ಕೊಲಂಬೊ: ಸಾಂಪ್ರದಾಯಿಕ ಬದ್ಧ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ತಾನ(INDvsPAK) ನಡುವಣ ಏಷ್ಯಾಕಪ್ನ(Asia Cup 2023) ಲೀಗ್ ಪಂದ್ಯವನ್ನು ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಮಳೆ ನಿರಾಸೆ ಉಂಟುಮಾಡಿತ್ತು. ಇದೀಗ ಇತ್ತಂಡಗಳ ಮಧ್ಯೆ ಮತ್ತೊಂದು ಪಂದ್ಯ ನಡೆಯಲಿದೆ. ಸೂಪರ್-4 ಹಂತದ(Asia Cup 2023 Super Fours Match) ಈ ಪಂದ್ಯ ಸೆಪ್ಟೆಂಬರ್ 10ರಂದು ನಡೆಯಲಿದೆ. ಆದರೆ ಅಭಿಮಾನಿಗಳಲ್ಲಿ ಪಂದ್ಯ ನಡೆಯದಿದ್ದರೆ ಇದಕ್ಕೆ ಮೀಸಲು ದಿನ ಇರಲಿದೆಯೇ? ಒಂದೊಮ್ಮೆ ಮೀಸಲು ದಿನಕ್ಕೂ ಮಳೆ ಬಂದರೆ ಏನು ಗತಿ? ಎಂಬ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಶೇ.77ರಷ್ಟು ಮಳೆ ಸಾಧ್ಯತೆ
ಪಲ್ಲೆಕೆಯಲ್ಲಿ ಮಳೆಯಿಂದ ಪಂದ್ಯಗಳಿಗೆ ಸಮಸ್ಯೆಯಾದ ಕಾರಣ ಕೊಲಂಬೊದ ಆರ್. ಪ್ರೇಮದಾಸ(R.Premadasa Stadium, Colombo) ಕ್ರೀಡಾಂಗಣದಲ್ಲಿ ನಿಗದಿಯಾಗಿದ್ದ ಸೂಪರ್-4 ಪಂದ್ಯಗಳನ್ನು ಬೇರೆಡೆಗೆ ಸ್ಥಳಾಂತರಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಏಷ್ಯನ್ ಕ್ರಿಕೆಟ್ ಕೌನ್ಸಿಲ್ಗೆ ಒತ್ತಾಯಿಸಿತ್ತು. ಆದರೆ ಪಾಕ್ನ ಈ ಮನವಿಯನ್ನು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತಿರಸ್ಕರಿಸಿತ್ತು. ಇದೀಗ ಕೊಲಂಬೊದಲ್ಲಿ ನಡೆಯುವ ಪಂದ್ಯಗಳಿಗೂ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಭಾರತ ಮತ್ತು ಪಾಕ್ ಪಂದ್ಯ ನಡೆಯುವ ಸೆಪ್ಟೆಂಬರ್ 10ಂದು ಬೆಳಗ್ಗಿನಿಂದಲೇ ಇಲ್ಲಿ ಶೇ.77ರಷ್ಟು ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಕೇವಲ ಭಾರತ ಮತ್ತು ಪಾಕ್ ಪಂದ್ಯ ಮಾತ್ರವಲ್ಲ ಉಳಿದಿರುವ 4 ಪಂದ್ಯಗಳು ಹಾಹೂ ಫೈನಲ್ಗೂ ಮಳೆ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಒಂದೊಮ್ಮೆ ವೇಳಾಪಟ್ಟಿಯ ದಿನದಂದು ಮಳೆಯಿಂದ ಪಂದ್ಯಗಳು ನಡೆಯದಿದ್ದರೆ ಈ ಪಂದ್ಯವನ್ನು ಮೀಸಲು ದಿನದಂದು ಮಾಡಲಾಗುವುದು ಎಂದು ಮೂಲಗಳು ತಿಳಿಸಿವೆ.
ಮಳೆ ಬಂದರೆ ಭಾರತ-ಪಾಕ್ ಮೀಸಲು ದಿನದಲ್ಲಿ ಪಂದ್ಯ
ಭಾನುವಾರ ನಡೆಯಬೇಕಿರುವ ಭಾರತ-ಪಾಕ್ ಪಂದ್ಯ ಮಳೆಯಿಂದ ರದ್ದುಗೊಂಡರೆ ಇದನ್ನು ಮೀಸಲು ದಿನವಾದ ಸೋಮವಾರ ಅಂದರೆ ಸೆಪ್ಟೆಂಬರ್ 11ರಂದು ನಡೆಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೀಗೆ ಸೂಪರ್-4ನ ಎಲ್ಲ ಪಂದ್ಯಗಳಿಗೂ ಮೀಸಲು ದಿನ ಇರಲಿದೆ ಎಂದು ಟೂರ್ನಿಯ ಆಯೋಜರು ತಿಳಿಸಿರುವುದಾಗಿ ‘ಲೇಟೆಸ್ಟ್ ಎಲ್ವಿ’ ಎಂಬ ವೆಬ್ಸೈಟ್ ವರದಿ ಮಾಡಿದೆ.
ಇದನ್ನೂ ಓದಿ Asia Cup 2023 : ಅಫ್ಘಾನಿಸ್ತಾನ ಭೀತಿಯಿಂದ ಪಾರಾದ ಶ್ರೀಲಂಕಾ, ಸೂಪರ್ 4 ಸ್ಥಾನ ಭದ್ರ
ಮೀಸಲು ದಿನಕ್ಕೂ ಮಳೆ ಬಂದರೆ ಆಗ ಎರಡು ತಂಡಗಳಿಗೂ ತಲಾ ಒಂದು ಅಂಕ ನೀಡಲಾಗುತ್ತದೆ. ಲೀಗ್ನಲ್ಲಿ ಗೆದ್ದ ರನ್ ರೇಟ್ ಆಧಾರದಲ್ಲಿ ತಂಡಗಳು ಮುಂದಿನ ಹಂತಕ್ಕೇರಲಿದೆ. ಫೈನಲ್ನಲ್ಲಿಯೂ ಮಳೆಯಿಂದ ಪಂದ್ಯ ನಡೆಸಲು ಸಾಧ್ಯವಾಗದಿದ್ದರೆ ಜಂಟಿಯಾಗಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಏಷ್ಯಾಕಪ್ ಸೂಪರ್-4 ಹಂತದ ವೇಳಾಪಟ್ಟಿ
ಸೆಪ್ಟೆಂಬರ್ 6- ಪಾಕಿಸ್ತಾನ Vs ಬಾಂಗ್ಲಾದೇಶ (ಲಾಹೋರ್)
ಸೆಪ್ಟೆಂಬರ್ 9- ಶ್ರೀಲಂಕಾ Vs ಬಾಂಗ್ಲಾದೇಶ (ಕೊಲಂಬೊ)
ಸೆಪ್ಟೆಂಬರ್ 10- ಭಾರತ Vs ಪಾಕಿಸ್ತಾನ (ಕೊಲಂಬೊ)
ಸೆಪ್ಟೆಂಬರ್ 12- ಭಾರತ Vs ಶ್ರೀಲಂಕಾ (ಕೊಲಂಬೊ)
ಸೆಪ್ಟೆಂಬರ್ 14- ಪಾಕಿಸ್ತಾನ Vs ಶ್ರೀಲಂಕಾ (ಕೊಲಂಬೊ)
ಸೆಪ್ಟೆಂಬರ್ 15- ಭಾರತ Vs ಬಾಂಗ್ಲಾದೇಶ (ಕೊಲಂಬೊ)
ಸೆಪ್ಟೆಂಬರ್ 17- ಫೈನಲ್ ಪಂದ್ಯ (ಕೊಲಂಬೊ)