Site icon Vistara News

Asia Cup 2023 : ಸೆಪ್ಟೆಂಬರ್ 2 ಮತ್ತು 10ರಂದು ಭಾರತ-ಪಾಕಿಸ್ತಾನ ಮುಖಾಮುಖಿ

Asia Cup 2023

ನವದೆಹಲಿ: ಏಷ್ಯಾ ಕಪ್ 2023ರಲ್ಲಿ (Asia Cup 2023) ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ತಂಡಗಳ ನಡುವಿನ ಪಂದ್ಯಗಳ ದಿನಾಂಕಗಳನ್ನು ನಿಗದಿಪಡಿಸಲಾಗಿದೆ ಎಂದು ವಿವಿಧ ವರದಿಗಳು ಹೇಳಿವೆ. ಮುಂಬರುವ ಏಷ್ಯಾ ಕಪ್ ನಲ್ಲಿ ಉಭಯ ದೇಶಗಳು ಪರಸ್ಪರ ಎರಡು ಬಾರಿ ಆಡುವ ನಿರೀಕ್ಷೆಯಿದೆ. ಉಭಯ ತಂಡಗಳ ನಡುವಿನ ಮೊದಲ ಗುಂಪು ಹಂತದ ಮುಖಾಮುಖಿ ಸೆಪ್ಟೆಂಬರ್ 2ರಂದು ನಡೆಯಲಿದ್ದು, ಎರಡನೇ ಸುತ್ತಿನ ಎರಡನೇ ಪಂದ್ಯ ಸೆಪ್ಟೆಂಬರ್ 10ರಂದು ನಡೆಯಲಿದೆ ಎಂದು ಹೇಳಲಾಗಿದೆ. ಭಾರತ ಮತ್ತು ಪಾಕಿಸ್ತಾನ ಎರಡೂ ಪಂದ್ಯಗಳು ಶ್ರೀಲಂಕಾದ ಡಂಬುಲಾ ಅಥವಾ ಕ್ಯಾಂಡಿಯಲ್ಲಿ ನಡೆಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.

ಏಷ್ಯಾಕಪ್ ಫೈನಲ್​ಗೆ ಭಾರತ ಮತ್ತು ಪಾಕಿಸ್ತಾನ ತಂಡಗಳು ಹೋಗುವ ಸಾಧ್ಯತೆಗಳು ಇರುವುದರಿಂದ ಮೂರನೇ ಬಾರಿಯೂ ಭಾರತ ಹಾಗೂ ಪಾಕಿಸ್ತಾನ ತಂಡಗಳು ಪರಸ್ಪರ ಎದುರಾಗುವ ಸಾಧ್ಯತೆಗಳಿವೆ. ಆಗಸ್ಟ್ 30 ಅಥವಾ 31ರಂದು ಮುಲ್ತಾನ್ ನಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಪಾಕಿಸ್ತಾನ ತಂಡ ನೇಪಾಳ ವಿರುದ್ಧ ಸೆಣಸಲಿದೆ. ಅದೇ ದಿನ ಟೂರ್ನಿಯ ಉದ್ಘಾಟನಾ ಸಮಾರಂಭವೂ ನಡೆಯಲಿದೆ ಎಂದು ಹೇಳಲಾಗಿದೆ. ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್ ಪಂದ್ಯಗಳಿಗೆ ಲಾಹೋರ್ ಕೂಡ ಆತಿಥ್ಯ ವಹಿಸಲಿದೆ.

ಇದನ್ನೂ ಓದಿ : Asian Games: ಸತತ ಎರಡನೇ ಬಾರಿ ಏಷ್ಯನ್ ಗೇಮ್ಸ್​ಗೆ ಅರ್ಹತೆ ಪಡೆಯುವಲ್ಲಿ ವಿಫಲವಾದ ಭಾರತ ಫುಟ್ಬಾಲ್​ ತಂಡ

ಪ್ರಸ್ತಾಪವನ್ನು ಒಪ್ಪಿಕೊಂಡರೆ ಪಾಕಿಸ್ತಾನ ತಂಡವು ನೇಪಾಳ ವಿರುದ್ಧದ ಆರಂಭಿಕ ಮುಖಾಮುಖಿಯ ನಂತರ ನೇರವಾಗಿ ಶ್ರೀಲಂಕಾಕ್ಕೆ ತೆರಳಲಿದೆ. ಏತನ್ಮಧ್ಯೆ, ಶ್ರೀಲಂಕಾ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನಗಳು ಪಂದ್ಯಾವಳಿಯ ಉಳಿದ ಭಾಗಕ್ಕಾಗಿ ಶ್ರೀಲಂಕಾಕ್ಕೆ ತೆರಳುವ ಮೊದಲು ಪಾಕಿಸ್ತಾನದಲ್ಲಿ ತಮ್ಮ ಗುಂಪು ಪಂದ್ಯಗಳನ್ನು ಆಡಲಿವೆ.

ಬುಧವಾರ ವೇಳಾಪಟ್ಟಿ ಘೋಷಣೆ

ಏಷ್ಯಾ ಕಪ್​ ಟೂರ್ನಿಯ ವೇಳಾಪಟ್ಟಿ ಬುಧವಾರ ಅಧಿಕೃತವಾಗಿ ಘೋಷಿಸಲಾಗುವುದು. ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ನಿರಾಕರಿಸಿದ ನಂತರ ನಜಾಮ್ ಸೇಥಿ ನೇತೃತ್ವದ ಹಳೆಯ ಪಿಸಿಬಿ ಕಾರ್ಯಕಾರಿ ಸಮಿತಿಯು ಪ್ರಸ್ತಾಪಿಸಿದ ಹೈಬ್ರಿಡ್ ಸ್ವರೂಪದ ಪ್ರಕಾರ ಈ ಟೂರ್ನಿಯ ಆಗಸ್ಟ್ 31 ರಿಂದ ಸೆಪ್ಟೆಂಬರ್ 17 ರವರೆಗೆ ನಡೆಯಲಿದೆ. ವಿವಿಧ ಅಡೆತಡೆಗಳ ಹೊರತಾಗಿಯೂ, ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಅಂತಿಮವಾಗಿ ಹೈಬ್ರಿಡ್ ಸ್ವರೂಪವನ್ನು ಅಳವಡಿಸಿಕೊಂಡಿದೆ. ಪಂದ್ಯಾವಳಿಯ ಮೊದಲ ನಾಲ್ಕು ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿದ್ದು, ನಂತರ ಫೈನಲ್ ಸೇರಿದಂತೆ ಒಂಬತ್ತು ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯ ವಹಿಸಿಕೊಳ್ಳಲಿವೆ.

ಪಿಸಿಬಿ ಕಾರ್ಯಕಾರಿ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಗೊಂಡ ಝಕಾ ಅಶ್ರಫ್ ಅವರು ಏಷ್ಯಾ ಕಪ್ ಹೈಬ್ರಿಡ್ ಮಾದರಿಯಲ್ಲಿ ನಡೆಯುವುದನ್ನು ಪ್ರತಿರೋಧಿಸಿದ್ದರು. ಆದಾಗ್ಯೂ, ಏಷ್ಯಾ ಕಪ್​ಗಾಗಿ ಹೈಬ್ರಿಡ್ ಮಾದರಿ ಯೊಂದಿಗೆ ಮುಂದುವರಿಯುವ ಮೂಲಕ ಮಂಡಳಿಯು ಎಸಿಸಿ ಮತ್ತು ಅದರ ಸದಸ್ಯರಿಗೆ ನೀಡಿದ ಭರವಸೆಯನ್ನು ಗೌರವಿಸುತ್ತದೆ ಎಂದು ಅವರು ನಂತರ ದೃಢಪಡಿಸಿದ್ದರು. ಅಶ್ರಫ್ ಈ ಪರಿಕಲ್ಪನೆಯನ್ನು ಸಂಪೂರ್ಣವಾಗಿ ಒಪ್ಪಿಕೊಳ್ಳದಿದ್ದರೂ, ಹಿಂದಿನ ನಿರ್ವಹಣೆಯ ನಿರ್ಧಾರವನ್ನು ಪಿಸಿಬಿ ಗೌರವಿಸುತ್ತದೆ ಎಂದು ಅವರು ಹೇಳಿದ್ದಾರೆ.

ಅಶ್ರಫ್ ಅವರನ್ನು ಪಿಸಿಬಿ ನಿರ್ವಹಣಾ ಸಮಿತಿಯ ಅಧ್ಯಕ್ಷರನ್ನಾಗಿ ನೇಮಿಸಿದಾಗ, ಅವರು ಪಾಕಿಸ್ತಾನದಲ್ಲಿ ನಡೆಯುವ ಏಷ್ಯಾ ಕಪ್ ಪಂದ್ಯಗಳ ಸಂಖ್ಯೆಯನ್ನು ವಿಸ್ತರಿಸುವ ಅವಕಾಶವನ್ನು ಕೇಳಿದ್ದರು. ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಪ್ರಕಾರ, ಪಾಕಿಸ್ತಾನವು ಈಗ ನಾಲ್ಕು ಏಷ್ಯಾ ಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ. ಏತನ್ಮಧ್ಯೆ, ಪಿಸಿಬಿಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಒಒ) ಸಲ್ಮಾನ್ ನಸೀರ್ ಅವರನ್ನು ಏಷ್ಯಾ ಕಪ್ ಪಂದ್ಯಾವಳಿಯ ನಿರ್ದೇಶಕರಾಗಿ ನೇಮಿಸಲಾಗಿದೆ.

Exit mobile version