ಹರಾರೆ : ಎರಡು ಪಂದ್ಯಗಳಲ್ಲಿ ಅಧಿಕಾರಯುತ ಜಯ ಸಾಧಿಸಿ ಸರಣಿಯನ್ನು ಇನ್ನೂ ಒಂದು ಪಂದ್ಯ ಬಾಕಿ ಇರುವಂತೆಯೇ ವಶ ಪಡಿಸಿಕೊಂಡಿರುವ ಕೆ. ಎಲ್ ರಾಹುಲ್ ನೇತೃತ್ವದ ಪ್ರವಾಸಿ ಭಾರತ ತಂಡ, ಸೋಮವಾರ (ಆಗಸ್ಟ್ ೨೨) ನಡೆಯಲಿರುವ ಮೂರನೆ ಹಾಗೂ ಕೊನೇ ಪಂದ್ಯದಲ್ಲಿ (IND vs ZIM ODI) ಜಯ ಸಾಧಿಸುವ ಮೂಲಕ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಗುರಿಯನ್ನು ಹೊಂದಿದೆ. ಈ ಹಿಂದೆ ಎರಡು ಪಂದ್ಯಗಳು ನಡೆದ ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲೇ ಹಣಾಹಣಿ ನಡೆಯಲಿದ್ದು, ಮತ್ತೊಂದು ಬಾರಿ ಮಿಂಚುವ ವಿಶ್ವಾಸ ವ್ಯಕ್ತಪಡಿಸಿದೆ.
ಸರಣಿಯನ್ನು ಈಗಾಗಲೇ ವಶಪಡಿಸಿಕೊಂಡಿರುವ ಕಾರಣ ಭಾರತ ತಂಡಕ್ಕೆ ಮುಂದಿನ ವರ್ಷ ನಡೆಯಲಿರುವ ಏಕ ದಿನ ವಿಶ್ವ ಕಪ್ ಅನ್ನು ಗುರಿಯಾಗಿಟ್ಟುಕೊಂಡು ಆಟಗಾರರ ಪರೀಕ್ಷೆ ಮಾಡಲು ಅತ್ಯುತ್ತಮ ಅವಕಾಶವಾಗಿದೆ. ಪ್ರಮುಖವಾಗಿ ಕಳೆದೆರಡು ಪಂದ್ಯಗಳಲ್ಲಿ ಅವಕಾಶ ಪಡೆಯದೇ ಬೆಂಚು ಕಾಯ್ದಿದ್ದ ಆಟಗಾರರಿಗೆ ಅವಕಾಶ ನೀಡಿ ಬೆಂಚ್ ಸ್ಟ್ರೆಂಥ್ ಉತ್ತಮಪಡಿಸಿಕೊಳ್ಳಬಹುದು.
ಬಲಿಷ್ಠ ಬ್ಯಾಟಿಂಗ್ ಪಡೆ
ಹಿರಿಯ ಆಟಗಾರರನ್ನು ಹೊರತುಪಡಿಸಿಯೂ ಭಾರತ ತಂಡ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ಹೊಂದಿದೆ. ಶುಬ್ಮನ್ ಗಿಲ್ ಇದುವರೆಗೆ ಉತ್ತಮ ಪ್ರದರ್ಶನ ನೀಡುವ ಮೂಲಕ ಆಯ್ಕೆಗಾರರಿಗೆ ವಿಶ್ವಾಸ ಮೂಡುವಂತೆ ಮಾಡಿದ್ದಾರೆ. ಹಿರಿಯ ಆಟಗಾರ ಶಿಖರ್ ಧವನ್ ತಮ್ಮ ಹಳೆಯ ಕೆಚ್ಚನ್ನು ಇನ್ನೂ ಉಳಿಸಿಕೊಂಡಿದ್ದಾರೆ. ರಾಹುಲ್ ಎರಡನೇ ಪಂದ್ಯದಲ್ಲಿ ನಿರಾಸೆ ಮೂಡಿಸಿದ್ದರೂ, ಈ ಬಾರಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಶಾನ್ ಕಿಶನ್‌ಗೆ ಕೊನೇ ಪಂದ್ಯದಲ್ಲಿ ಅವಕಾಶ ಸಿಕ್ಕರೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕಾಗಿದೆ. ಸಂಜು ಸ್ಯಾಮ್ಸನ್ ಹಾಗೂ ದೀಪಕ್ ಹೂಡ ಅಗತ್ಯಕ್ಕೆ ತಕ್ಕ ಹಾಗೆ ಆಡಿದ್ದಾರೆ.
ಮಾದರಿ ಬೌಲಿಂಗ್
ಭಾರತ ತಂಡದ ಹಿರಿಯ ಹಾಗೂ ಅನುಭವಿ ಬೌಲರ್‌ಗಳ ಅನುಪಸ್ಥಿತಿ ಇದೆ. ಆದಾಗ್ಯೂ ಯುವ ಬೌಲರ್‌ಗಳಾದ ಶಾರ್ದುಲ್ ಠಾಕೂರ್, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ ಉರಿಚೆಂಡಿನ ದಾಳಿ ನಡೆಸಿ ಆತಿಥೇಯ ತಂಡ ಹೆಚ್ಚು ರನ್ ಗಳಿಸದಂತೆ ನೋಡಿಕೊಂಡಿದೆ. ಅಂತೆಯೇ ಅಕ್ಷರ್ ಪಟೇಲ್ ಬೌಲಿಂಗ್ ಆಲ್‌ರೌಂಡರ್ ಆಗಿ ತಂಡವನ್ನ ಕಾಪಾಡಲು ಸಜ್ಜಾಗಿದ್ದಾರೆ.
ಅತ್ತ ಯುವಕರ ತಂಡವನ್ನು ಹೊಂದಿರುವ ಜಿಂಬಾಬ್ವೆಗೆ ಕೊನೇ ಪಂದ್ಯದಲ್ಲಿ ಗೆದ್ದು ಮರ್ಯಾದೆ ಉಳಿಸಿಕೊಳ್ಳುವ ಯತ್ನ ಮಾಡಲಿದೆ.
ಸಂಭಾವ್ಯ ಭಾರತ ತಂಡ
ಶಿಖರ್ ಧವನ್, ಶುಬ್ಮನ್ ಗಿಲ್, ಕೆಎಲ್ ರಾಹುಲ್, ಇಶಾನ್ ಕಿಶನ್, ಸಂಜು ಸ್ಯಾಮ್ಸನ್, ದೀಪಕ್ ಹೂಡಾ, ಅಕ್ಷರ್ ಪಟೇಲ್, ದೀಪಕ್ ಚಾಹರ್, ಕುಲ್ದೀಪ್ ಯಾದವ್, ಪ್ರಸಿದ್ಧ್ ಕೃಷ್ಣ, ಮೊಹಮ್ಮದ್ ಸಿರಾಜ್.
ಪಂದ್ಯದ ವಿವರ
ಆರಂಭ : ಮಧ್ಯಾಹ್ನ ೧೨.೪೫ಕ್ಕೆ
ತಾಣ: ಹರಾರೆ ಸ್ಪೋರ್ಟ್ಸ್ ಕ್ಲಬ್ ಸ್ಟೇಡಿಯಮ್ ಹರಾರೆ
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್ ನೆಟ್ವರ್ಕ್ ಹಾಗೂ ಸೋನಿ ಲೈವ್ ಆಪ್