Site icon Vistara News

Asia Cup Cricket | ಬಿಡುವಿಲ್ಲದ ಕ್ರಿಕೆಟ್‌ ನಡುವೆ ಏಷ್ಯಾ ಕಪ್‌ಗೆ ಸಜ್ಜಾಗುತ್ತಿದೆ ಭಾರತ

asia cup cricket

ಮುಂಬಯಿ: ಭಾರತ ಕ್ರಿಕೆಟ್‌ ತಂಡ ಏಷ್ಯಾ ಕಪ್‌ನಲ್ಲಿ (Asia Cup Cricket) ಏಳು ಬಾರಿಯ ಚಾಂಪಿಯನ್‌. ಅದರಲ್ಲೂ ಕಳೆದ ಎರಡು ಆವೃತ್ತಿಗಳಲ್ಲಿ ಸತತವಾಗಿ ಪ್ರಶಸ್ತಿ ಗೆದ್ದಿದೆ. ಹೀಗಾಗಿ ಹ್ಯಾಟ್ರಿಕ್ ಟ್ರೋಫಿಯ ಕನಸಿನಲ್ಲಿರುವ ಟೀಮ್‌ ಇಂಡಿಯಾ ಭರ್ಜರಿ ಸದ್ದಿಲ್ಲದೇ ಸಿದ್ಧತೆ ನಡೆಸುತ್ತಿದೆ.

ಏಷ್ಯಾ ಕಪ್‌ ಕ್ರಿಕೆಟ್‌ ಆಗಸ್ಟ್‌ 27ರಿಂದ ಸೆಪ್ಟೆಂಬರ್‌ 11ರವರೆಗೆ ಶ್ರೀಲಂಕಾದಲ್ಲಿ ನಡೆಯಲಿದೆ ಎಂದು ಏಷ್ಯಾ ಕ್ರಿಕೆಟ್‌ ಕೌನ್ಸಿಲ್‌ ಹೇಳಿದೆ. ಆದರೆ, ದ್ವೀಪ ರಾಷ್ಟ್ರ ಎದುರಿಸುತ್ತಿರುವ ಆರ್ಥಿಕ ಹಿಂಜರಿತ ಸಮಸ್ಯೆ ದಿನೇದಿನೆ ಬಿಗಡಾಯಿಸುತ್ತಿರುವ ಕಾರಣ ಆ ದೇಶದಲ್ಲಿ ಪ್ರತಿಷ್ಠಿತ ಟೂರ್ನಿ ನಡೆಸಲು ಸಾಧ್ಯವೇ ಎಂಬ ಅನುಮಾನ ಸೃಷ್ಟಿಯಾಗಿದೆ. ಒಂದು ವೇಳೆ ಅಲ್ಲಿ ನಡೆಯದಿದ್ದರೆ, ಯುಎಇನಲ್ಲಿ ಟೂರ್ನಿಗೆ ಆತಿಥ್ಯ ವಹಿಸಬಹುದು. ಎಲ್ಲಾದರೂ ಸರಿ ಪ್ರಶಸ್ತಿ ಗೆಲ್ಲುವುದೇ ರೋಹಿತ್‌ ಶರ್ಮ ಬಳಗದ ಗುರಿ.

ಈ ಬಾರಿ ಟಿ20 ಮಾದರಿಯಲ್ಲಿ ಟೂರ್ನಿ ನಡೆಯುವ ಕಾರಣ ಜೂನ್‌ ಆರಂಭದ ಬಳಿಕ ಟೀಮ್‌ ಇಂಡಿಯಾ ಹಲವಾರು ಟಿ೨೦ ದ್ವಿ ಪಕ್ಷೀಯ ಸರಣಿಯಲ್ಲಿ ಪಾಲ್ಗೊಂಡು ನಿರಂತರ ಅಭ್ಯಾಸ ನಡೆಸಿದೆ. ಆಡುವ ಬಳಗ ಹಾಗೂ ಬೆಂಚ್‌ ಸ್ಟ್ರೆಂಥ್‌ ಎರಡನ್ನೂ ಬಲಿಷ್ಠಗೊಳಿಸಿದೆ. ಕೆಲವು ಹಿರಿಯ ಆಟಗಾರರನ್ನು ಹೊರತುಪಡಿಸಿದರೆ ಉಳಿದವರೆಲ್ಲರೂ ಉತ್ತಮ ಪ್ರದರ್ಶನ ನೀಡುವ ಸಂದೇಶವನ್ನು ಬಿಸಿಸಿಐಗೆ ರವಾನಿಸಿದೆ. ಸದ್ಯದ ಪರಿಸ್ಥಿತಿಯಲ್ಲಿ ಭಾರತಕ್ಕೆ ಟ್ರೋಫಿ ಗೆಲ್ಲುವ ಅವಕಾಶವಿದೆ. ಪಾಕಿಸ್ತಾನ ತಂಡವೊಂದನ್ನು ಹೊರತುಪಡಿಸಿದರೆ ಉಳಿದ ತಂಡಗಳಿಂದ ಭಾರತಕ್ಕೆ ಹೆಚ್ಚಿನ ಅಪಾಯವೇನೂ ಇಲ್ಲ.

2020ರಲ್ಲಿ ನಡೆದಿರಲಿಲ್ಲ

ಏಷ್ಯಾ ಕಪ್‌ ಕ್ರಿಕೆಟ್‌ ಎರಡು ವರ್ಷಕ್ಕೊಮ್ಮೆ ನಡೆಯುವ ಟೂರ್ನಿ. ಆದರೆ, ಕೊರೊನಾ ಹಿನ್ನೆಲೆಯಲ್ಲಿ 2020ರಲ್ಲಿ ಟೂರ್ನಿ ನಡೆದಿರಲಿಲ್ಲ. ಆದರೆ, 2018ರಲ್ಲಿ ಯುಎಇನಲ್ಲಿ ನಡೆದ ಏಕದಿನ ಏಷ್ಯಾ ಕಪ್‌ ಹಾಗೂ 2018ರಲ್ಲಿ ಬಾಂಗ್ಲಾದೇಶದಲ್ಲಿ ಆಯೋಜನೆಗೊಂಡ ಟಿ20 ಟೂರ್ನಿಯಲ್ಲಿ ಭಾರತವೇ ಚಾಂಪಿಯನ್‌ ಪಟ್ಟ ಅಲಂಕರಿಸಿದೆ. ಹೀಗಾಗಿ ಈ ಬಾರಿಯೂ ಪ್ರಶಸ್ತಿ ಗೆಲ್ಲುವ ಮೂಲಕ ಹ್ಯಾಟ್ರಿಕ್‌ ಸಾಧನೆ ಮಾಡುವುದು ಭಾರತದ ಗುರಿ.

ಭಾರತಕ್ಕೆ ಏಳು ಟ್ರೋಫಿಗಳು

ಶ್ರೀಲಂಕಾದಲ್ಲಿ ಆಯೋಜನೆಗೊಂಡಿರುವುದು 15ನೇ ಆವೃತ್ತಿಯ ಏಷ್ಯಾ ಕಪ್‌. ಅಂತೆಯೇ ಭಾರತ ತಂಡ ಇದುವರೆಗೆ 13 ಆವೃತ್ತಿಗಳ ಏಷ್ಯಾ ಕಪ್‌ ಟೂರ್ನಿಗಳಲ್ಲಿ ಭಾಗವಹಿಸಿದೆ. ರಾಜಕೀಯ ಕಾರಣಕ್ಕೆ ಒಂದು ಆವೃತ್ತಿಯಲ್ಲಿ ಪಾಲ್ಗೊಂಡಿಲ್ಲ. ಆದಾಗ್ಯೂ ಭಾರತ ತಂಡ ಒಟ್ಟಾರೆ 7 (ಏಕದಿನ ಹಾಗೂ ಟಿ20) ಬಾರಿ ಚಾಂಪಿಯನ್‌ ಆಗುವ ಮೂಲಕ ಗರಿಷ್ಠ ಟ್ರೋಫಿಗಳನ್ನು ತನ್ನದಾಗಿಸಿಕೊಂಡಿದೆ. ಶ್ರೀಲಂಕಾ ತಂಡ ಇದುವರೆಗೆ ನಡೆದಿರುವ ಎಲ್ಲ ಟೂರ್ನಿಗಳಲ್ಲಿ ಪಾಲ್ಗೊಂಡಿದ್ದು, ಅದರಲ್ಲಿ ಐದು ಬಾರಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ಪಾಕಿಸ್ತಾನ ತಂಡ ಎರಡು ಬಾರಿ ಟ್ರೋಫಿ ಗೆದ್ದಿದೆ. ಕಳೆದ ಆವೃತ್ತಿಯ ಏಷ್ಯಾ ಕಪ್‌, ಏಕದಿನ ಮಾದರಿಯಲ್ಲಿ ನಡೆದಿತ್ತು. ಫೈನಲ್‌ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವನ್ನು ಭಾರತ ಮೂರು ವಿಕೆಟ್‌ಗಳಿಂದ ಸೋಲಿಸಿ ಕಪ್‌ ಗೆದ್ದಿತ್ತು.

ಎಷ್ಟು ತಂಡಗಳು?

ಏಷ್ಯಾ ಖಂಡದ ಕ್ರಿಕೆಟ್‌ ದೇಶಗಳಾದ ಭಾರತ, ಪಾಕಿಸ್ತಾನ, ಶ್ರೀಲಂಕಾ, ಬಾಂಗ್ಲಾದೇಶ, ಅಫಘಾನಿಸ್ತಾನ ತಂಡಗಳು ಈ ಬಾರಿಯ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ ಯಲ್ಲಿ ಪಾಲ್ಗೊಳ್ಳಲಿವೆ. ಈ ಎಲ್ಲ ತಂಡಗಳ ಪೈಕಿ ಪ್ರಸ್ತುತ ಭಾರತ ಹಾಗೂ ಪಾಕಿಸ್ತಾನ ಬಲಿಷ್ಠ ತಂಡಗಳೆನಿಸಿಕೊಂಡಿವೆ. ರೋಹಿತ್‌ ಶರ್ಮ ನೇತೃತ್ವದ ಭಾರತ ಹಾಗೂ ಬಾಬರ್‌ ಅಜಮ್‌ ಮುಂದಾಳತ್ವದ ಪಾಕಿಸ್ತಾನ ತಂಡ ಟಿ೨೦ ಮಾದರಿಯಲ್ಲಿ ನಿರಂತರ ಗೆಲುವುಗಳನ್ನು ದಾಖಲಿಸುತ್ತಿವೆ. ಹೀಗಾಗಿ ಹಾಲಿ ಆವತ್ತಿಯಲ್ಲಿ ಈ ಎರಡು ತಂಡಗಳ ನಡುವೆ ಭರ್ಜರಿ ಪೈಪೋಟಿ ನಡೆಸುವುದು ಖಾತರಿಯಾಗಿದೆ.

ಭಾರತ ತಂಡ ಹೇಗಿರಬಹುದು?

ಕಳೆದ ಎರಡ್ಮೂರು ತಿಂಗಳಿಂದ ಭಾರತ ತಂಡ ನಿರಂತರವಾಗಿ ಟಿ20 ದ್ವಿಪಕ್ಷೀಯ ಸರಣಿಗಳಲ್ಲಿ ಪಾಳ್ಗೊಳ್ಳುತ್ತಿವೆ. ಏಷ್ಯಾ ಕಪ್‌ ಮತ್ತ ಮುಂದಿನ ಟಿ20 ವಿಶ್ವ ಕಪ್‌ಗೆ ತಂಡವನ್ನು ರಚಿಸುವ ಉದ್ದೇಶದಿಂದ ಬಿಸಿಸಿಐ ಈ ನಿರ್ಧಾರ ಕೈಗೊಂಡಿದೆ. ಹಿರಿಯ ಆಟಗಾರರಾದ ವಿರಾಟ್‌ ಕೊಹ್ಲಿ ಹಾಗೂ ರೋಹಿತ್‌ ಶರ್ಮ ಅವರನ್ನು ಬಿಟ್ಟರೆ ಉಳಿದ ಅಟಗಾರರೆಲ್ಲರೂ ತಮ್ಮ ಸಾಮರ್ಥ್ಯ ಮೀರಿ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ದೀಪಕ್ ಹೂಡಾ ಮತ್ತು ಸೂರ್ಯಕುಮಾರ್‌ ಯಾದವ್‌ ಆಡುವ 11ರ ಬಳಗಕ್ಕೆ ಸೇರಲು ಪೂರಕವಾಗಿ ಪ್ರದರ್ಶನ ನೀಡುತ್ತಿದ್ದಾರೆ.

ಸಂಭಾವ್ಯ ತಂಡ

ರೋಹಿತ್‌ ಶರ್ಮ (ನಾಯಕ), ಇಶಾನ್‌ ಕಿಶನ್‌, ಸೂರ್ಯಕುಮಾರ್‌ ಯಾದವ್‌, ದೀಪಕ್ ಹೂಡಾ, ವಿರಾಟ್‌ ಕೊಹ್ಲಿ, ರಿಷಭ್‌ ಪಂತ್‌, ಹಾರ್ದಿಕ್ ಪಾಂಡ್ಯ, ದಿನೇಶ್‌ ಕಾರ್ತಿಕ್‌, ರವೀಂದ್ರ ಜಡೇಜಾ, ಜಸ್‌ಪ್ರಿತ್‌ ಬುಮ್ರಾ, ಮೊಹಮ್ಮದ್‌ ಶಮಿ, ಭುವನೇಶ್ವರ್‌ ಕುಮಾರ್‌, ಉಮ್ರಾನ್‌ ಮಲಿಕ್‌, ಯಜ್ವೇಂದ್ರ ಚಹಲ್‌, ಕುಲ್ದೀಪ್ ಯಾದವ್‌, ಹರ್ಷಲ್‌ ಪಟೇಲ್‌.
ನೇರ ಪ್ರಸಾರ: ಭಾರತದಲ್ಲಿ ಏಷ್ಯಾ ಕಪ್‌ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್‌ ನೆಟ್ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ.

ಇದನ್ನೂ ಓದಿ | Asia cup T20 | ಶ್ರೀಲಂಕಾದಲ್ಲಿ ನಡೆಯುವುದು ಕಷ್ಟ, ಹಾಗಾದರೆ ಮತ್ತೆಲ್ಲಿ?

Exit mobile version