Site icon Vistara News

Ireland Tour: ಸರಣಿ ಕ್ಲೀನ್ ಸ್ವೀಪ್‌ ಮಾಡಿದ ಭಾರತ

ireland tour

ಮಲಾಹೈಡ್‌ (Ireland): ಐರ್ಲೆಂಡ್ ವಿರುದ್ಧದ ಎರಡನೇ ಟಿ೨೦ ಪಂದ್ಯದಲ್ಲಿ ಪ್ರವಾಸಿ ಭಾರತ ತಂಡ ವೀರೋಚಿತ ಜಯ ದಾಖಲಿಸಿದ್ದು, ಎರಡು ಪಂದ್ಯಗಳ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿದೆ. ಇದರೊಂದಿಗೆ ಆತಿಥೇಯ ತಂಡದ ವಿರುದ್ಧ ಇದುವರೆಗೆ ಆಡಿರುವ ಎಲ್ಲ ಐದು ಪಂದ್ಯಗಳನ್ನು ಗೆಲ್ಲುವ ಮೂಲಕ ವಿಜಯದ ಅಜೇಯ ಓಟ ಮುಂದುವರಿಸಿದೆ.

ಮಲಾಹೈಡ್‌ನ ದಿ ವಿಲೇಜ್‌ ಸ್ಟೇಡಿಯಮ್‌ನಲ್ಲಿ ಮಂಗಳವಾರ ರಾತ್ರಿ ನಡೆದ ಪಂದ್ಯದಲ್ಲಿ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡ ಭಾರತ ತಂಡ ನಿಗದಿತ ೨೦ ಓವರ್‌ಗಳಲ್ಲಿ೭ ವಿಕೆಟ್‌ ನಷ್ಟಕ್ಕೆ ೨೨೫ ರನ್ ಬಾರಿಸಿತು. ಗುರಿ ಬೆನ್ನಟ್ಟಿದ ಆಂಡಿ ಬಲ್ಬಿರಿನ್‌ ನೇತೃತ್ವದ ಐರ್ಲೆಂಡ್‌ ಭರ್ಜರಿಯಾಗಿ ಬ್ಯಾಟ್‌ ಬೀಸಿದ ಹೊರತಾಗಿಯೂ ತಮ್ಮ ಪಾಲಿನ ಓವರ್‌ಗಳು ಮುಕ್ತಾಯಗೊಂಡಾಗ ೫ ವಿಕೆಟ್‌ ನಷ್ಟಕ್ಕೆ ೨೨೧ ರನ್‌ ಗಳಿಸಲು ಶಕ್ತಗೊಂಡು ವೀರೋಚಿತವಾಗಿ ಸೋಲೊಪ್ಪಿಕೊಂಡಿತು.

ಬ್ಯಾಟಿಂಗ್‌ ಆರಂಭಿಸಿದ ಭಾರತ ಪರ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದಿದ್ದ ಸಂಜು ಸ್ಯಾಮ್ಸನ್‌ ೭೭ ರನ್‌ ಬಾರಿಸಿದರೆ, ದೀಪಕ್‌ ಕೂಡ ಅಜೇಯ ೧೦೪ ಬಾರಿಸಿದರು. ಈ ಜೋಡಿ ಎರಡನೇ ವಿಕೆಟ್‌ಗೆ ೧೭೬ ರನ್‌ ಬಾರಿಸುವ ಮೂಲಕ ಭಾರತ ತಂಡ ಬೃಹತ್‌ ಮೊತ್ತ ಪೇರಿಸಲು ನೆರವಾದರು. ಉಳಿದಂತೆ ಇಶಾನ್‌ ಕಿಶನ್‌ (೩), ಸೂರ್ಯಕುಮಾರ್‌ ಯಾದವ್‌ (೧೫), ಹಾರ್ದಿಕ್ ಪಾಂಡ್ಯ ಅಜೇಯ ೧೩ ರನ್‌ಗಳ ಕೊಡುಗೆ ಕೊಟ್ಟರು. ದಿನೇಶ್‌ ಕಾರ್ತಿಕ್‌, ಅಕ್ಷರ್‌ ಪಟೇಲ್‌ ಹಾಗೂ ಹರ್ಷಲ್‌ ಪಟೇಲ್‌ ಸೊನ್ನೆ ಸುತ್ತಿದರು.

ಐರ್ಲೆಂಡ್‌ ಮರು ಹೋರಾಟ

ಬೃಹತ್‌ ಗುರಿ ಬೆನ್ನಟ್ಟಲು ಆರಂಭಿಸಿದ ಐರ್ಲೆಂಡ್ ತಂಡ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ನಡೆಸಿತು. ಪಾಲ್‌ ಸ್ಟಿರ್ಲಿಂಗ್‌ (೪೦) ಹಾಗೂ ಆಂಡಿ ಬಲ್ಬಿರಿನ್‌ (೬೦) ಮೊದಲ ವಿಕೆಟ್‌ಗೆ ೭೨ ರನ್‌ ಬಾರಿಸಿ ರನ್‌ ಗಳಿಸಿ ಭದ್ರ ಬುನಾದಿ ಹಾಕಿಕೊಟ್ಟರು. ಬಳಿಕ ಹ್ಯಾರಿ ಟೆಕ್ಟರ್‌ (೩೯) ಮಧ್ಯಮ ಕ್ರಮಾಂಕದಲ್ಲಿ ಆಧಾರವಾದರೆ, ಕೊನೆಯಲ್ಲಿ ಜಾರ್ಜ್‌ ಡಾಕ್‌ರೆಲ್‌ (೩೪) ಹಾಗೂ ಮಾರ್ಕ್‌ ಅಡೈರ್‌ (೨೦) ಭಾರತದ ಗೆಲುವು ಕಸಿಯುವ ಯತ್ನ ನಡೆಸಿದರೂ ಅವರಿಗದು ಸಾಧ್ಯವಾಗಲಿಲ್ಲ.

ಪಂದ್ಯ ಗೆದ್ದ ಭಾರತ ತಂಡದ ಸಂಭ್ರಮ.

ಹೂಡಾ, ಸಂಜು ದಾಖಲೆ

ಭಾರತ ಪರ ಎರಡನೇ ವಿಕೆಟ್‌ಗೆ ೧೭೬ ರನ್ ಬಾರಿಸಿದ ದೀಪಕ್ ಹೂಡಾ ಮತ್ತು ಸಂಜು ಸ್ಯಾಮ್ಸನ್‌ ಜೋಡಿ ಭಾರತ ಪರ ಟಿ೨೦ಯಲ್ಲಿ ಗರಿಷ್ಠ ರನ್‌ಗಳ ಜತೆಯಾಟವನ್ನು ದಾಖಲಿಸಿದರು. ಈ ಹಿಂದೆ ರೋಹಿತ್‌ ಶರ್ಮ ಹಾಗೂ ಕೆ. ಎಲ್‌. ರಾಹುಲ್ ೨೦೧೭ರಲ್ಲಿ ಶ್ರೀಲಂಕಾ ವಿರುದ್ಧ ೧೬೫ ರನ್‌ಗಳ ಜತೆಯಾಟ ನೀಡಿದ್ದರು.

ದೀಪಕ್‌ ಶತಕ ಬಾರಿಸಿದ ನಾಲ್ಕನೇ ಆಟಗಾರ

೫೭ ಎಸೆತಗಳಲ್ಲಿ ೧೦೮ ರನ್ ಬಾರಿಸಿದ ದೀಪಕ್‌ ಹೂಡ ಭಾರತ ಪರ ಟಿ೨೦ ಮಾದರಿಯಲ್ಲಿ ಶತಕ ಬಾರಿಸಿದ ನಾಲ್ಕನೇ ಆಟಗಾರ ಎಂಬ ಖ್ಯಾತಿ ಗಳಿಸಿದರು. ಅವರು ೫೫ ಎಸೆತಗಳಲ್ಲಿ ಮೂರಂಕಿ ಮೊತ್ತ ದಾಟಿದ್ದರು.

ಸ್ಕೋರ್‌ ವಿವರ

ಭಾರತ ೨೦ ಓವರ್‌ಗಳಲ್ಲಿ ೭ ವಿಕೆಟ್‌ಗೆ ೨೨೫: ಸಂಜು ಸ್ಯಾಮ್ಸನ್‌ ೭೭, ದೀಪಕ್‌ ಹೂಡಾ ೧೦೪, ಇಶಾನ್ ಕಿಶನ್‌ ೩, ಸೂರ್ಯಕುಮಾರ್‌ ಯಾದವ್‌ ೧೫, ಹಾರ್ದಿಕ್‌ ಪಾಂಡ್ಯ ೧೩, ದಿನೇಶ್‌ ಕಾರ್ತಿಕ್‌ ೦, ಅಕ್ಷರ್ ಪಟೇಲ್‌ ೦, ಹರ್ಷಲ್‌ ಪಟೇಲ್‌ ೦. ಬೌಲಿಂಗ್‌: ಮಾರ್ಕ್‌ ಅಡೈಡ್‌ ೪೨ಕ್ಕೆ ೩, ಜೋಶ್‌ ಲಿಟಲ್‌ ೩೮ಕ್ಕೆ ೨, ಕ್ರೇಗ್‌ ಯಂಗ್‌ ೩೫ಕ್ಕೆ ೨.

ಐರ್ಲೆಂಡ್‌ ೨೦ ಓವರ್‌ಗಳಲ್ಲಿ ೫ ವಿಕೆಟ್‌ಗೆ ೨೨೧: ಪಾಲ್‌ ಸ್ಟಿರ್ಲಿಂಗ್‌ ೪೦, ಆಂಡಿ ಅಲ್ಬಿರಿನ್ ೬೦, ಹ್ಯಾರಿ ಟ್ರೆಕ್ಟರ್‌ ೩೯, ಜಾರ್ಜ್‌ ಡಾಕ್‌ರೆಲ್‌ ೩೪, ಮಾರ್ಕ್‌ ಅಡೈರ್‌ ೨೩. ಬೌಲಿಂಗ್‌: ಭುವನೇಶ್ವರ್‌ ಕುಮಾರ್‌ ೪೬ಕ್ಕೆ ೧, ಹರ್ಷಲ್‌ ಪಟೇಲ್‌ ೫೪ಕ್ಕೆ ೧, ರವಿ ಬಿಷ್ಣೋಯಿ ೪೧ಕ್ಕೆ೧, ಉಮ್ರಾನ್‌ ಮಲಿಕ್‌ ೪೨ಕ್ಕೆ ೧.

ಇದನ್ನೂ ಓದಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ (International Cricket) ವಿದಾಯ ಹೇಳಿದ ಇಯಾನ್‌ ಮಾರ್ಗನ್

Exit mobile version