇಗಿದೆ
ಮಲಾಹೈಡ್‌ನ ವಿಲೇಜ್ ಕ್ರಿಕೆಟ್ ಸ್ಟೇಡಿಯಂನ ಪಿಚ್ ಬೌಲಿಂಗ್(Pitch Report) ಸ್ನೇಹಿಯಾಗಿದೆ. ಇಲ್ಲಿ ವೇಗಿಗಳು ಮತ್ತು ಸ್ಪಿನ್ನರ್ಗಳು ಸಮಾನವಾಗಿ ವಿಕೆಟ್ ಕೀಳಬಹುದು. ಇದಕ್ಕೆ ಕಳೆದ ಪಂದ್ಯವೇ ಉತ್ತಮ ನಿದರ್ಶನ. ಭಾರತ ಪರ ಬಿಷ್ಣೋಯಿ, ಬುಮ್ರಾ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಕೆಡವಿದ್ದರು. ಹೀಗಾಗಿ ಈ ಪಂದ್ಯದಲ್ಲಿಯೂ ಬೌಲರ್ಗಳೇ ಹಿಡಿತ ಸಾಧಿಸುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿನ ಸರಾಸರಿ ಮೊದಲ ಇನ್ನಿಂಗ್ಸ್ ಮೊತ್ತ 167 ರನ್ ಆಗಿದೆ. ಇಬ್ಬನಿಯ ಸಮಸ್ಯೆಯೂ ಇಲ್ಲಿ ಅಧಿಕವಾಗಿರುವ ಕಾರಣ ಚೇಸಿಂಗ್ ನಡೆಸುವ ತಂಡಕ್ಕೆ ಹೆಚ್ಚಿನ ಲಾಭವಿದೆ.
ಭಾರತ ಮತ್ತು ಐರ್ಲೆಂಡ್ ಇದುವರೆಗೆ 6 ಟಿ20 ಪಂದ್ಯಗಳನ್ನು ಆಡಿದೆ. ಇದರಲ್ಲಿ ಕಳೆದ ಪಂದ್ಯವೂ ಸೇರಿದೆ. ಉಭಯ ತಂಡಗಳ ಮೊದಲ ಟಿ20 ಮುಖಾಮುಖಿ ನಡೆದದ್ದು 2018ರಲ್ಲಿ ಈ ವೇಳೆ 2 ಪಂದ್ಯಗಳ ಸರಣಿಯನ್ನು ಆಡಲಾಗಿತ್ತು. ಇದರಲ್ಲಿ ಭಾರತವೇ ಗೆದ್ದಿತ್ತು. ಇದುವೆರೆಗೂ ಐರ್ಲೆಂಡ್ ತಂಡ ಭಾರತದ ಎದುರು ಗೆಲುವಿನ ಖಾತೆ ತೆರೆದಿಲ್ಲ. ದ್ವಿತೀಯ ಪಂದ್ಯದಲ್ಲಾದರೂ ಖಾತೆ ತೆರೆದಿತೇ ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ IND vs PAK: ಕೆಟ್ಟ ಪದದಿಂದ ಇಶಾಂತ್ ನಿಂದಿಸಿದ್ದರು; ಹಳೆಯ ಘಟನೆ ನೆನೆದ ಪಾಕ್ ಮಾಜಿ ಆಟಗಾರ
ಸಂಭಾವ್ಯ ತಂಡ
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೈರ್/ ರಾಸ್ ಅಡೈರ್, ಕರ್ಟಿಸ್ ಕ್ಯಾಂಫರ್, ಗೆರಾತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್/ ಕ್ರೇಗ್ ಯಂಗ್.
ಭಾರತ ತಂಡ: ಜಸ್‌ಪ್ರೀತ್ ಬುಮ್ರಾ (ನಾಯಕ), ಋತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್ ಸಿಂಗ್/ ಮುಕೇಶ್ ಕುಮಾರ್.