ನ್ಯೂಯಾರ್ಕ್: ಭಾರತ ತಂಡ ಟಿ20 ವಿಶ್ವಕಪ್ನಲ್ಲಿ(T20 World Cup 2024) ಬುಧವಾರ ಐರ್ಲೆಂಡ್(India vs Ireland) ವಿರುದ್ಧ ತನ್ನ ಮೊದಲ ಪಂದ್ಯವನ್ನು ಆಡಲಿದೆ. ಆದರೆ, ಈ ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮ(Rohit Sharma) ಜತೆ ಯಾರು ಇನಿಂಗ್ಸ್ ಆರಂಭಿಸಲಿದ್ದಾರೆ ಎಂಬ ಪ್ರಶ್ನೆಯೊಂದು ಮೂಡಿದೆ. ಕೋಚ್ ರಾಹುಲ್ ದ್ರಾವಿಡ್(Rahul Dravid) ಕೂಡ ನಮ್ಮ ತಂತ್ರದ ಬಗ್ಗೆ ನಾವು ಹೆಚ್ಚು ಹೇಳಲು ಬಯಸುವುದಿಲ್ಲ ಎಂದಿದ್ದಾರೆ. ಹೀಗಾಗಿ ಈ ಪ್ರಶ್ನೆಗೆ ಉತ್ತರ ನಾಳಿನ ಪಂದ್ಯದ ವೇಳೆಯೇ ಸಿಗಬೇಕಿದೆ.
ಮೂಲಗಳ ಪ್ರಕಾರ, ರೋಹಿತ್ ಶರ್ಮ ಜತೆ ಯಶಸ್ವಿ ಜೈಸ್ವಾಲ್(Yashasvi Jaiswal) ಅವರೇ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಅಧಿಕವಾಗಿದೆ. ವಿರಾಟ್ ಕೊಹ್ಲಿ(Virat Kohli) ಐಪಿಎಲ್ ಟೂರ್ನಿಯಲ್ಲಿ ಆರಂಭಿಕನಾಗಿ ಆಡಿದ್ದರೂ ಕೂಡ ಐಸಿಸಿ ಟೂರ್ನಿಗಳಲ್ಲಿ ಆರಂಭಿಕನಾಗಿ ಆಡುವುದು ಅನುಮಾನ. ಎಂದಿನಿಂತೆ ದ್ವಿತೀಯ ಕ್ರಮಾಂಕದಲ್ಲಿಯೇ ಆಡಲಿದ್ದಾರೆ ಎನ್ನಲಾಗಿದೆ. ಜೈಸ್ವಾಲ್ ಆರಂಭಿ ಆಟಗಾರನಾಗಿದ್ದು ಜತೆಗೆ ಎಡಗೈ ಬ್ಯಾಟರ್ ಆಗಿದ್ದಾರೆ. ಹೀಗಾಗಿ ಬಲ ಮತ್ತು ಎಡಗೈ ಬ್ಯಾಟರ್ ಕಾಂಬಿನೇಶನ್ ಉತ್ತಮವಾಗಿರುವ ಕಾರಣದಿಂದ ರೋಹಿತ್-ಜೈಸ್ವಾಲ್ ಆರಂಭಿಕನಾಗಿ ಆಡಬಹುದು.
ವಿರಾಟ್ ಕೊಹ್ಲಿ ಅವರು ಆರಂಭಿಕನಾಗಿ ಕಣಕ್ಕಿಳಿದರೆ, ಒಂದೊಮ್ಮೆ ರೋಹಿತ್ ಮತ್ತು ಕೊಹ್ಲಿ ಬೇಗನೇ ವಿಕೆಟ್ ಕಳೆದುಕೊಂಡರೆ ಮಧ್ಯಮ ಕ್ರಮಾಂಕದಲ್ಲಿ ತಂಡಕ್ಕೆ ಆಸರೆಯಾಗಬಲ್ಲ ಅನುಭವಿ ಆಟಗಾರನಿಲ್ಲ. ಹೀಗಾಗಿ ವಿರಾಟ್ ಅವರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸದರೆ ಉತ್ತಮ ಎನ್ನಲಡ್ಡಿಯಿಲ್ಲ. ಕಳೆದ ಬಾರಿಯ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆರಂಭಿಕ ಆಟಗಾರರೆಲ್ಲ ಸತತವಾಗಿ ವಿಕೆಟ್ ಕಳೆದುಕೊಂಡಾಗ ತಂಡಕ್ಕೆ ಆಸರೆಯಾಗಿದ್ದು ವಿರಾಟ್ ಕೊಹ್ಲಿ. ಏಕಾಂಗಿಯಾಗಿ ಹೋರಾಟ ನಡೆಸಿ ಸೋಲುವ ಪಂದ್ಯವನ್ನು ಗೆಲ್ಲಿಸಿ ಕೊಟ್ಟಿದ್ದರು.
ಇದನ್ನೂ ಓದಿ India vs Ireland: ಭಾರತ-ಐರ್ಲೆಂಡ್ ಟಿ20 ದಾಖಲೆ, ಪಿಚ್ ರಿಪೋರ್ಟ್ ಹೇಗಿದೆ?
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಅವರಂತ ಬ್ಯಾಟರ್ಗಳಿದ್ದರೂ ಕೂಡ ಇವರ ಪ್ರದರ್ಶನದ ಮೇಲೆ ಹೆಚ್ಚಿನ ನಂಬಿಕೆ ಇಡುವಂತಿಲ್ಲ. ಬಡಬಡನೆ ಒಂದೆರಡು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದರೂ ತಂಡಕ್ಕೆ ಆಸರೆಯಾಗಬಲ್ಲ ಸಾಮರ್ಥ್ಯ ಇವರಿಗಿಲ್ಲ.
ನಸೌ ಕ್ರಿಕೆಟ್ ಸ್ಟೇಡಿಯಂನ ಪಿಚ್ ಕೂಡ ಅತ್ಯಂತ ಆಘಾತಕಾರಿಯಾಗಿ ವರ್ತಿಸುತ್ತಿದೆ. ಬ್ಯಾಟರ್ಗಳು ಇಲ್ಲಿ ರನ್ಗಳಿಸಲು ಪರದಾಡುತ್ತಿದ್ದಾರೆ. ಇದಕ್ಕೆ ಸೋಮವಾರ ನಡೆದಿದ್ದ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ನಡುವಣ ಪಂದ್ಯವೇ ಉತ್ತಮ ನಿದರ್ಶನ. ಈ ಪಂದ್ಯದಲ್ಲಿ ದಾಖಲೆಯ 127 ಎಸೆತಗಳು ಡಾಟ್ ದಾಖಲಾಗಿತ್ತು. ಅಲ್ಲದೆ ಬೌನ್ಸರ್ ಎಸೆತಗಳನ್ನು ಸರಿಯಾಗಿ ಗ್ರಹಿಸಿಕೊಳ್ಳಲು ಸಾಧ್ಯವಾಗದೆ ಬ್ಯಾಟರ್ಗಳು ಚೆಂಡಿನೇಟು ತಿಂದಿದ್ದರು. ಎಷ್ಟೇ ಟ್ರಿಕ್ಕಿ ಪಿಚ್ನಲ್ಲಿಯೂ ಕೊಹ್ಲಿ ನಿಂತು ಆಡುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಹೀಗಾಗಿ ಅವರು ಮಧ್ಯಮ ಕ್ರಮಾಂಕದಲ್ಲೇ ಆಡಿದರೆ ಸೂಕ್ತ ಎನ್ನಬಹುದು.