ದುಬೈ: ಐಸಿಸಿ ಟಿ೨೦ ವಿಶ್ವ ಕಪ್‌ನ (T20 World Cup) ಅಭ್ಯಾಸ ಪಂದ್ಯಗಳಲ್ಲಿ ಭಾರತ ತಂಡಕ್ಕೆ ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡ ಎದುರಾಗಲಿದೆ. ಈ ಹಣಾಹಣಿಗಳು ಅಕ್ಟೋಬರ್ ೧೭ ಹಾಗೂ ೧೯ರಂದು ನಡೆಯಲಿದೆ. ರೋಹಿತ್ ಶರ್ಮ ನೇತೃತ್ವದ ಭಾರತ ತಂಡ ಈ ಎರಡೂ ಪಂದ್ಯಗಳನ್ನು ಬ್ರಿಸ್ಬೇನ್‌ನ ಗಬ್ಬಾ ಸ್ಟೇಡಿಯಮ್‌ನಲ್ಲಿ ಆಡಲಿದೆ.
ಐಸಿಸಿ ಗುರುವಾರ ೧೬ ತಂಡಗಳು ಪಾಲ್ಗೊಳ್ಳುವ ಐಸಿಸಿ ಟಿ೨೦ ವಿಶ್ವ ಕಪ್‌ನ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಅಂತೆಯೇ ಐತಿಹಾಸಿಕ ಮೆಲ್ಬೋರ್ನ್ ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಅಕ್ಟೋಬರ್ ೧೦ರಿಂದ ೧೩ರವರೆಗೆ ಮೊದಲ ಸುತ್ತಿನ ತಂಡಗಳ ಅಭ್ಯಾಸ ಪಂದ್ಯಗಳು ಆಯೋಜನೆಗೊಂಡಿವೆ. ಬ್ರಿಸ್ಬೇನ್‌ನ ಗಬ್ಬಾ ಹಾಗೂ ಅಲನ್ ಬಾರ್ಡರ್ ಸ್ಟೇಡಿಯಮ್‌ನಲ್ಲಿ ೧೭ರಿಂದ ೧೯ರರೆಗೆ ನಂತರದ ಹಂತದ ಅಭ್ಯಾಸ ಪಂದ್ಯಗಳು ನಡೆಯಲಿವೆ.
ಅಕ್ಟೋಬರ್ ೧೦ರಂದು ವೆಸ್ಟ್ ಇಂಡೀಸ್ ಹಾಗೂ ಯುಎಇ ತಂಡಗಳ ನಡುವೆ ಜಂಕ್ಷನ್ ಓವಲ್‌ನಲ್ಲಿ ಅಭ್ಯಾಸ ಪಂದ್ಯ ಆಯೋಜನೆಗೊಂಡಿದ್ದರೆ, ಅಕ್ಟೋಬರ್ ೧೮ರಂದು ಪಾಕಿಸ್ತಾನ ಹಾಗೂ ಇಂಗ್ಲೆಂಡ್ ನಡುವೆ ಪಂದ್ಯ ಆಯೋಜನೆಗೊಂಡಿದೆ. ಅಂತೆಯೇ ಅಕ್ಟೋಬರ್ ೧೦ ಹಾಗೂ ೧೩ರಂದು ಶ್ರೀಲಂಕಾ ತಂಡ ಜಿಂಬಾಬ್ವೆ ಹಾಗೂ ಐರ್ಲೆಂಡ್ ತಂಡದ ವಿರುದ್ಧ ಆಡಲಿದೆ.
ಐಸಿಸಿ ಪುರುಷರ ವಿಶ್ವ ಕಪ್ ಅಕ್ಟೋಬರ್ ೧೬ರಂದು ಆರಂಭವಾಗಲಿದ್ದು, ಶ್ರೀಲಂಕಾ ತಂಡ ನಮೀಬಿಯಾ ತಂಡದ ನಡುವೆ ಗೀಲಾಂಗ್ ಸ್ಟೇಡಿಯಮ್‌ನಲ್ಲಿ ಪಂದ್ಯ ನಡೆಯಲಿದೆ.
ಇದನ್ನೂ ಓದಿ | Team India | ಟಿ20 ವಿಶ್ವ ಕಪ್ ಆಡಲು ನಾನು ಸಿದ್ಧ ಎಂದು ಸಂದೇಶ ರವಾನಿಸಿದ ಭಾರತದ ವೇಗಿ