Site icon Vistara News

IND vs PAK | ಭಾರತ ಮತ್ತು ಪಾಕಿಸ್ತಾನ ಪಂದ್ಯದಲ್ಲಿ ಆಟಗಾರರ ನಡುವಿನ ಬಿಗ್‌ ಫೈಟ್‌ಗಳು ಇಲ್ಲಿವೆ

ind vs pak

ದುಬೈ : ಭಾರತ ಹಾಗೂ ಪಾಕಿಸ್ತಾನ (IND vs PAK) ತಂಡಗಳ ನಡುವಿನ ಕ್ರಿಕೆಟ್‌ ಪಂದ್ಯವೆಂದರೆ ಜಿದ್ದಾಜಿದ್ದಿ ಕೊರತೆಯಿಲ್ಲ. ನೆರಹೊರೆಯ ದೇಶಗಳ ನಡುವಿನ ರಾಜಕೀಯ ಭಿನ್ನಾಭಿಪ್ರಾಯ ಕ್ರಿಕೆಟ್‌ ಪಂದ್ಯದ ವೇಳೆಯೂ ಹಲವು ಬಾರಿ ಪ್ರತಿಫಲನಗೊಂಡಿವೆ. ಇತ್ತಂಡಗಳ ಆಟಗಾರರು ಪರಸ್ಪರ ವೈರಿಗಳಂತೆ ಆಡಿರುವ ಘಟನೆಗಳು ಸಾಕಷ್ಟಿವೆ. ಮೈದಾನದಲ್ಲೇ ಮಾತಿನ ಚಕಮಕಿಗಳೂ ನಡೆದಿವೆ. ಇದೇ ಕಾರಣಕ್ಕೆ ಭಾರತ ಮತ್ತು ಪಾಕಿಸ್ತಾನ ನಡುವಿನ ಕ್ರಿಕೆಟ್‌ ಪಂದ್ಯವೆಂದರೆ ರೋಚಕತೆ ಹೆಚ್ಚು. ಈ ರೀತಿಯಾಗಿ ಉಭಯ ತಂಡಗಳ ಆಟಗಾರರು ಮೈದಾನದಲ್ಲೇ ಜಿದ್ದಿಗೆ ಬಿದ್ದಿರುವ ಕೆಲವು ಪ್ರಸಂಗಗಳ ಇಲ್ಲಿವೆ.

ಕಿರಣ್‌ ಮೋರೆ vs ಜಾವೆಂದ್‌ ಮಿಯಾಂದಾದ್‌, ಸಿಡ್ನಿ ೧೯೯೨

ಸಿಡ್ನಿಯಲ್ಲಿ ನಡೆದ ವಿಶ್ವ ಕಪ್‌ ಪಂದ್ಯದ ವೇಳೆ ಭಾರತ ತಂಡದ ವಿಕೆಟ್‌ ಕೀಪರ್‌ ಆಗಿದ್ದ ಕಿರಣ್‌ ಮೋರೆ ಅವರು ಸತತವಾಗಿ ಎದುರಾಳಿ ಜಾವೆದ್‌ ಮಿಯಾಂದಾದ್‌ ಅವರ ಕಾಲೆಳೆದಿದ್ದರು. ಫಾರ್ಮ್‌ ಕಳೆದುಕೊಂಡ ಚಿಂತೆಯಲ್ಲಿದ್ದ ಮಿಯಾಂದಾದ್‌ಗೆ ಇದರಿಂದ ಕಿರಿಕಿರಿ ಉಂಟಾಗಿತ್ತು. ಏತನ್ಮಧ್ಯೆ, ಮಿಯಾಂದಾದ್‌ ಅವರನ್ನು ರನ್‌ಔಟ್‌ ಮಾಡುವ ಅವಕಾಶವನ್ನು ಮೋರೆ ಕಳೆದುಕೊಂಡರು. ತಕ್ಷಣ ಕಪ್ಪೆಯಂತೆ ಕುಣಿದ ಮಿಯಾಂದಾದ್‌ , ಮೋರೆಯನ್ನು ಅಣಕಿಸಿದ್ದರು. ಈ ವಿಡಿಯೊ ಇಂದಿಗೂ ಭಾರತ ಹಾಗೂ ಪಾಕ್‌ ನಡುವಿನ ಪಂದ್ಯದ ಸಂದರ್ಭದಲ್ಲಿ ಮುನ್ನೆಲೆಗೆ ಬರುತ್ತದೆ.

ವೆಂಕಟೇಶ್‌ ಪ್ರಸಾದ್‌, ಅಮೀರ್‌ ಸೋಹೈಲ್‌ ೧೯೯೬, ಬೆಂಗಳೂರು

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ ಕನ್ನಡಿಗ ವೇಗದ ಬೌಲರ್‌ ವೆಂಕಟೇಶ್‌ ಪ್ರಸಾದ್‌ ಹಾಗೂ ಪಾಕಿಸ್ತಾನದ ಆರಂಭಿಕ ಬ್ಯಾಟರ್‌ ಅಮೀರ್‌ ಸೋಹೈಲ್‌ ನಡುವೆ ಚಕಮಕಿ ನಡೆದಿತ್ತು. ಆ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಭಾರತ ತಂಡ ೮ ವಿಕೆಟ್‌ಗೆ ೨೮೭ ರನ್‌ ಬಾರಿಸಿತ್ತು. ಗುರಿ ಬೆನ್ನಟ್ಟಲು ಆರಂಭಿಸಿದ ಪಾಕಿಸ್ತಾನವೂ ಸ್ಫೋಟಕ ಬ್ಯಾಟಿಂಗ್‌ ಮಾಡಿತು. ಆರಂಭಿಕರಾದ ಸಯೀದ್‌ ಅನ್ವರ್‌ ಹಾಗೂ ಸೋಹೈಲ್‌ ೧೦ ಓವರ್‌ಗಳಲ್ಲಿ ೮೪ ರನ್‌ ಬಾರಿಸಿದ್ದರು. ಏತನ್ಮಧ್ಯೆ, ಬೌಲಿಂಗ್‌ ಮಾಡುತ್ತಿದ್ದ ವೆಂಕಟೇಶ್‌ ಪ್ರಸಾದ್‌ ಸತತವಾಗಿ ರನ್‌ ಬಾರಿಸುತ್ತಿದ್ದ ಸೋಹೈಲ್‌ ಅವರನ್ನು ಅಣಕಿಸಿದರು. ಕೋಪಗೊಂಡ ಸೋಹೈಲ್‌ ಮುಂದಿನ ಎಸೆತದಲ್ಲಿ ಭರ್ಜರಿ ಫೋರ್‌ ಬಾರಿಸಿ, ವೆಂಕಟೇಶ್‌ ಅವರ ಕಡೆಗೆ ಬ್ಯಾಟ್‌ ತೋರಿಸಿ ಹೇಗಿದೆ ಎಂಬುದಾಗಿ ಸಂಜ್ಞೆ ಮಾಡಿದ್ದರು. ಅದರ ನಂತರದ ಎಸೆತದಲ್ಲಿಯೇ ಸೋಹೈಲ್‌ ಅವರನ್ನು ಕ್ಲೀನ್‌ ಬೌಲ್ಡ್‌ ಮಾಡಿದ ವೆಂಕಟೇಶ್‌ ಪ್ರಸಾದ್‌ ಅಬ್ಬರದ ಕೇಕೆ ಹಾಕಿದ್ದರು.

ಗೌತಮ್‌ ಗಂಭೀರ್‌ vs ಶಾಹಿದ್‌ ಅಫ್ರಿದಿ ಕಾನ್ಪುರ ೨೦೦೭

ಇದನ್ನು ಕರ್ಲೊಬಾಗ್‌ vs ಕರಾಚಿ ಫೈಟ್‌ ಎಂದೇ ಕರೆಯುತ್ತಾರೆ. ಕಾನ್ಪುರದಲ್ಲಿ ನಡೆದ ಈ ಪಂದ್ಯದಲ್ಲಿ ಪಾಕಿಸ್ತಾನದ ಸ್ಪಿನ್ನರ್‌ ಶಾಹಿದ್‌ ಅಫ್ರಿದಿ ಅವರ ಬೌಲಿಂಗ್‌ಗೆ ಗೌತಮ್‌ ಗಂಭೀರ್‌ ಫೋರ್‌ ಬಾರಿಸಿದ್ದರು. ಬಳಿಕ ಅಫ್ರಿದಿ ಅವರನ್ನು ದಿಟ್ಟಿಸಿ ನೋಡಿದ್ದರು ಭಾರತದ ಎಡಗೈ ಬ್ಯಾಟ್ಸ್‌ಮನ್‌. ಇದರಿಂದ ಕೆರಳಿದ ಅಫ್ರಿದಿ ಮಾತಿನ ತಿರುಗೇಟು ಕೊಟ್ಟರು. ಅಲ್ಲದೆ, ಮುಂದಿನ ಓವರ್‌ನಲ್ಲಿ ಸಿಂಗಲ್‌ ರನ್‌ಗಾಗಿ ಓಡುತ್ತಿದ್ದ ಗಂಭೀರ್‌ ಅವರಿಗೆ ಅಫ್ರಿದಿ ನಾನ್‌ಸ್ಟ್ರೈಕ್‌ ಎಂಡ್‌ನಲ್ಲಿ ಅಡಚಣೆ ಮಾಡಿದರು. ಕೋಪಗೊಂಡ ಗಂಭೀರ್‌ ಅಫ್ರಿದಿಯ ಎದೆಗೆ ಜೋರಾಗಿ ಗುದ್ದಿದರು. ಹೀಗಾಗಿ ಅವರಿಬ್ಬರ ನಡುವೆ ಮಾತಿನ ಚಕಮಕಿ ಶುರುವಾಯಿತು. ಕೊನೆಗೆ ಅಂಪೈರ್‌ ಇಯಾನ್‌ ಗೌಲ್ಡ್‌ ಜಗಳ ಬಿಡಿಸಬೇಕಾಯಿತು.

ಶೋಯಿಬ್‌ ಅಖ್ತರ್‌ vs ಹರ್ಭಜನ್‌ ಸಿಂಗ್‌, ದಂಬುಲಾ ೨೦೧೦

ಪಂಬಾಬಿ ಭಾಷೆಯ ಬೈಗುಳದಲ್ಲಿ ಮಾ ಮತ್ತು ಬೆಹೆನ್‌ (ತಾಯಿ ಮತ್ತು ಸಹೋದರಿ) ಬಳಕೆಗೆ ಮಿತಿಯಿಲ್ಲ. ಅಂತೆಯೇ ಶ್ರೀಲಂಕಾದ ದಂಬುಲಾದಲ್ಲಿ ನಡೆದ ಏಷ್ಯಾ ಕಪ್‌ ಪಂದ್ಯದಲ್ಲಿ ಕೊನೆಯ ನಾಲ್ಕು ಓವರ್‌ಗಳಲ್ಲಿ ಭಾರತಕ್ಕೆ ೩೬ ರನ್‌ಗಳು ಬೇಕಾಗಿದ್ದವು. ಆ ವೇಳೆ ಬೌಲಿಂಗ್‌ ಮಾಡುತ್ತಿದ್ದ ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಶೋಯೆಬ್‌ ಅಖ್ತರ್‌ ಸತತವಾಗಿ ಬೌನ್ಸರ್‌ ಹಾಕಿದ್ದರು. ಬ್ಯಾಟಿಂಗ್‌ ಮಾಡುತ್ತಿದ್ದ ಹರ್ಭಜನ್‌ ಸಿಂಗ್‌ಗೆ ಅದನ್ನು ಮುಟ್ಟಲೂ ಸಾಧ್ಯವಾಗಲಿಲ್ಲ. ಕೋಪಗೊಂಡ ಅವರು ʼಮಾ ಮತ್ತು ಬೆಹೆನ್‌ʼ ಪ್ರಯೋಗಿಸಿದರು. ಅತ್ತ ಅಖ್ತರ್‌ ಕೂಡ ತಮ್ಮದೇ ಶೈಲಿಯಲ್ಲಿ ಬೈಗುಳಗಳ ಸುರಿಮಳೆ ಸುರಿಸಿದರು. ಆದರೆ, ಅಮೀರ್‌ ಎಸೆತಕ್ಕೆ ಸಿಕ್ಸರ್‌ಗಳನ್ನು ಬಾರಿಸಿದ ಭಜಿ, ಪಂದ್ಯವನ್ನು ಗೆಲ್ಲಿಸುವ ಜತೆಗೆ ಅಖ್ತರ್‌ ಕಡೆಗೆ ವ್ಯಂಗ್ಯದ ನಗು ಬೀರಿದರು. ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಮುಖ ಬಾಡಿ ಹೋಗಿತ್ತು.

ಕಮ್ರಾನ್‌ ಅಕ್ಮಲ್‌ vs ಗೌತಮ್‌ ಗಂಭೀರ್‌ , ದಂಬಲಾ ೨೦೧೦

ಇದು ಹರ್ಭಜನ್‌ ಮತ್ತು ಅಖ್ತರ್‌ ಜಗಳವಾಡಿದ ಏಷ್ಯಾ ಕಪ್‌ ಪಂದ್ಯದಲ್ಲಿ ನಡೆದ ಮತ್ತೊಂದು ಗಲಾಟೆ. ಬ್ಯಾಟಿಂಗ್‌ ಮಾಡುತ್ತಿದ್ದ ಗಂಭೀರ್‌ ಅವರಿಗೆ ಸಹೀದ್‌ ಅಜ್ಮಲ್‌ ಅವರ ಎಸೆತವನ್ನು ಸ್ವೀಕರಿಸಲು ಸಾಧ್ಯವಾಗದೇ ಅದು ವಿಕೆಟ್‌ ಕೀಪರ್‌ ಕಮ್ರಾನ್‌ ಅಕ್ಮಲ್‌ ಅವರ ಕೈ ಸೇರಿತ್ತು. ಗಂಭೀರ್‌ ಔಟ್‌ ಎಂದು ಅಕ್ಮಲ್‌ ಸಿಕ್ಕಾಪಟ್ಟೆ ಅಪೀಲ್ ಮಾಡಿದ್ದರು. ಆದರೆ ಅಂಪೈರ್‌ಗಳು ಔಟ್‌ ನೀಡಲು ಒಪ್ಪಲಿಲ್ಲ. ಬಳಿಕ ಡ್ರಿಂಕ್ಸ್‌ ಬ್ರೇಕ್‌. ಈ ವೇಳೆ ಸಿಡಿದೆದ್ದ ಗಂಭೀರ್‌, ಅಕ್ಮಲ್‌ ಕಡೆಗೆ ತಿರುಗಿ ಕುಹಕವಾಡಿದರು. ಕೋಪಗೊಂಡ ಅಕ್ಮಲ್‌ ಗಂಭೀರ್‌ ಅವರತ್ತ ಮುನ್ನುಗ್ಗಿ ಬೈಯಲು ಆರಂಭಿಸಿದರು. ಬಳಿಕ ಇಬ್ಬರ ನಡುವೆ ಚಕಮಕಿ ನಡೆಯಿತು. ಬಳಿಕ ಅಂಪೈರ್‌ ಬಿಲ್ಲಿ ಬೌಡೆನ್‌ ಅಕ್ಮಲ್‌ಗೆ ತಡೆಯೊಡ್ಡಿದರೆ, ಗಂಭೀರ್‌ ಅವರನ್ನು ಕ್ಯಾಪ್ಟನ್‌ ಕೂಲ್‌ ಎಳೆದೊಯ್ದರು.

ಇದನ್ನೂ ಓದಿ | IND vs PAK | ಅರಬರ ನಾಡಲ್ಲಿ ಬದ್ಧ ಪ್ರತಿಸ್ಪರ್ಧಿಗಳ ಕದನ, ಹಳೆ ಸೇಡಿಗೆ ಪ್ರತಿಕಾರ ತೀರಿಸುವುದೇ ಭಾರತ?

Exit mobile version