Site icon Vistara News

CWG- 2022 | ಉದ್ಘಾಟನಾ ಕಾರ್ಯಕ್ರಮದಿಂದ ಅರ್ಧದಿಂದ ಎದ್ದು ಹೋದ ಲವ್ಲಿನಾ!

CWG- 2022

ಬರ್ಮಿಂಗ್‌ಹ್ಯಾಮ್‌: ಕಾಮನ್ವೆಲ್ತ್ ಗೇಮ್ಸ್‌ನ CWG- 2022 ಉದ್ಘಾಟನಾ ಕಾರ್ಯಕ್ರಮದಿಂದ ಅರ್ಧದಿಂದಲೇ ಎದ್ದು ಹೋಗಿರುವ ಟೋಕಿಯೊ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಮಹಿಳಾ ಬಾಕ್ಸರ್‌ ಲವ್ಲಿನಾ ಬೊರ್ಗೊಹೈನ್‌ ವಿರುದ್ಧ ಭಾರತದ ಅಥ್ಲೀಟ್‌ಗಳ ನಿಯೋಗದ ಮುಖ್ಯಸ್ಥರಾಗಿರುವ ರಾಜೇಶ್‌ ಭಂಡಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಭಾರತೀಯ ಕಾಲಮಾನ ಗುರುವಾರ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಲವ್ಲಿನಾ ಸೇರಿದಂತೆ ಭಾರತದ ಹಲವು ಕ್ರೀಡಾಪಟುಗಳು ಭಾಗವಹಿಸಿದ್ದರು. ಉದ್ಘಾಟನೆ ನಡೆದ ಅಲೆಕ್ಸಾಂಡರ್‌ ಸ್ಟೇಡಿಯಮ್‌ ಹಾಗೂ ಅಥ್ಲೀಟ್‌ಗಳು ಉಳಿದುಕೊಂಡಿರುವ ಕ್ರೀಡಾ ಗ್ರಾಮಕ್ಕೆ ಅರ್ಧಗಂಟೆಯ ಪ್ರಯಾಣವಿದೆ. ಏತನ್ಮಧ್ಯೆ, ಕಾರ್ಯಕ್ರಮ ನಡೆಯುತ್ತಿದ್ದ ನಡುವೆಯೇ ಲವ್ಲಿನಾ ಬೊರ್ಗೊಹೈನ್ ಹಾಗೂ ಮತ್ತೊಬ್ಬ ಬಾಕ್ಸರ್‌ ಹಸಮುದ್ದೀನ್‌ ಬಸ್‌ ಹತ್ತಿ ಕ್ರೀಡಾ ಗ್ರಾಮಕ್ಕೆ ವಾಪಸಾಗಿದ್ದಾರೆ.

ನಮಗೆ ಮರುದಿನ ಅಭ್ಯಾಸವಿತ್ತು. ಕಾರ್ಯಕ್ರಮ ತಡವಾಗುವ ಲಕ್ಷಣ ಕಂಡು ಬಂದ ಕಾರಣ ಬಸ್‌ನಲ್ಲಿ ಕ್ರೀಡಾ ಗ್ರಾಮಕ್ಕೆ ತೆರಳಿದೆವು ಎಂದು ಲವ್ಲಿನಾ ಹೇಳಿದ್ದಾರೆ.

ಇದಕ್ಕೆ ಭಾರತದ ಅಥ್ಲೀಟ್‌ಗಳ ನಿಯೋಗದ ಮುಖ್ಯಸ್ಥರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಅಶಿಸ್ತು ಎಂದು ಹೇಳಿದ್ದಾರೆ. ನಾವೆಲ್ಲರೂ ಬಸ್‌ನಲ್ಲಿಯೇ ಬಂದಿದ್ದೆವು. ಮರು ದಿನ ಅಭ್ಯಾಸ ಇರುವವರು ಉದ್ಘಾಟನಾ ಕಾರ್ಯಕ್ರಮಕ್ಕೆ ಬರುವ ಅಗತ್ಯ ಇಲ್ಲ ಎಂದು ಹೇಳಿದ್ದೆವು. ಆದರೂ ಲವ್ಲಿನಾ ಹಾಗೂ ಇನ್ನೊಬ್ಬರು ಬಂದಿದ್ದಾರೆ. ಅಲ್ಲದೆ, ಮಾಹಿತಿ ನೀಡದೆ ವಾಪಸ್‌ ಹೋಗಿದ್ದಾರೆ ಎಂದು ಹೇಳಿದ್ದಾರೆ.

ಕೆಲವು ದಿನಗಳ ಹಿಂದೆ ಬಾಕ್ಸರ್‌ ಲವ್ಲಿನಾ ಅವರು ಬಾಕ್ಸಿಂಗ್‌ ಫೆಡರೇಷನ್‌ ತಮಗೆ ಕೋಚ್‌ ನೀಡದೆ ಮಾನಸಿಕ ಹಿಂಸೆ ನೀಡುತ್ತಿದೆ ಎಂದು ಆರೋಪಿಸಿದ್ದರು. ಇದು ಅಥ್ಲೀಟ್‌ ಹಾಗೂ ಫೆಡರೇಷನ್‌ ನಡುವಿನ ಸಮರಕ್ಕೆ ಕಾರಣವಾಗಿತ್ತು. ಅದರ ಮುಂದುವರಿದ ಭಾಗವಾಗಿ ಲವ್ಲಿನಾ ಮೇಲೆ ಆರೋಪ ಹೊರಿಸಲಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ | CWG- 2022 | ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಇಂದು ಕಣದಲ್ಲಿರುವ ಭಾರತೀಯರು ಯಾರು?

Exit mobile version