ಮುಂಬಯಿ: ಭಾರತ ತಂಡ ಕಳೆದ 10 ವರ್ಷಗಳಿಂದ ಐಸಿಸಿ ಟ್ರೋಫಿ ಗೆಲ್ಲುವಲ್ಲಿ ವಿಫಲವಾಗುತ್ತಲೇ ಬರುತ್ತಿದೆ. ಕಳೆದ ಭಾನುವಾರ ಮುಕ್ತಾಯಕಂಡ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್(wtc final 2023) ಪಂದ್ಯದಲ್ಲಿಯೂ ಭಾರತ ತಂಡ ಆಸೀಸ್ ವಿರುದ್ಧ ಹೀನಾಯ ಸೋಲು ಕಂಡಿತ್ತು. ಈ ಮೂಲಕ ಸತತ 2ನೇ ಬಾರಿಗೆ ಫೈನಲ್‌ನಲ್ಲಿ ಸೋಲು ಕಂಡು ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ಈ ಸೋಲಿನ ಬೆನ್ನಲ್ಲೇ ಭಾರತ ತಂಡದಲ್ಲಿ(Indian Cricket) ಮಹತ್ವದ ಬದಲಾವಣೆ ಅಗತ್ಯವಿದೆ ಎಂದು ಕ್ರಿಕೆಟ್ ತಜ್ಞರು ಒತ್ತಾಯಿಸಲು ಆರಂಭಿಸಿದ್ದಾರೆ.
ಮೂರನೇ ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಮುಂದಿನ ತಿಂಗಳಿನಿಂದಲೇ ಶುರುವಾಗಲಿದೆ. ಇದಕ್ಕೆ ಈಗಿನಿಂದಲೇ ಭಾರತ ತಂಡ ಕೆಲ ಮಹತ್ವದ ಬದಲಾವಣೆಗಳನ್ನು ನಡೆಸಬೇಕು ಎಂದು ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ ಬಿಸಿಸಿಐಗೆ ಒತ್ತಾಯ ಕೂಡ ಮಾಡಿದ್ದಾರೆ. ತಂಡದಲ್ಲಿರುವ ಹಿರಿಯ ಆಟಗಾರರಾದ ಚೇತೇಶ್ವರ್ ಪೂಜಾರ, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಉಮೇಶ್ ಯಾದವ್, ಆರ್.ಅಶ್ವಿನ್ ಸೇರಿ ಕೆಲ ಆಟಗಾರರನ್ನು ಮುಂದಿನ ಟೆಸ್ಟ್ ಪಂದ್ಯಕ್ಕೆ ಪರಿಗಣಿಸಬಾರದು ಅವರು ಇದುವರೆಗೆ ಆಡಿದ್ದು ಸಾಕು, ಈಗಾಗಲೇ ಅವರಿಗೆ 30 ಪ್ಲಸ್ ವಯಸ್ಸು ಕಳೆದಿದೆ. ಹೀಗಾಗಿ ಮುಂದಿನ ಭವಿಷ್ಯದ ನಿಟ್ಟಿನಲ್ಲಿ ಯುವ ಆಟಗಾರರಿಗೆ ಅವಕಾಶ ನೀಡಬೇಕು ಎಂದು ಹಲವು ಮಾಜಿ ಕ್ರಿಕೆಟಿಗರು ಸಲಹೆ ನೀಡಿದ್ದಾರೆ.
2 ವರ್ಷ ತಂಡದಿಂದ ಹೊರಬಿದ್ದಿದ್ದ ರಹಾನೆ ದಿಢೀರನೆ ಟೆಸ್ಟ್ ತಂಡಕ್ಕೆ ಮರಳಿದ್ದರೂ ಇದು ದೀರ್ಘ ಕಾಲದ ಪರಿಹಾರವಲ್ಲ. ಹೀಗಿರುವಾಗ ಬಿಸಿಸಿಐ ಕೆಲ ಕಠಿಣ ನಿರ್ಧಾರಗಳನ್ನು ಕೈಗೊಳ್ಳಬೇಕಿದೆ. ಆಯ್ಕೆ ಸಮಿತಿ ಮುಂದೆ ಹಲವು ಆಯ್ಕೆಗಳಿವೆ. ಯುವ ಆಟಗಾರರಾದ ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್ ಸೇರಿ ರಣಜಿ ಕ್ರಿಕೆಟ್ನಲ್ಲಿ ಆಡಿದ ಹಲವು ಪ್ರತಿಭೆಗಳಿಗೆ ಅವಕಾಶ ನೀಡಿ ಅವರನ್ನು ಈಗಿಂದಲೇ ರೆಡಿ ಮಾಡಬೇಕು. ಕೇವಲ ಅವರನ್ನು ಆಯ್ಕೆಗೆ ಪರಿಗಣಿಸಿ ಬೆಂಚ್ ಕಾಯಿಸುವದಲ್ಲಿ ಯಾವುದೇ ಪ್ರಯೋಜನವಿಲ್ಲ. ಅವರಿಗೆ ಆಡಲು ಅವಕಾಶ ನೀಡಿದರೆ ಅವರ ಪ್ರದರ್ಶನ ನೋಡಲು ಸಾಧ್ಯ. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸಕ್ಕೆ ಸಂಪೂರ್ಣ ಹೊಸ ತಂಡವನ್ನು ಆಡಿಸಬೇಕು ಎಂದು ಭಾರತ ಕ್ರಿಕೆಟ್ ತಂಡದ ಅನೇಕ ದಿಗ್ಗಜರು ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ WTC Final 2023 : ಸೋಲಿನ ಬಳಿಕ ರಹಸ್ಯ ಸಂದೇಶ ಪೋಸ್ಟ್ ಮಾಡಿದ ವಿರಾಟ್ ಕೊಹ್ಲಿ!
ಸದ್ಯದ ಮಾಹಿತಿ ಪ್ರಕಾರ ಬಿಸಿಸಿಐ(BCCI) ಆಸೀಸ್ ವಿರುದ್ಧದ ಸೋಲಿನ ಬಳಿಕ ಕೆಲ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲು ಮುಂದಾಗಿದ್ದು ಅನೇಕ ಹಿರಿಯ ಆಟಗಾರರಿಗೆ ವೆಸ್ಟ್ ಇಂಡೀಸ್ ಪ್ರವಾಸದಿಂದ ಕೊಕ್ ನೀಡು ತೀರ್ಮಾನಿಸಿದೆ ಎಂದು ವರದಿಯಾಗಿದೆ.