ಮುಂಬಯಿ: ಭಾರತದ ಆತಿಥ್ಯದಲ್ಲಿ ನಡಯುವ 2023ರ ಏಕದಿನ ವಿಶ್ವ ಕಪ್ನ (World Cup 2023) ಸಂಪೂರ್ಣ ವೇಳಾಪಟ್ಟಿ ಬಿಡುಗಡೆಯಾಗಲಿ ಎಂದು ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಅಕ್ಟೋಬರ್ 5ರಿಂದ ನವೆಂಬರ್ ತನಕ ಭಾರತದಲ್ಲಿ ಈ ಟೂರ್ನಿ ನಡೆಯಲಿದೆ. ಆದಾಗ್ಯೂ, ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಪಂದ್ಯಾವಳಿಯ ಸಂಪೂರ್ಣ ಪಂದ್ಯಗಳನ್ನು ಇನ್ನೂ ಬಿಡುಗಡೆ ಮಾಡಿಲ್ಲ. ಏಕೆಂದರೆ ಬಿಸಿಸಿಐ ಇನ್ನೂ ವೇಳಾಪಟ್ಟಿಯನ್ನು ನೀಡದ ಕಾರಣ ಐಸಿಸಿಗೆ ಪಟ್ಟಿ ಬಿಡುಗಡೆ ಸಾಧ್ಯವಾಗುತ್ತಿಲ್ಲ. ಇದಕ್ಕೆ ಪ್ರಮುಖ ಕಾರಣ ಭಾರತ ಹಾಗೂ ಪಾಕಿಸ್ತಾನ ಕ್ರಿಕೆಟ್ ತಂಡಗಳ ನಡುವಿನ ವಿವಾದ.
ಏಷ್ಯಾ ಕಪ್ 2023ಕ್ಕೆ ಪಾಕಿಸ್ತಾನಕ್ಕೆ ಪ್ರಯಾಣಿಸಲು ಭಾರತ ತಂಡ ಹಿಂಜರಿಯುತ್ತಿರುವುದರಿಂದ ಪಾಕಿಸ್ತಾನವು ವಿಶ್ವ ಕಪ್ಗಾಗಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದೆ. ಹೀಗಾಗಿ ಎರಡೂ ಟೂರ್ನಿಗಳು ವಿವಾದಕ್ಕೆ ಸಿಲುಕಿದೆ. ಆದಾಗ್ಯೂ, ವರದಿಗಳ ಪ್ರಕಾರ, ವಿಶ್ವಕಪ್ ವೇಳಾಪಟ್ಟಿ ಕುರಿತು ಕೆಲವು ಅಪ್ಡೇಟ್ಗಳು ಹೊರಬಂದಿವೆ.
ಈ ಕುರಿತು ದೈನಿಕ್ ಜಾಗರಣ್ ವರದಿಯೊಂದನ್ನು ಮಾಡಿದ್ದು. ಪಂದ್ಯಾವಳಿಯ ಮೊದಲ ಪಂದ್ಯವು ನ್ಯೂಜಿಲೆಂಡ್ ಮತ್ತು ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯಾ ನಡುವೆ ನಡೆಯಲಿದೆ. ಉದ್ಘಾಟನಾ ಪಂದ್ಯವನ್ನು ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಮ್ನಲ್ಲಿ ಆಯೋಜಿಸುವುದು ಬಿಸಿಸಿಐ ಉದ್ದೇಶವಾಗಿದೆ. ಆದರೆ, ಪಾಕಿಸ್ತಾನ ತಂಡ ಅಹಮದಾಬಾದ್ನಲ್ಲಿ ಆಡುವುದಕ್ಕೆ ಹಿಂಜರಿಯುತ್ತಿದೆ. ಹೀಗಾಗಿ ಆ ಪಂದ್ಯವನ್ನು ಚೆನ್ನೈಗೆ ಶಿಫ್ಟ್ ಮಾಡಲು ಮುಂದಾಗಿದೆ. ಜತೆಗೆ ಪಾಕಿಸ್ತಾನ ತಂಡದ ಪಂದ್ಯಗಳನ್ನು ಹೈದರಾಬಾದ್ ಮತ್ತು ಚೆನ್ನೈನಲ್ಲಿ ನಡೆಸಲು ಯೋಜನೆ ರೂಪಿಸಿದೆ. ಆದರೆ ಎಷ್ಟೇ ಒತ್ತಡ ಬಂದರೂ ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಪಂದ್ಯ ಅಹಮದಾಬಾದ್ನಲ್ಲಿಯೇ ನಡೆಯಲಿದೆ ಎಂದು ಹೇಳಿದೆ. ಈ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಒತ್ತಡಕ್ಕೆ ಮಣಿಯುವುದಿಲ್ಲ ಎಂದಿದೆ. ನೀವು ಎಷ್ಟೇ ಕೂಗಾಡಿದ್ರೂ ಆ ಪಂದ್ಯ ಅಹಮದಾಬಾದ್ನಲ್ಲಿಯೇ ನಡೆಯಲಿದೆ ಎನ್ನಲಾಗಿದೆ.
ಇದನ್ನೂ ಓದಿ : World Cup 2023: ಈ ಸ್ಟೇಡಿಯಂನಲ್ಲಿ ಪಾಕ್ ತಂಡ ಭಾರತ ವಿರುದ್ಧ ವಿಶ್ವ ಕಪ್ ಆಡಲ್ಲವಂತೆ!
ಆಸ್ಟ್ರೇಲಿಯಾ ವಿರುದ್ಧದ ಭಾರತದ ಇತರ ಪ್ರಮುಖ ಪಂದ್ಯಗಳು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯಲಿವೆ. ಮತ್ತೊಂದೆಡೆ, ಪಂದ್ಯಾವಳಿಯಲ್ಲಿ ಐದು ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಲಖನೌನ ಅಟಲ್ಬಿಹಾರಿ ವಾಜಪೇಯಿ ಸ್ಟೇಡಿಯಮ್ನಲ್ಲಿ ಇಂಗ್ಲೆಂಡ್ ವಿರುದ್ಧ ಸೆಣಸಲಿದೆ. ಜಿಂಬಾಬ್ವೆಯಲ್ಲಿ ಜೂನ್ 18ರಿಂದ ಪ್ರಾರಂಭವಾಗಲಿರುವ ಐಸಿಸಿ ವಿಶ್ವಕಪ್ ಅರ್ಹತಾ ಪಂದ್ಯಗಳ ಮೂಲಕ ಎರಡು ತಂಡಗಳನ್ನು ಇನ್ನೂ ದೃಢಪಡಿಸಲಾಗಿಲ್ಲ.
ಟ್ರೋಫಿ ಬರಕ್ಕೆ ಅಂತ್ಯ ಹಾಡಲಿದೆಯೇ ಭಾರತ?
ಈ ಹಿಂದೆ 1987, 1996 ಮತ್ತು 2011ರ ಆವೃತ್ತಿಯ ಪಂದ್ಯಾವಳಿಯ ಆತಿಥ್ಯ ವಹಿಸಿದ್ದ ಭಾರತವು ಏಕದಿನ ವಿಶ್ವಕಪ್ಗೆ ಆತಿಥ್ಯ ವಹಿಸುತ್ತಿರುವುದು ಇದು ನಾಲ್ಕನೇ ಬಾರಿ. 1987 ಮತ್ತು 1996ರ ಆವೃತ್ತಿಗಳಲ್ಲಿ ಸೆಮಿಫೈನಲ್ ತಲುಪುವಲ್ಲಿ ಭಾರತ ತಂಡ ಯಶಸ್ವಿಯಾಗಿತ್ತು. ಎಂಎಸ್ ಧೋನಿ ನಾಯಕತ್ವದಲ್ಲಿ 2011 ರ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿತು.
2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಬಳಿಕ ಭಾರತ ಕಳೆದ 10 ವರ್ಷಗಳಿಂದ ಯಾವುದೇ ಐಸಿಸಿ ಪ್ರಶಸ್ತಿ ಗೆದ್ದಿಲ್ಲ. ಆದ್ದರಿಂದ, ಮುಂಬರುವ ಪಂದ್ಯಾವಳಿಯು ತಮ್ಮ ತವರು ನೆಲದಲ್ಲಿ ಟ್ರೋಫಿ ಬರವನ್ನು ಕೊನೆಗೊಳಿಸಲು ತಂಡಕ್ಕೆ ಪರಿಪೂರ್ಣ ಅವಕಾಶವಾಗಿದೆ.