ಹೈದರಾಬಾದ್: ಪ್ರವಾಸಿ ಶ್ರೀಲಂಕಾ ತಂಡವನ್ನು ಕ್ಲೀನ್ ಸ್ವೀಪ್ ಗೈದು ಸಂತಸದ ಅಲೆಯಲ್ಲಿ ತೇಲಾಡುತ್ತಿರುವ ಟೀಮ್ ಇಂಡಿಯಾ(IND VS NZ) ಮತ್ತೊಂದು ಏಕದಿನ ಸರಣಿಯನ್ನಾಡಲು ಸಜ್ಜಾಗಿದೆ. ಬುಧವಾರ(ಜನವರಿ 18) ನ್ಯೂಜಿಲ್ಯಾಂಡ್ ವಿರುದ್ಧ ಮೊದಲ ಏಕದಿನ ಪಂದ್ಯ ಆಡಲಿದೆ.
ಹೈದರಾಬಾದ್ನ ರಾಜೀವ್ ಗಾಂಧಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಉಭಯ ತಂಡಗಳ ಈ ಹೋರಾಟ ಜಿದ್ದಾಜಿದ್ದಿನಿಂದ ಕೂಡಿರುವ ಸಾಧ್ಯತೆ ಇದೆ. ಏಕೆಂದರೆ ಒಂದೆಡೆ ಭಾರತ ತಂಡ ಶ್ರೀಲಂಕಾವನ್ನು ಬಗ್ಗು ಬಡಿದು ಆತ್ಮವಿಶ್ವಾಸ ಹೆಚ್ಚಿಸಿಕೊಂಡಿದ್ದರೆ. ಮತ್ತೊಂದೆಡೆ ನ್ಯೂಜಿಲ್ಯಾಂಡ್ ತವರಿನಲ್ಲೇ ಪಾಕಿಸ್ತಾನಕ್ಕೆ ಸೋಲುಣಿಸಿದ ಖಷಿಯಲ್ಲಿದೆ. ಆದ್ದರಿಂದ ಸಹಜವಾಗಿಯೇ ಈ ಪಂದ್ಯ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿದೆ.
ಮತ್ತೊಂದು ಶತಕ ಬಾರಿಸುವರೇ ವಿರಾಟ್ ಕೊಹ್ಲಿ
ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಎರಡು ಶತಕ ಬಾರಿಸಿ ಮಿಂಚಿದ ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ ಮೇಲೆ ಈ ಸರಣಿಯಲ್ಲೂ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ. ಜತೆಗೆ ಈ ಸರಣಿಯ ಪ್ರಮುಖ ಆಕರ್ಷಣೆಯೂ ಕೊಹ್ಲಿಯೇ ಆಗಿದ್ದಾರೆ. ಸತತ ಬ್ಯಾಟಿಂಗ್ ವೈಫಲ್ಯದಿಂದ ಟೀಕೆಗೆ ಗುರಿಯಾಗದ್ದ ಕೊಹ್ಲಿ ಇದೀಗ ತಮ್ಮ ಬ್ಯಾಟಿಂಗ್ ಮೂಲಕ ಹಲವು ದಾಖಲೆ ಬರೆಯುತ್ತಿದ್ದಾರೆ. ಈ ಇದೇ ಕಾರಣದಿಂದ ಅವರ ಮೇಲೆ ಹೆಚ್ಚಿನ ನಿರೀಕ್ಷೆ ಇದೆ.
ಕೊಹ್ಲಿಯ ಜತೆಗೆ ಯುವ ಆಟಗಾರ ಶುಭಮನ್ ಗಿಲ್ ಕೂಡಾ ಉತ್ತಮ ಬ್ಯಾಟಿಂಗ್ ಫಾರ್ಮ್ನಲ್ಲಿರುವುದು ತಂಡಕ್ಕೆ ಹೆಚ್ಚು ಪ್ಲಸ್ ಪಾಯಿಂಟ್. ಜತೆಗೆ ನಾಯಕ ರೋಹಿತ್ ಶರ್ಮಾ ಕೂಡ ತಂಡಕ್ಕೆ ಉತ್ತಮ ಆರಂಭ ನೀಡುತ್ತಿರುವುದು ಸಂತಸದ ವಿಚಾರ. ಆದರೆ ಮಧ್ಯಮ ಕ್ರಮಾಂಕದ ಆಟಗಾರ ಶ್ರೇಯಸ್ ಅಯ್ಯರ್ ಬೆನ್ನು ನೋವಿನಿಂದ ಈ ಸರಣಿಯಿಂದ ಹೊರಬಿದ್ದಿರುವುದು ತಂಡಕ್ಕೆ ಕೊಂಚ ಹಿನ್ನಡೆಯಾಗಿದೆ. ಇವರ ಬದಲು ರಜತ್ ಪಾಟೀದಾರ್ ತಂಡಕ್ಕೆ ಆಯ್ಕೆಯಾಗಿದ್ದಾರೆ. ಆದರೆ ಅವರು ಆಡುವ ಬಳಗದಲ್ಲಿ ಅವಕಾಶ ಪಡೆಯಲಿದ್ದಾರ ಎನ್ನುವುದನ್ನು ಕಾದು ನೋಡಬೇಕಿದೆ. ಒಂದೊಮ್ಮೆ ಅವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಅವಕಾಶ ಸಿಕ್ಕರೆ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಲಿದ್ದಾರೆ.
ಕಿವೀಸ್ ಕೂಡ ಸಮರ್ಥ ತಂಡ
ತಂಡದ ಖಾಯಂ ನಾಯಕ ಕೇನ್ ವಿಲಿಯಮ್ಸನ್ ಮತ್ತು ಘಾತಕ ವೇಗಿ ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಈ ಸರಣಿಗೆ ಅಲಭ್ಯರಾಗಿದ್ದರೂ ನ್ಯೂಜಿಲ್ಯಾಂಡ್ ಬಲಿಷ್ಠವಾಗಿದೆ. ಯುವ ಆಟಗಾರರನ್ನೇ ನೆಚ್ಚಿಕೊಂಡಿರುವ ಕಿವೀಸ್ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡೂ ವಿಭಾಗದಲ್ಲಿ ಸಮರ್ಥವಾಗಿ ಗೋಚರಿಸಿದೆ. ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ಟಾಮ್ ಲ್ಯಾಥಮ್ ತಂಡವನ್ನು ಮುನ್ನಡೆಸಲಿದ್ದಾರೆ.
ಡೆವೋನ್ ಕಾನ್ವೆ, ಫಿನ್ ಅಲೆನ್, ಡ್ಯಾರಿಲ್ ಮಿಚೆಲ್, ಮಿಚೆಲ್ ಸ್ಯಾಂಟ್ನರ್ ಅವರನ್ನೊಳಗೊಂಡ ಕಿವೀಸ್ ಯಾವ ಹಂತದಲ್ಲಾದರೂ ತಿರುಗಿ ಬಿದ್ದು ಪಂದ್ಯದ ಗತಿಯನ್ನೇ ಬದಲಿಸುವ ಸಾಮರ್ಥ್ಯಹೊಂದಿದೆ. ಆದ್ದರಿಂದ ಭಾರತ ಕಿವೀಸ್ ಸವಾಲನ್ನು ಗಂಭೀರವಾಗಿ ಪರಿಗಣಿಸಿ ಕಿವೀಸ್ ಕಿವಿ ಹಿಂಡಬೇಕಿದೆ.
ಇದನ್ನೂ ಓದಿ | IND VS NZ | ನ್ಯೂಜಿಲ್ಯಾಂಡ್ ವಿರುದ್ಧದ ಏಕದಿನ ಸರಣಿಯಿಂದ ಹೊರಬಿದ್ದ ಶ್ರೇಯಸ್ ಅಯ್ಯರ್!