ಮುಂಬಯಿ: ಭಾರತ ಮತ್ತು ಐರ್ಲೆಂಡ್(India vs Ireland) ನಡುವಿನ ಮೂರು ಟಿ20 ಪಂದ್ಯಗಳು ಮಲಾಹೈಡ್ ನಲ್ಲಿ ಆಗಸ್ಟ್ 18, 20 ಮತ್ತು 23 ರಂದು ನಡೆಯಲಿವೆ. 2024ರ ಪುರುಷರ ಟಿ20 ವಿಶ್ವಕಪ್ ಅರ್ಹತೆಯನ್ನು ಪಡೆದುಕೊಂಡ ನಂತರ ಈ ಸರಣಿಯು ಐರ್ಲೆಂಡ್ ನ ಮೊದಲ ದ್ವಿಪಕ್ಷೀಯ ಟಿ20 ಸರಣಿಯಾಗಿದೆ. ಭಾರತ ತಂಡವನ್ನು ಜಸ್‌ಪ್ರೀತ್ ಬುಮ್ರಾ(Jasprit Bumrah) ಮುನ್ನಡೆಸಲಿದ್ದಾರೆ. ಆದರೆ ಭಾರತ ತಂಡಕ್ಕೆ ಈ ಸರಣಿಯಲ್ಲಿ ಕೋಚ್ ಮಾರ್ಗದರ್ಶನ ಇಲ್ಲದೇ ಇರುವುದು ಅಚ್ಚರಿ ತಂದಿದೆ.
ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್(Rahul Dravid) ಮತ್ತು ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋರ್ ಮತ್ತು ಬೌಲಿಂಗ್ ಕೋಚ್ ಪಾರಸ್ ಮಾಂಬ್ರೆ ಸೇರಿದಂತೆ ಅವರ ಕೋಚಿಂಗ್ ಸಿಬ್ಬಂದಿಯ ಇತರ ಸದಸ್ಯರು ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಸರಣಿಯ ನಂತರ ಸ್ವಲ್ಪ ವಿಶ್ರಾಂತಿಗಾಗಿ ಭಾರತಕ್ಕೆ ಮರಳಲಿದ್ದಾರೆ. ಅವರು ಐರ್ಲೆಂಡ್ ಪ್ರವಾಸವನ್ನು ಮಾಡುವ ತಂಡದೊಂದಿಗೆ ಇರುವುದಿಲ್ಲ ಎಂದು ಈ ಹಿಂದೆಯೇ ನಿರ್ಧರಿಸಲಾಗಿತ್ತು.
ಕೋಚ್ ಇಲ್ಲದೆ ಸರಣಿ ಆಡಲಿದೆ ಭಾರತ ತಂಡ!
ದ್ರಾವಿಡ್ ಅನುಪಸ್ಥಿತಿಯಲ್ಲಿ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NSC) ಮುಖ್ಯಸ್ಥರಾಗಿರುವ ವಿವಿಎಸ್ ಲಕ್ಷ್ಮಣ್(VVS Laxman) ಅವರು ಐರ್ಲೆಂಡ್‌ನಲ್ಲಿ ತಂಡದ ಜವಾಬ್ದಾರಿಯನ್ನು ವಹಿಸಿಕೊಳ್ಳುವ ಸಾಧ್ಯತೆಯಿದೆ, ಬ್ಯಾಟಿಂಗ್ ಕೋಚ್ ಆಗಿ ಸಿತಾಂಶು ಕೊಟಕ್ ಅಥವಾ ಹೃಷಿಕೇಶ್ ಕಾನಿಟ್ಕರ್ ಅವರೊಂದಿಗೆ ಸೇರಿಕೊಳ್ಳಲಿದ್ದಾರೆ, ಬೌಲಿಂಗ್ ಕೋಚ್ ಹುದ್ದೆಯನ್ನು ಟ್ರಾಯ್ ಕೂಲಿ ಅಥವಾ ಸಾಯಿರಾಜ್ ಬಹುತುಳೆ ಅವರಿಗೆ ಹಸ್ತಾಂತರಿಸುವ ನಿರೀಕ್ಷೆಯಿದೆ ಎನ್ನಲಾಗಿತ್ತು. ಆದರೆ ಇದೀಗ ಕ್ರಿಕ್ ಬಜ್ನ ವರದಿಯ ಪ್ರಕಾರ, ಲಕ್ಷಣ್ ಅವರು ಭಾರತ ತಂಡದೊಂದಿಗೆ ಐರ್ಲೆಂಡ್ ಸರಣಿಗೆ ಪ್ರಯಾಣಿಸುವುದಿಲ್ಲ ಎಂದು ಬರದಿ ಮಾಡಿದೆ. ಒಂದೊಮ್ಮೆ ಕೋಚ್ ಇಲ್ಲದೆ ಹೋದರೆ ಎಂಟು ವರ್ಷಗಳ ಬಳಿಕ ಮೊದಲ ಬಾರಿಗೆ ಟೀಮ್ ಇಂಡಿಯಾ ಕೋಚ್(Indian cricket coach) ಇಲ್ಲದೆ ಸರಣಿಯೊಂದನ್ನು ಆಡಿದಂತಾಗುತ್ತದೆ.
ಆಗಸ್ಟ್ 15ಕ್ಕೆ ಭಾರತ ತಂಡ ಪ್ರಯಾಣ
ಜಸ್‌ಪ್ರೀತ್ ಬುಮ್ರಾ ನೇತೃತ್ವದ ಭಾರತ ತಂಡ ಆಗಸ್ಟ್ 15 ಸ್ವಾತಂತ್ರ್ಯ ದಿನಾಚರಣೆಯಂದೇ ಐರ್ಲೆಂಡ್ಗೆ ಪ್ರಯಾಣಿಸಲಿದೆ. 11 ತಿಂಗಳಕಾಲ ಬೆನ್ನು ನೋವಿನಿಂದ ಬಳಲಿ ಚೇತರಿಕೆ ಕಂಡಿರುವ ಬುಮ್ರಾ ಅವರು ಆಡುತ್ತಿರುವ ಮೊದಲ ಸರಣಿ ಇದಾಗಿದೆ. ಈ ಏಷ್ಯಾಕಪ್ ಮತ್ತು ವಿಶ್ವಕಪ್ಗೆ ಆಯ್ಕೆ ಮಾಡಲು ಬುಮ್ರಾ ಅವರಿಗೆ ಈ ಸರಣಿ ಅಗ್ನಿಪರೀಕ್ಷೆಯಾಗಿದೆ. ಒಂದೊಮ್ಮೆ ಅವರು ಮತ್ತೆ ಗಾಯಕ್ಕೆ ತುತ್ತಾದರೆ ಭಾರತ ತಂಡಕ್ಕೆ ವಿಶ್ವಕಪ್ನಲ್ಲಿ ಹಿನ್ನಡೆಯಾಗುವುದ ಜತೆಗೆ ಬುಮ್ರಾ ಅವರ ಕ್ರಿಕೆಟ್ ಬಾಳ್ವೆಯೂ ಅಂತ್ಯ ಕಾಣುವು ಸಾಧ್ಯತೆ ಅಧಿಕವಾಗಿದೆ. ಈ ಸರಣಿಯಿಂದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ರವೀಂದ್ರ ಜಡೇಜಾ, ಹಾರ್ದಿಕ್ ಪಾಂಡ್ಯ ಸೇರಿ ಎಲ್ಲ ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಲಾಗಿದೆ. ಬುಮ್ರಾ ಹೊರತು ಪಡಿಸಿ ಉಳಿದ ಎಲ್ಲ ಆಟಗಾರರು ಕೂಡ ಐಪಿಎಲ್ ಸ್ಟಾರ್ಗಳಾಗಿದ್ದಾರೆ.
ಇದನ್ನೂ ಓದಿ Shivam Dube: ಧೋನಿ ಸಲಹೆಯಿಂದ ಐರ್ಲೆಂಡ್ ಸರಣಿಯಲ್ಲಿ ಅವಕಾಶ ಸಿಕ್ಕಿತು; ದುಬೆ
ಉಭಯ ತಂಡಗಳು
ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೈರ್, ರಾಸ್ ಅಡೈರ್, ಕರ್ಟಿಸ್ ಕ್ಯಾಂಫರ್, ಗೆರಾತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಬ್ಯಾರಿ ಮೆಕಾರ್ಥಿ, ಹ್ಯಾರಿ ಟೆಕ್ಟರ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್, ಕ್ರೇಗ್ ಯಂಗ್.
ಭಾರತ ತಂಡ: ಜಸ್‌ಪ್ರೀತ್ ಬುಮ್ರಾ (ನಾಯಕ), ರುತುರಾಜ್ ಗಾಯಕ್ವಾಡ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮ, ರಿಂಕು ಸಿಂಗ್, ಸಂಜು ಸ್ಯಾಮ್ಸನ್, ಜಿತೇಶ್ ಶರ್ಮ, ಶಿವಂ ದುಬೆ, ವಾಷಿಂಗ್ಟನ್ ಸುಂದರ್, ಶಾಬಾಜ್ ಅಹ್ಮದ್, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಶದೀಪ್ ಸಿಂಗ್, ಮುಕೇಶ್ ಕುಮಾರ್, ಆವೇಶ್ ಖಾನ್.