ಪಲ್ಲೆಕೆಲೆ: ಭಾರತ ಮತ್ತು ನೇಪಾಳ(India vs Nepal) ತಂಡಗಳ ನಡುವೆ ಇಂದು ನಡೆಯುವ ಪಂದ್ಯಕ್ಕೆ ಭಾರತ ತಂಡದಲ್ಲಿ(Asia Cup 2023) ಒಂದು ಬದಲಾವಣೆ ಖಚಿತಗೊಂಡಿದೆ. ಜಸ್ಪ್ರೀತ್ ಬುಮ್ರಾ ಮತ್ತು ಸಂಜನಾ ಗಣೇಶನ್ ತಮ್ಮ ಮೊದಲ ಮಗುವಿನ ಜನನದ ನಿರೀಕ್ಷೆಯಲ್ಲಿದ್ದಾರೆ. ಹೀಗಾಗಿ ಬುಮ್ರಾ ಅವರು ದಿಢೀರ್ ಭಾರತಕ್ಕೆ ಮರಳಿದ್ದಾರೆ. ಬುಮ್ರಾ ಬದಲು ಮೊಹಮ್ಮದ್ ಶಮಿ ಆಡುವ ಅವಕಾಶ ಪಡೆಯುವ ಸಾಧ್ಯತೆ ಇದೆ. ಪಾಕಿಸ್ತಾನ ವಿರುದ್ಧದ ಪಂದ್ಯದಂತೆ ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸುವ ಸಾಧ್ಯತೆ ಅಧಿಕವಾಗಿದೆ.
ಮಳೆ ಬಂದರೆ ಭಾರತಕ್ಕೆ ಲಾಭ
ಭಾರತದ ಸೂಪರ್-4 ಪ್ರವೇಶಕ್ಕೆ ಈ ಪಂದ್ಯ ನಿರ್ಣಾಯಕ. ಇಲ್ಲಿ ರೋಹಿತ್ ಬಳಗಕ್ಕೆ ಗೆಲುವು ಅನಿವಾರ್ಯ. ಒಂದೊಮ್ಮೆ ಮಳೆಯಿಂದ ಪಂದ್ಯ ರದ್ದುಗೊಂಡರೂ ಭಾರತಕ್ಕೆ ಯಾವುದೇ ಸಮಸ್ಯೆಯಾಗದು. ಏಕೆಂದರೆ ಪಾಕ್ ವಿರುದ್ಧದ ಪಂದ್ಯ ಮಳೆಯಿಂದ ರದ್ದುಗೊಂಡ ಕಾರಣ ಭಾರತಕ್ಕೆ ಒಂದು ಅಂಕ ಲಭಿಸಿತ್ತು. ನೇಪಾಳ ಪಾಕ್ ವಿರುದ್ಧ ಸೋಲು ಕಂಡಿತ್ತು. ಈ ಪಂದ್ಯವೂ ಮಳೆಯಿಂದ ರದ್ದಾದರೆ ನೇಪಾಳಕ್ಕೆ ಒಂದು ಅಂಕ ಸಿಕ್ಕರೂ ಭಾರತ ಒಟ್ಟು ಅಂಕ 2 ಆಗಲಿದೆ. ಆಗ ಭಾರತ ಕೂಡ ಸೂಪರ್ 4 ಪ್ರವೇಶ ಪಡೆಯಲಿದೆ. ಇದು ಭಾರತ-ನೇಪಾಳ ನಡುವಿನ ಮೊದಲ ಅಂತಾರಾಷ್ಟ್ರೀಯ ಪಂದ್ಯವಾಗಿದೆ.
ಶಮಿಗೆ ಅವಕಾಶ
ಹೆಚ್ಚುವರಿ ಬ್ಯಾಟರ್ನ ಪ್ರಯೋಗದಿಂದಾಗಿ ಅನುಭವಿ ಮೊಹಮ್ಮದ್ ಶಮಿ ಅವರನ್ನು ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಕೈಬಿಡಲಾಗಿತ್ತು. ಅವರ ಬದಲು ಶಾರ್ದೂಲ್ ಠಾಕೂರ್ಗೆ ಅವಕಾಶ ನೀಡಲಾಗಿತ್ತು. ಆದರೆ ಶಾರ್ದೂಲ್ ಮಾತ್ರ ಕೇವಲ ಮೂರು ರನ್ಗೆ ಔಟಾಗಿ ನಿರಾಸೆ ಮೂಡಿಸಿದ್ದರು. ಬುಮ್ರಾ ಅವರು ತವರಿಗೆ ಮರಳಿದ ಕಾರಣ ಅವರ ಸ್ಥಾನದಲ್ಲಿ ಶಮಿ ಅವರು ನೇಪಾಳ ವಿರುದ್ಧ ಕಣಕ್ಕಿಳಿಯಲಿದ್ದಾರೆ. ಬುಮ್ರಾ ತಂಡದಲ್ಲಿ ಇರುತ್ತಿದ್ದರೂ ಈ ಪಂದ್ಯಕ್ಕೆ ಶಮಿ ಅವರನ್ನು ಪರಿಗಣಿಸಿ ಶಾರ್ದೂಲ್ ಅವರನ್ನು ಹೊರಗಿಡುವ ಸಾಧ್ಯತೆಯೂ ಅಧಿಕವಾಗಿತ್ತು.
ಇದನ್ನೂ ಓದಿ IND vs PAK: ಲೈವ್ ಕಾಮೆಂಟ್ರಿಯಲ್ಲೇ ಕೊಹ್ಲಿಯನ್ನು ಟೀಕಿಸಿದ ಗೌತಮ್ ಗಂಭೀರ್
ಸಂಭಾವ್ಯ ತಂಡಗಳು
ಭಾರತ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಇಶಾನ್ ಕಿಶನ್ (ವಿಕೆಟ್ ಕೀಪರ್), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಕುಲದೀಪ್ ಯಾದವ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್.
ನೇಪಾಳ : ಕುಶಾಲ್ ಭುರ್ಟೆಲ್, ಆಸಿಫ್ ಶೇಖ್ (ವಿಕೆಟ್ಕೀಪರ್), ರೋಹಿತ್ ಪೌದೆಲ್ (ನಾಯ), ಆರಿಫ್ ಶೇಖ್, ಕುಶಾಲ್ ಮಲ್ಲಾ, ದೀಪೇಂದ್ರ ಸಿಂಗ್ ಐರಿ, ಗುಲ್ಸನ್ ಝಾ, ಸೋಮಪಾಲ್ ಕಾಮಿ, ಕರಣ್ ಕೆಸಿ, ಸಂದೀಪ್ ಲಾಮಿಚಾನೆ, ಲಲಿತ್ ರಾಜ್ಬನ್ಶಿ