ಡರ್ಬಾನ್: ಮುಂದಿನ ವರ್ಷ ನಡೆಯುವ ಟಿ20 ವಿಶ್ವಕಪ್ಗೆ ಬಲಿಷ್ಠ ತಂಡವನ್ನು ರಚಿಸುವ ಸಲುವಾಗಿ ಬಿಸಿಸಿಐ ಈಗಾಗಲೇ ಯುವ ಆಟಗಾರರನ್ನು ಆಡಿಸುವ ಮೂಲಕ ಪ್ರಯೋಗ ಆರಂಭಿಸಿದೆ. ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಟಗಾರರ ಪ್ರದರ್ಶನದ ಮೇಲೆ ನಿಗಾ ಇರಿಸಲು ಇಬ್ಬರು ಆಯ್ಕೆ ಸಮಿತಿಯ ಅಧಿಕಾರಿಗಳನ್ನು ಬಿಸಿಸಿಐ ದಕ್ಷಿಣ ಆಫ್ರಿಕಾಗೆ ಕಳುಹಿಸಿದೆ.
ಆಯ್ಕೆ ಸಮಿತಿಯ ಸದಸ್ಯರಾದ ಎಸ್‌ಎಸ್ ದಾಸ್ ಮತ್ತು ಸಲೀಲ್ ಅಂಕೋಲಾ ಅವರು ದಕ್ಷಿಣ ಆಫ್ರಿಕಾದಲ್ಲಿ ಡಿ.10 ರೀಂದ ಆರಂಭವಾಗಲಿರುವ ಟಿ20 ಸರಣಿಯ ವೇಳೆ ಹಾಜರಿರಲಿದ್ದು ಎಲ್ಲ ಆಟಗಾರರ ಪ್ರದರ್ಶನದ ಬಗ್ಗೆ ಮಾಹಿತಿ ಸಂಗ್ರಹಿಸಲಿದ್ದಾರೆ. ಈ ಮೂಲಕ ಮುಂದಿನ ವರ್ಷದ ಟಿ20 ವಿಶ್ವಕಪ್ನಲ್ಲಿ ಯಾವ ಆಟಗಾರನನ್ನು ಆಯ್ಕೆ ಮಾಡಬೇಕು ಎನ್ನುವುದನ್ನು ಪಟ್ಟಿ ಮಾಡಲಿದ್ದಾರೆ. ಹೀಗಾಗಿ ಸಿಕ್ಕ ಅವಕಾಶವನ್ನು ಯುವ ಆಟಗಾರರು ಸುದುಪಯೋಗ ಪಡಿಸಿಕೊಂಡು ಆಯ್ಕೆ ಸಮಿತಿಯ ಗಮನಸೆಳೆಯಬೇಕಿದೆ.
ವಿಶ್ವಕಪ್ಗೆ ಸಿದ್ಧತೆ
ಟಿ20 ವಿಶ್ವಕಪ್ ಟೂರ್ನಿಗೂ ಮುನ್ನ ಟೀಮ್ ಇಂಡಿಯಾ ಆಡುವ ಎಲ್ಲ ಟಿ20 ಸರಣಿಯಲ್ಲಿಯೂ ತಲಾ ಇಬ್ಬರು ಆಯ್ಕೆ ಸಮಿತಿಯ ಅಧಿಕಾರಿಗಳು ಆಟಗಾರರ ಪ್ರದರ್ಶನದ ಮೇಲ್ವಿಚಾರಣೆ ನಡೆಸಲಿದ್ದಾರೆ. ಹಿರಿಯ ಆಟಗಾರರಿಗೆ ಬಹುತೇಏಕ ಟಿ20 ಕ್ರಿಕೆಟ್ ಬಾಗಿಲು ಮುಚ್ಚಿದಂತೆ ತೋರುತ್ತಿದೆ. ಇದೇ ಕಾರಣಕ್ಕೆ ಬಿಸಿಸಿಐ ಕಳೆದ ವರ್ಷ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಟಿ20 ವಿಶ್ವಕಪ್ ಸೋಲಿನ ಬಳಿಕ ಎಲ್ಲ ಹಿರಿಯ ಆಟಗಾರರನ್ನು ತಂಡದಿಂದ ದೂರವೇ ಇರಿಸಿದೆ.
ಅಭ್ಯಾಸ ಆರಂಭಿಸಿದ ಟೀಮ್ ಇಂಡಿಯಾ
ಗುರುವಾರ ರಾತ್ರಿ ಡರ್ಬಾನ್ ತಲುಪಿರುವ ಟೀಮ್ ಇಂಡಿಯಾ ಆಟಗಾರರು ಶುಕ್ರವಾರ ಅಭ್ಯಾಸ ಆರಂಭಿಸಿದ್ದಾರೆ. ಈ ಮಾಹಿತಿಯನ್ನು ಬಿಸಿಸಿಐ(BCCI) ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದೆ. ಭಾರತ ತಂಡ ಭಾನುವಾರ ದಕ್ಷಿಣ ಆಫ್ರಿಕಾ(india vs south africa) ವಿರುದ್ಧ ಮೊದಲ ಪಂದ್ಯವನ್ನಾಡಲಿದೆ.
ಇದನ್ನೂ ಓದಿ ಡರ್ಬಾನ್ನಲ್ಲಿ ಅಭ್ಯಾಸ ಆರಂಭಿಸಿದ ಸೂರ್ಯ ಪಡೆ; ಎಚ್ಚರಿಕೆ ನೀಡಿದ ಕೋಚ್!
ಡರ್ಬಾನ್ ಭಾರತ ತಂಡದ ಆಟಗಾರರು ಅಭ್ಯಾಸ ಆರಂಭಿಸುವ ಮುನ್ನ ಗುಂಪಾಗಿ ನಿಂತು ಮಾತುಕತೆ ನಡೆಸುತ್ತಿರುವ ಫೋಟೊವನ್ನು ಹಂಚಿಕೊಂಡಿರುವ ಬಿಸಿಸಿಐ “ಡರ್ಬನ್‌ನಿಂದ ಹಲೋ, ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಟಿ20ಗೆ ನಮ್ಮ ಅಭ್ಯಾಸ ಆರಂಭ” ಎಂದು ಬರೆದುಕೊಂಡಿದೆ.
Hello 👋 from Durban. Our venue for the 1st T20I against South Africa.#SAvIND pic.twitter.com/9AfZPCChkB
— BCCI (@BCCI) December 8, 2023
ಕೋಚ್ ದ್ರಾವಿಡ್ ಅವರ ಸಲಹೆಯಂತೆ ಟೀಮ್ ಇಂಡಿಯಾದ ಎಲ್ಲ ಆಟಗಾರರು ಶುಕ್ರವಾರ ಹೆಚ್ಚುವರಿ ಬ್ಯಾಟಿಂಗ್ ಅಭ್ಯಾಸ ನಡೆಸಿದ್ದಾರೆ. ಶನಿವಾರವೂ ಕೂಡ ಬೌಲಿಂಗ್ಗಿಂತ ಬ್ಯಾಟಿಂಗ್ಗೆ ಅಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡುವ ಸಾಧ್ಯತೆ ಇದೆ. ಸೂರ್ಯಕುಮಾರ್, ಇಶಾನ್ ಕಿಶನ್, ಗಾಯಕ್ವಾಡ್ ಮತ್ತು ಯಶಸ್ವಿ ಜೈಸ್ವಾಲ್ ನೆಟ್ಸ್ನಲ್ಲಿ ಬೆವರು ಸುರಿಸಿದ ಫೋಟೊಗಳು ಕೂಡ ವೈರಲ್ ಆಗಿದೆ. ಒಟ್ಟಾರೆ ಮುಂದಿನ ವರ್ಷದ ಟಿ20 ವಿಶ್ವಕಪ್ಗೆ ದ್ರಾವಿಡ್ ಅವರು ಬಲಿಷ್ಠ ತಂಡವೊಂದನ್ನು ರಚಿಸಲು ಮುಂದಾಗಿರುವುದು ಖಚಿತವಾಗಿದೆ.