Site icon Vistara News

India vs Ireland: ಐರ್ಲೆಂಡ್‌ ವಿರುದ್ಧ ಭಾರತ ತಂಡದ ದಾಖಲೆ ಹೇಗಿದೆ? ಅಂಕಿ ಅಂಶ ಹೀಗಿದೆ

india vs ireland t20

ಡಬ್ಲಿನ್‌: ಮೂರು ಪಂದ್ಯಗಳ ಟಿ20 ಸರಣಿಯನ್ನಾಡಲು ಭಾರತ ತಂಡ ಐರ್ಲೆಂಡ್‌(India vs Ireland) ಪ್ರವಾಸ ಕೈಗೊಂಡಿದ್ದು ಉಭಯ ತಂಡಗಳ ಮೊದಲ ಮುಖಾಮುಖಿ ಶುಕ್ರವಾರ(ಆಗಸ್ಟ್‌ 18) ದಿಂದ ಆರಂಭಗೊಳ್ಳಲಿದೆ(Ireland vs India, 1st T20I). ಪಂದ್ಯ ಭಾರತೀಯ ಕಾಲಮಾನ ಸಂಜೆ 7.30ಕ್ಕೆ ಪ್ರಸಾರಗೊಳ್ಳಲಿದೆ. ಇತ್ತಂಡಗಳ ಟಿ20 ಇತಿಹಾಸ(india vs ireland t20 records) ಹೇಗಿದೆ ಎಂಬ ಮಾಹಿತಿ ಇಂತಿದೆ.

ಮುಖಾಮುಖಿ

ಭಾರತ ಮತ್ತು ಐರ್ಲೆಂಡ್‌ ಇದುವರೆಗೆ 5 ಟಿ20 ಪಂದ್ಯಗಳನ್ನು ಆಡಿದೆ. ಉಭಯ ತಂಡಗಳ ಮೊದಲ ಟಿ20 ಮುಖಾಮುಖಿ ನಡೆದದ್ದು 2018ರಲ್ಲಿ ಈ ವೇಳೆ 2 ಪಂದ್ಯಗಳ ಸರಣಿಯನ್ನು ಆಡಲಾಗಿತ್ತು. ಇದರಲ್ಲಿ ಭಾರತವೇ ಗೆದ್ದಿತ್ತು. ಇದಾದ ಬಳಿಕ ಕಳೆದ ವರ್ಷ ಮೂರು ಪಂದ್ಯಗಳ ಸರಣಿ ಆಡಲಾಗಿತ್ತು. ಇದು ಕೂಟ ಭಾರತವೇ ಮೇಲುಗೈ ಸಾಧಿಸಿತ್ತು. ಒಟ್ಟಾರೆ 5 ಪಂದ್ಯಗಳಲ್ಲಿಯೂ ಭಾರತ ತಂಡವೇ ಗೆದ್ದಿದೆ. ಇದುವೆಗೂ ಐರ್ಲೆಂಡ್‌ ತಂಡ ಟೀಮ್‌ ಇಂಡಿಯಾ ಎದುರು ಗೆಲುವಿನ ಖಾತೆ ತೆರೆದಿಲ್ಲ.

ಮೂರು ವರ್ಷದಲ್ಲಿ ಮೂರು ನಾಯಕರು

ಸಾರಸ್ಯವೆಂದರೆ ಐರ್ಲೆಂಡ್‌ ವಿರುದ್ಧ ಭಾರತ ಆಡುತ್ತಿರುವ ಮೂರನೇ ಟಿ20 ಸರಣಿ ಇದಾಗಿದೆ. ಈ ಮೂರು ಸರಣಿಗೂ ಮೂವರು ನಾಯಕರು ಭಾರತ ತಂಡವನ್ನು ಮುನ್ನಡೆಸುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ. 2018ರಲ್ಲಿ ವಿರಾಟ್‌ ಕೊಹ್ಲಿ, 2022ರಲ್ಲಿ ಹಾರ್ದಿಕ್‌ ಪಾಂಡ್ಯ ಇದೀಗ ಜಸ್‌ಪ್ರೀತ್‌ ಬುಮ್ರಾ ತಂಡವನ್ನು ಮುನ್ನಡೆಸುತ್ತಿದ್ದಾರೆ.

ಕುಲ್‌ದೀಪ್‌ ಉತ್ತಮ ದಾಖಲೆ

ಚೈನಾಮನ್‌ ಬೌಲಿಂಗ್‌ ಖ್ಯಾತಿಯ ಕುಲ್‌ದೀಪ್‌ ಯಾದವ್‌ ಅವರು ಐರ್ಲೆಂಡ್‌ ನೆಲದಲ್ಲಿ ಉತ್ತಮ ಟಿ20 ದಾಖಲೆಯನ್ನು ಹೊಂದಿದ್ದಾರೆ. 2018ರಲ್ಲಿ ಕೊಹ್ಲಿ ಸಾರಥ್ಯದಲ್ಲಿ ಆಡಲಾದ ಸರಣಿಯಲ್ಲಿ 21 ರನ್‌ಗಳಿಗೆ 4 ವಿಕೆಟ್‌ ಉರುಳಿಸಿದ್ದರು. ಇದು ಈ ವರೆಗಿನ ಇಲ್ಲಿನ ಉತ್ತಮ ಬೌಲಿಂಗ್‌ ದಾಖಲೆಯಾಗಿದೆ.

ಇದನ್ನೂ ಓದಿ India vs Ireland: ಮೊದಲ ಟಿ20 ಪಂದ್ಯದ ಪಿಚ್‌ ರಿಪೋರ್ಟ್‌, ಸಂಭಾವ್ಯ ತಂಡದ ಮಾಹಿತಿ

ಹೂಡಾ ಗರಿಷ್ಠ ಮೊತ್ತ

ದೀಪಕ್ ಹೂಡಾ ಭಾರತ ಪರ ಐರ್ಲೆಂಡ್ ಟಿ20 ಸರಣಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ಹೊಂದಿದ್ದಾರೆ. ಕಳೆದ ವರ್ಷ ಆಡಿದ ಎರಡು ಪಂದ್ಯಗಳಲ್ಲಿ ಹೂಡಾ ಒಂದು ಶತಕ ಸೇರಿ 151 ಸರಾಸರಿಯಲ್ಲಿ ಒಟ್ಟು 151 ರನ್ ಗಳಿಸಿದ್ದಾರೆ. ಜತೆಗೆ ಅವರ ಚೊಚ್ಚಲ ಟಿ20 ಶತಕವೂ ಈ ಪಂದ್ಯದಲ್ಲಿ ದಾಖಲಾಗಿತ್ತು. ಐಲೆಂಡ್‌ ಪರ ಹ್ಯಾರಿ ಟೆಕ್ಟರ್ ಎರಡು ಪಂದ್ಯಗಳಲ್ಲಿ 103 ರನ್ ಗಳಿಸಿದ ಅತಿ ಹೆಚ್ಚು ರನ್ ಗಳಿಸಿದ್ದಾರೆ.

ಬುಮ್ರಾಗೆ ಮಹತ್ವದ ಪಂದ್ಯ

11 ತಿಂಗಳ ಬಳಿಕ ಜಸ್‌ಪ್ರೀತ್‌ ಬುಮ್ರಾ(Jasprit Bumrah) ಆಡುತ್ತಿರುವ ಮೊದಲ ಪಂದ್ಯ ಇದಾಗಿದೆ. 29ರ ಹರೆಯದ ಬುಮ್ರಾ 2022ರ ಸೆಪ್ಟಂಬರ್‌ನಲ್ಲಿ ಭಾರತ ಪರ ಕೊನೆಯದಾಗಿ ಪಂದ್ಯವನ್ನಾಡಿದ್ದರು. ಆ ಬಳಿಕ ಬೆನ್ನುನೋವಿನಿಂದಾಗಿ ತಂಡದಿಂದ ಹೊರಗುಳಿದಿದ್ದರು. ಬೆನ್ನುನೋವಿಗಾಗಿ ಶಸ್ತ್ರಚಿಕಿತ್ಸೆಗೂ ಒಳಗಾಗಿದ್ದರು. ಇದೀಗ ಪೂರ್ಣವಾಗಿ ಚೇತರಿಸಿಕೊಂಡಿರುವ ಅವರು ಏಷ್ಯಾ ಕಪ್‌ ಮತ್ತು ವಿಶ್ವಕಪ್‌ ನಿಟ್ಟಿನಲ್ಲಿ ತನ್ನ ಫಿಟ್‌ನೆಸ್‌ ಕ್ಷಮತೆಯನ್ನು ಖಚಿತಪಡಿಸಿಕೊಳ್ಳಬೇಕಿದೆ.

Exit mobile version