ನ್ಯೂಯಾರ್ಕ್: ಭಾರತ(India vs Ireland) ತಂಡ ತನ್ನ ಟಿ20 ವಿಶ್ವಕಪ್(T20 World Cup 2024) ಅಭಿಯಾನವನ್ನು ಇಂದು(ಬುಧವಾರ) ಆರಂಭಿಸಲಿದೆ. ಎದುರಾಳಿ ಐರ್ಲೆಂಡ್. ಆದರೆ, ಪಂದ್ಯಕ್ಕೂ ಮುನ್ನವೇ ಅಭಿಮಾನಿಗಳಲ್ಲಿ ದೊಡ್ಡ ಕುತೂಹಲವೊಂದು ಮೂಡಿದೆ. ಇದೆಂದರೆ ರೋಹಿತ್ ಶರ್ಮ(Rohit Sharma) ಜತೆ ಇಂದು ಭಾರತದ ಇನಿಂಗ್ಸ್ ಆರಂಭಿಸುವುದು ಯಾರು ಎನ್ನುವುದು.
ಸದ್ಯದ ಮಾಹಿತಿ ಪ್ರಕಾರ ಮತ್ತು ಕೋಚ್ ರಾಹುಲ್ ದ್ರಾವಿಡ್ ಅವರ ಹೇಳಿಕೆ ಗಮನಿಸುವಾಗ ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಇನಿಂಗ್ಸ್ ಆರಂಭಿಸುವ ಸಾಧ್ಯತೆ ಕಂಡುಬಂದಿದೆ. ಒಂದು ವೇಳೆ ಕೊಹ್ಲಿ ಓಪನಿಂಗ್ ಬಂದರೆ ಜೈಸ್ವಾಲ್ ವನ್‌ಡೌನ್‌ನಲ್ಲಿ ಬರಬಹುದು. ಜೈಸ್ವಾಲ್ ಆರಂಭಿಕ ಆಟಗಾರನಾಗಿರುವ ಕಾರಣ ಅವರು ಮಧ್ಯಮ ಕ್ರಮಾಂಕಕ್ಕೆ ಒಗ್ಗಿಕೊಳ್ಳುವರೇ ಎನ್ನುವ ಪ್ರಶ್ನೆಯೂ ಇಲ್ಲಿ ಸಹಜವಾಗಿಯೇ ಮೂಡಿದೆ. ಉಳಿದ ಕ್ರಮಾಂಕದಲ್ಲಿ ಯಾವುದೇ ಗೊಂದಲ ಇಲ್ಲ.
ನಸೌ ಕ್ರಿಕೆಟ್ ಸ್ಟೇಡಿಯಂನ ಪಿಚ್ ಕೂಡ ಅತ್ಯಂತ ಆಘಾತಕಾರಿಯಾಗಿ ವರ್ತಿಸುತ್ತಿದೆ. ಬ್ಯಾಟರ್ಗಳು ಇಲ್ಲಿ ರನ್ಗಳಿಸಲು ಪರದಾಡುತ್ತಿದ್ದಾರೆ. ಹೀಗಿರುವಾಗ ರೋಹಿತ್ ಮತ್ತು ವಿರಾಟ್ ಆರಂಭಿಕರಾಗಿ ಕಣಕ್ಕಿಳಿದು ಉಭಯ ಆಟಗಾರರು ಬೇಗನೆ ವಿಕೆಟ್ ಕಳೆದುಕೊಂಡರೆ ಆ ಬಳಿಕ ತಂಡಕ್ಕೆ ಯಾರು ಆಸರೆಯಾಗಬಲ್ಲರು ಎನ್ನು ಪ್ರಶ್ನೆ ಕೂಡ ಹುಟ್ಟಿಕೊಳ್ಳಲಿದೆ. ಕ್ರಿಕೆಟ್ ಪಂಡಿತರ ಪ್ರಕಾರ ರೋಹಿತ್ ಜತೆ ಜೈಸ್ವಾಲ್ ಅವರೇ ಆಡಿದರೆ ಉತ್ತಮ ಎನ್ನುವ ಸಲಹೆ ನೀಡಿದ್ದಾರೆ.
ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಹಾರ್ದಿಕ್ ಪಾಂಡ್ಯ ಅವರಂತ ಹೊಡಿ ಬಡಿ ಬ್ಯಾಟರ್ಗಳಿದ್ದರೂ ಕೂಡ ಇವರ ಪ್ರದರ್ಶನದ ಮೇಲೆ ಹೆಚ್ಚಿನ ನಂಬಿಕೆ ಇಡುವಂತಿಲ್ಲ. ಬಡಬಡನೆ ಒಂದೆರಡು ಸಿಕ್ಸರ್ ಮತ್ತು ಬೌಂಡರಿ ಬಾರಿಸಿ ವಿಕೆಟ್ ಕಳೆದುಕೊಳ್ಳುತ್ತಾರೆ. ನಿಂತು ಆಡುವ ಕಲೆ ಇವರಿಗೆ ಅಷ್ಟಾಗಿ ತಿಳಿದಿಲ್ಲ. ಬೌಲಿಂಗ್ ಬಗ್ಗೆ ತಂಡಕ್ಕೆ ಯಾವುದೇ ಚಿಂತೆಯಿಲ್ಲ. ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಚಹಲ್, ಸಿರಾಜ್ ಮತ್ತು ಜಡೇಜಾ ಈ ಪಿಚ್ನಲ್ಲಿ ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಇದೆ.
ಇದನ್ನೂ ಓದಿ India vs Ireland: ಇಂದು ನಡೆಯುವ ಭಾರತ-ಐರ್ಲೆಂಡ್ ಪಂದ್ಯಕ್ಕೆ ಮಳೆ ಭೀತಿ ಇದೆಯೇ?
ಪಂತ್-ಸ್ಯಾಮ್ಸನ್ ಮಧ್ಯೆ ಯಾರಿಗೆ ಅವಕಾಶ?
ವಿಕೆಟ್ ಕೀಪರ್ಗಳಾಗಿರುವ ರಿಷಭ್ ಪಂತ್ ಮತ್ತು ಸಂಜು ಸ್ಯಾಮ್ಸನ್ ಮಧ್ಯೆಯೂ ತೀವ್ರ ಪೈಪೋಟಿ ಏರ್ಪಟ್ಟಿದೆ. ಬಾಂಗ್ಲಾದೇಶ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಪಂತ್ ಅರ್ಧಶತಕ ಬಾರಿಸಿದರೂ ಕೂಡ ಮೂಲಗಳ ಪ್ರಕಾರ ಸಂಜು ಅವರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎನ್ನಲಾಗಿದೆ. ಏಕೆಂದರೆ ಅನೇಕ ಮಾಜಿ ಹಿರಿಯ ಆಟಗಾರರು ಪಂತ್ಗೆ ಅವಕಾಶ ನೀಡಿದರೆ ಸೂಕ್ತ ಎನ್ನುತ್ತಿದ್ದಾರೆ. ಇದನ್ನು ಗಮನಿಸುವಾಗ ಪಂತ್ ಮೊದಲ ಆಯ್ಕೆ ಕೀಪರ್ ಅಲ್ಲ ಎಂದು ಭಾಸವಾಗುತ್ತಿದೆ.