Site icon Vistara News

ind vs wi : ಗೆಲ್ಲಲೇಬೇಕಾದ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ ತಂಡ

Suryakuamr Yadav

ಗಯಾನ: ವೆಸ್ಟ್​ ಇಂಡೀಸ್ ಪ್ರವಾಸದಲ್ಲಿನ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡ 7 ವಿಕೆಟ್​ಗಳ ಸುಲಭ ಜಯ ದಾಖಲಿಸಿದೆ. ಐದು ಪಂದ್ಯಗಳ ಸರಣಿಯನ್ನು ಜೀವಂತವಾಗಿರಿಸಲು ಗೆಲ್ಲಲೇಬೇಕಾದ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಬಳಗ ವಿಜಯ ಸಾಧಿಸಿತು. ಈ ಮೂಲಕ ಸರಣಿಯಲ್ಲಿ ಭಾರತ 1-2ರ ಅಂತರ ದಾಖಲಿಸಿಕೊಂಡಿತು. ಸೂರ್ಯಕುಮಾರ್ ಯಾದವ್​ 44 ಎಸೆತಗಳಲ್ಲಿ 83 ರನ್ ಬಾರಿಸುವ ಮೂಲಕ ಭಾರತ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ತಿಲಕ್​ ವರ್ಮಾ ಮತ್ತೊಂದು ಬಾರಿ ಮಿಂಚಿದರಲ್ಲದೆ 37 ಎಸೆತಗಳಲ್ಲಿ 49 ರನ್ ಬಾರಿಸಿ ಮಿಂಚಿದರು.

ಇಲ್ಲಿನ ಪ್ರಾವಿಡೆನ್ಸ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್​ ಗೆದ್ದ ವೆಸ್ಟ್​ ಇಂಡೀಸ್ ತಂಡ ಮೊದಲು ಬ್ಯಾಟಿಂಗ್ ಮಾಡಿ ನಿಗದಿತ 20 ಓವರ್​ಗಳಲ್ಲಿ 5 ವಿಕೆಟ್​ಗೆ 159 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಭಾರತ ತಂಡ ಇನ್ನೂ 13 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್​ ಕಳೆದಕೊಂಡು 164 ರನ್ ಬಾರಿಸಿತು.

ಸ್ಪರ್ಧಾತ್ಮಕ ಗುರಿಯನ್ನು ಬೆನ್ನಟ್ಟಲು ಹೊರಟ ಭಾರತ ತಂಡಕ್ಕೆ ಉತ್ತಮ ಆರಂಭ ದೊರೆಯಲಿಲ್ಲ. ಇಶಾನ್ ಕಿಶನ್ ಬದಲಿಗೆ ಅವಕಾಶ ಪಡೆದು ಟಿ20 ಮಾದರಿಗೆ ಪದಾರ್ಪಣೆ ಮಾಡಿದ ಯಶಸ್ವಿ ಜೈಸ್ವಾಲ್​ 1 ರನ್​ಗೆ ಔಟಾಗುವ ಮೂಲಕ ನಿರಾಸೆ ಎದುರಿಸಿದರು. ಶುಭ್​ಮನ್​ ಗಿಲ್ ಮತ್ತೆ ಬ್ಯಾಟಿಂಗ್ ವೈಫಲ್ಯ ಎದುರಿಸಿ 6 ರನ್​ಗೆ ಔಟಾದರು. ಅದಕ್ಕೂ ಅವರು 11 ಎಸೆತವನ್ನು ತೆಗೆದುಕೊಳ್ಳುವ ಮೂಲಕ ನಿರುತ್ಸಾಹ ಮೂಡಿಸಿದರು. ಈ ವೇಳೆ ಭಾರತ ತಂಡ 34 ರನ್​ಗಳಿಗೆ 2 ವಿಕೆಟ್​ ಕಳೆದುಕೊಂಡು ಆರಂಭಿಕ ಆಘಾತ ಎದುರಿಸಿತು.

ಸೂರ್ಯಕುಮಾರ್​ ಸ್ಫೋಟಕ ಬ್ಯಾಟಿಂಗ್​

ಈ ವೇಳೆ ಜತೆಯಾದ ಸೂರ್ಯಕುಮಾರ್ ಯಾದವ್​ ಹಾಗೂ ತಿಲಕ್ ವರ್ಮಾ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದರು. ವೆಸ್ಟ್​ ಇಂಡೀಸ್ ಬೌಲರ್​ಗಳನ್ನು ಸತತವಾಗಿ ದಂಡಿಸಿದ ಈ ಆಟಗಾರರು ಭಾರತದ ಗೆಲುವಿಗೆ ಮುನ್ನುಡಿ ಬರೆದರು. ಸೂರ್ಯಕುಮಾರ್ ಅವರು ತಮ್ಮ ವಿರಾಟ್​ ದರ್ಶನ ಮಾಡಿದರಲ್ಲದೆ 10 ಫೋರ್ ಹಾಗೂ 4 ಸಿಕ್ಸರ್ ಸಮೇತ 83 ರನ್ ಬಾರಿಸಿದರು. ಕೊನೆಯಲ್ಲಿ ಸೂರ್ಯಕುಮಾರ್ ಔಟಾದ ಬಳಿಕವೂ ತಿಲಕ್​ ವರ್ಮಾ ತಮ್ಮ ಸಾಮರ್ಥ್ಯ ಪ್ರದರ್ಶನ ಮಾಡಿದರು. ಆದರೆ, ನಾಯಕ ಹಾರ್ದಿಕ್ ಪಾಂಡ್ಯ ವಿನ್ನಿಂಗ್ ಸಿಕ್ಸರ್​ ಬಾರಿಸಿದ ಕಾರಣ ಅವರಿಗೆ ಅರ್ಧ ಶತಕ ಬಾರಿಸಲು ಅವಕಾಶ ಸಿಗಲಿಲ್ಲ.

ಇದನ್ನೂ ಓದಿ : the 6ixty: ಹೊಸ ಮಾದರಿಯ ಕ್ರಿಕೆಟ್‌ ಲೀಗ್‌ ಜಾರಿಗೆ ತಂದ ವೆಸ್ಟ್‌ ಇಂಡೀಸ್‌ ಕ್ರಿಕೆಟ್‌ ಮಂಡಳಿ

ವಿಂಡೀಸ್​ ಉತ್ತಮ ಆರಂಭ

ಅದಕ್ಕಿಂತ ಮೊದಲು ಬ್ಯಾಟ್​ ಮಾಡಿದ ವೆಸ್ಟ್​ ಇಂಡೀಸ್ ತಂಡ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿತು. ಮೊದಲ ವಿಕೆಟ್​ಗೆ 55 ರನ್ ಬಾರಿಸಿ ದೊಡ್ಡ ಮೊತ್ತ ಬಾರಿಸುವ ಸೂಚನೆ ನೀಡಿತು. ಆರಂಭಿಕ ಬ್ಯಾಟರ್​ ಬ್ರೆಂಡನ್ ಕಿಂಗ್​ 42 ರನ್ ಬಾರಿಸಿ ಮಿಂಚಿದರು. ಕೈಲ್​ ಮೇಯರ್ಸ್​ 25 ರನ್ ಬಾರಿಸಿದರೆ ಜೇಸನ್​ ಚಾರ್ಲ್ಸ್​​ 12 ರನ್​ ಬಾರಿಸಿದರು. ನಿಕೋಲಸ್ ಪೂರನ್ ಅಬ್ಬರಿಸುವ ಸೂಚನೆ ಕೊಟ್ಟರೂ ಸ್ಟಂಪ್​ ಔಟ್​ ಆಗಿ ನಿರ್ಗಮಿಸಿದರು. ನಾಯಕ ರೋವ್ಮನ್​ ಪೊವೆಲ್​ ಅಜೇಯ 40 ರನ್ ಬಾರಿಸಿದರು.

Exit mobile version