ಬೆಂಗಳೂರು: ಐದು ಪಂದ್ಯಗಳ ಟಿ20 ಸರಣಿಯ ಕೊನೇ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ (ind vs aus) ವಿರುದ್ಧ 6 ರನ್ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿಯನ್ನು ಭಾರತ ತಂಡ 4-1 ಅಂತರದಿಂದ ಕೈವಶ ಮಾಡಿಕೊಂಡಿದೆ. ರಾಯ್ಪುರದಲ್ಲಿ ನಡೆದಿದ್ದ ನಾಲ್ಕನೇ ಪಂದ್ಯದಲ್ಲಿ ಗೆಲುವು ಸಾಧಿಸುವುದರೊಂದಿಗೆ ಭಾರತ ತಂಡ ಸರಣಿಯನ್ನು ಗೆದ್ದುಕೊಂಡಿತ್ತು. ಹೀಗಾಗಿ ಐದನೇ ಪಂದ್ಯಕ್ಕೆ ಹೆಚ್ಚಿನ ಮೌಲ್ಯ ಇರಲಿಲ್ಲ. ಆದಾಗ್ಯೂ ಭಾರತ ತಂಡ ಸರ್ವತೋಮುಖ ಪ್ರದರ್ಶನ ನೀಡುವ ಮೂಲಕ ವಿಜಯ ತನ್ನದಾಗಿಸಿಕೊಂಡಿತು. ವಿಶ್ವ ಕಪ್ ಫೈನಲ್ ಸೋಲಿನ ಬಳಿಕ ಆಸ್ಟ್ರೇಲಿಯಾ ತಂಡದ ವಿರುದ್ಧವೇ ಸರಣಿ ಗೆಲ್ಲುವ ಮೂಲಕ ಭಾರತ ತಂಡ ಸಮಾಧಾನ ಮಾಡಿಕೊಂಡಿತು. ಇದೇ ವೇಳೆ ಒಟ್ಟು 136 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಗೆದ್ದಿರುವ ಏಕೈಕ ತಂಡ ಎಂಬ ಹೆಗ್ಗಳಿಕೆಯನ್ನೂ ಗಳಿಸಿತು.
ಚಿನ್ನಸ್ವಾಮಿ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತ ಭಾರತ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್ಗಳಿಗೆ 8 ವಿಕೆಟ್ ಕಳೆದುಕೊಂಡು 160 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮ್ಯಾಥ್ಯೂ ವೇಡ್ ನೇತೃತ್ವದ ಆಸ್ಟ್ರೇಲಿಯಾ ತಂಡ ನಿಗದಿತ 20 ಓವರ್ಗಳು ಮುಕ್ತಾಯಗೊಂಡಾಗ 154 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಆಸ್ಟ್ರೇಲಿಯಾ ತಂಡದ ಗೆಲುವಿಗೆ ಕೊನೇ ಓವರ್ನಲ್ಲಿ 10 ರನ್ ಬೇಕಾಗಿತ್ತು. ಟಿ20ಯಲ್ಲಿ ಇದು ದೊಡ್ಡ ಮೊತ್ತವೇ ಆಗಿರಲಿಲ್ಲ. ಆದರೆ, ಅರ್ಶ್ದೀಪ್ ಸಿಂಗ್ ಒಂದು ವಿಕೆಟ್ ಪಡೆಯುವ ಜತೆಗೆ ಕೇವಲ ನಾಲ್ಕು ರನ್ ನೀಡಿ ತಂಡವನ್ನು ಗೆಲ್ಲಿಸಿದರು.
ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟ್ಟಲು ಆರಂಭಿಸಿದ ಆಸ್ಟ್ರೇಲಿಯಾ ತಂಡ ನಿಯಮಿತವಾಗಿ ವಿಕೆಟ್ ಕಳೆದುಕೊಂಡಿತು. ಮಧ್ಯಮ ಕ್ರಮಾಂಕದಲ್ಲಿ ಬೆನ್ ಮೆಕ್ಡರ್ಮಾಟ್ (54) ಅರ್ಧ ಶತಕ ಬಾರಿಸಿ ತಂಡವನ್ನು ಗೆಲುವಿನೆಡೆಗೆ ಸಾಗಿಸುವ ಯತ್ನ ಮಾಡಿದರು. ಆದರೆ, ಉಳಿದವರ ನೆರವು ದೊರಕದ ಕಾರಣ ತಂಡ ಸೋತಿತು. ಅದಕ್ಕಿಂತ ಮೊದಲು ಆರಂಭಿಕ ಬ್ಯಾಟರ್ ಟ್ರಾವಿಡ್ ಹೆಡ್ 28 ರನ್ ಬಾರಿಸಿದರೆ ಕೊನೆಯಲ್ಲಿ ಮ್ಯಾಥ್ಯೂ ವೇಡ್ 22 ರನ್ ಬಾರಿಸಿದರೂ ತಂಡವನ್ನು ಗೆಲ್ಲಿಸಲು ಅವರಿಗೆ ಸಾಧ್ಯವಾಗಲಿಲ್ಲ.
ಇದನ್ನೂ ಓದಿ : IND vs SA : ಭಾರತದ ದಕ್ಷಿಣ ಆಫ್ರಿಕಾ ಪ್ರವಾಸ ಕುರಿತ ಪೂರ್ಣ ವಿವರ ಇಲ್ಲಿದೆ
ಭಾರತ ತಂಡ ಪರ ಬೌಲಿಂಗ್ನಲ್ಲಿ ಮುಖೇಶ್ ಕುಮಾರ್ 3 ವಿಕೆಟ್ ಪಡೆದರೆ ರವಿ ಬಿಷ್ಣೋಯ್ 2 ಹಾಗೂ ಅರ್ಶ್ದೀಪ್ ಸಿಂಗ್ 2 ವಿಕೆಟ್ ತಮ್ಮದಾಗಿಸಿಕೊಂಡರು.
ಸಾಧಾರಣ ಬ್ಯಾಟಿಂಗ್
ಬೆಂಗಳೂರಿನಲ್ಲಿ ಭಾರತ ತಂಡದ ಬ್ಯಾಟರ್ಗಳು ಅಬ್ಬರಿಸಬಹುದು ಎಂಬ ನಿರೀಕ್ಷೆ ಈ ಪಂದ್ಯದಲ್ಲಿ ಸುಳ್ಳಾಯಿತು. ಉತ್ತಮ ಆರಂಭ ನೀಡಿತ ಹೊರತಾಗಿಯೂ ಯಶಸ್ವಿ ಜೈಸ್ವಾಲ್ 15 ಎಸೆತಕ್ಕೆ 21 ರನ್ ಬಾರಿಸಿ ಔಟಾದರು. ಹೀಗಾಗಿ 33 ರನ್ಗೆ ಭಾರತ ಮೊದಲ ವಿಕೆಟ್ ಕಳೆದುಕೊಂಡಿತು. ಋತುರಾಜ್ ಗಾಯಕ್ವಾಡ್ ಕೂಡ 10 ರನ್ಗೆ ಸೀಮಿತಗೊಂಡರು. ಸೂರ್ಯಕುಮಾರ್ ಯಾದವ್ ಮತ್ತೆ ಬ್ಯಾಟಿಂಗ್ನಲ್ಲಿ ವೈಫಲ್ಯ ಎದುರಿಸಿ 5 ರನ್ಗೆ ಸೀಮಿತಗೊಂಡರು. ಹಿಂದಿನ ನಾಲ್ಕ ಪಂದ್ಯಗಳಲ್ಲಿ ತಂಡ ಗೆಲುವಿಗೆ ಪ್ರಾಮಾಣಿಕ ಕೊಡುಗೆ ಕೊಟ್ಟಿದ್ದ ರಿಂಕು ಸಿಂಗ್ ಇಲ್ಲಿ 6 ರನ್ಗೆ ಸೀಮಿತಗೊಂಡರು. ಈ ಸರಣಿಯಲ್ಲಿ ಇದು ಅವರ ಮೊದಲ ಒಂದಂಕಿ ಮೊತ್ತವಾಗಿದೆ. ಹೀಗಾಗಿ ಭಾರತ 55 ರನ್ಗಳಿಗೆ ಮೊದಲ ನಾಲ್ಕು ವಿಕೆಟ್ ಕಳೆದುಕೊಂಡಿತು.
ಶ್ರೇಯಸ್ ಅರ್ಧ ಶತಕ
ಭಾರತ ತಂಡ ಸಂಕಷ್ಟದಲ್ಲಿದ್ದ ವೇಳೆ ನೆರವಿಗೆ ನಿಂತ ಶ್ರೇಯಸ್ ಅಯ್ಯರ್ ಅರ್ಧ ಶತಕ ಬಾರಿಸಿತು. ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಅವರು ಆರಂಭದಲ್ಲಿ ನಿಧಾನಕ್ಕೆ ಆಡಿ ಬಳಿಕ ರನ್ ಗಳಿಕೆ ನೆರವಾದರು. 37 ಎಸೆತಗಳನ್ನು ಎದುರಿಸಿದ ಅವರು 5 ಫೊರ್ ಹಾಗೂ 2 ಸಿಕ್ಸರ್ಗಳನ್ನ ಬಾರಿಸಿ ಮಿಂಚಿದರು. ಇವರು ವಿಕೆಟ್ ಕೀಪರ್ ಜಿತೇಶ್ ಶರ್ಮಾ ಅವರ ಜತೆ ಅಮೂಲ್ಯ ಜತೆಯಾಟವಾಡಿದರು. ಜಿತೇಶ್ 16 ಎಸೆತಕ್ಕೆ 3 ಫೊರ್ ಹಾಗೂ 1 ಸಿಕ್ಸರ್ ಬಾರಿಸಿದರು. ಕೊನೆಯಲ್ಲಿ ಅಕ್ಷರ್ ಪಟೇಲ್ ಸಿಡಿದೆದ್ದರು. ಅವರು 21 ಎಸೆತಕ್ಕೆ 31 ರನ್ ಗಳ ಕೊಡುಗೆ ಕೊಟ್ಟರು. ಹೀಗಾಗಿ ಭಾರತದ ಗಳಿಕೆ ಹೆಚ್ಚಾಯಿತು.