ಮುಂಬಯಿ : ಭಾರತ ತಂಡ ಮುಂದಿನ ಏಷ್ಯಾ ಕಪ್‌ನಲ್ಲಿ ಪಾಲ್ಗೊಳ್ಳಲು ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿರುವ ಮಾತನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಅದಕ್ಕಾಗಿ ಅಗಾಗ ಕಾಲು ಕೆರೆದು ಜಗಳಕ್ಕೆ ನಿಲ್ಲುತ್ತಿದೆ. ಅಂತೆಯೇ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಅವರು ಶುಕ್ರವಾರ, ನೀವು ಬರದಿದ್ದರೆ, ನೀವು ಆಯೋಜಿಸುವ ಏಕ ದಿನ ವಿಶ್ವ ಕಪ್‌ಗೆ ನಾವು ಬರುವುದಿಲ್ಲ. ಹಾಗಾದರೆ ನಿಮ್ಮ ವಿಶ್ವ ಕಪ್ ನೋಡುವವರು ಯಾರು ಎಂದು ಪ್ರಶ್ನಿಸಿದ್ದರು. ಮಾತಿಗೆ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕೆಂಡಾಮಂಡಲರಾಗಿದ್ದು, ಬಗೆಬಗೆಯಲ್ಲಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಭಾರತ ತಂಡ ಪಾಕಿಸ್ತಾನಕ್ಕೆ ಹೋಗುವ ವಿಚಾರ ಭಾರತ ಸರ್ಕಾರದ ತೀರ್ಮಾನಕ್ಕೆ ಬದ್ಧವಾಗಿರುತ್ತದೆ. ಹೀಗಾಗಿ ಟೀಮ್ ಇಂಡಿಯಾ ಏಷ್ಯಾ ಕಪ್‌ಗೆ ಅಲ್ಲಿಗೆ ಹೋಗುವುದಿಲ್ಲ. ಎಲ್ಲದಕ್ಕಿಂತ ಮಿಗಿಲಾಗಿ ಏಷ್ಯಾ ಕಪ್ ತಟಸ್ಥ ತಾಣದಲ್ಲಿ ನಡೆಯುತ್ತದೆ ಎಂಬುದಾಗಿ ಹೇಳಿದ್ದರು. ಇದಕ್ಕೆ ಹಿಂದೊಮ್ಮೆ ಪಿಸಿಬಿ ಅಧ್ಯಕ್ಷ ರಮೀಜ್ ರಾಜಾ ಪ್ರತಿಕ್ರಿಯೆ ಕೊಟ್ಟಿದ್ದರು. ಅದನ್ನೇ ಶುಕ್ರವಾರ ಪುನರುಚ್ಚರಿಸಿ “ನಮ್ಮ ನಿಲುವು ಕೂಡ ಸ್ಪಷ್ಟ. ಭಾರತ ಬಂದರೆ ಮಾತ್ರ ೨೦೨೩ರಲ್ಲಿ ಭಾರತ ಆಯೋಜಿಸುವ ವಿಶ್ವ ಕಪ್‌ಗೆ ನಮ್ಮ ತಂಡವನ್ನು ಕಳುಹಿಸುತ್ತೇವೆ. ಇಲ್ಲದಿದ್ದರೆ ನಾವು ಹೋಗುವುದಿಲ್ಲ. ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವೆ ಪಂದ್ಯ ನಡೆಯದಿದ್ದರೆ, ಆ ವಿಶ್ವ ಕಪ್ ನೋಡಲು ಜನರೇ ಬರುವುದಿಲ್ಲ,” ಎಂಬುದಾಗಿ ಹೇಳಿಕೆ ಕೊಟ್ಟಿದ್ದರು.
“ಮಿಸ್ಟರ್ ರಮೀಜ್ ರಾಜಾ, ಪಾಕಿಸ್ತಾನ ತಂಡ ಭಾರತಕ್ಕೆ ಬರದೇ ಹೋದರೆ ನಷ್ಟವೇನೂ ಇಲ್ಲ. ಭಾರತದ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಸಾಲುಗಟ್ಟಿ ನಿಲ್ಲುತ್ತಾರೆ. ನಿಮ್ಮ ಪಂದ್ಯಕ್ಕಿಂತ ಹೆಚ್ಚಿನ ಮಂದಿ ನಮ್ಮ ಪಂದ್ಯವನ್ನು ವೀಕ್ಷಿಸುತ್ತಾರೆ,” ಎಂಬುದಾಗಿ ಕ್ರಿಕೆಟ್ ಅಭಿಮಾನಿಯೊಬ್ಬರು ಬರೆದುಕೊಂಡಿದ್ದಾರೆ.
ಇನ್ನೊಬ್ಬರು ಟ್ವೀಟ್ ಮಾಡಿ, ಪಾಕಿಸ್ತಾನ ಕ್ರಿಕೆಟ್ ತಂಡ ಇತ್ತೀಚಿನ ದಿನಗಳಲ್ಲಿ ಟಿ೨೦ ಮಾದರಿಯಲ್ಲಿ ಹೆಚ್ಚು ಪ್ರಭಾವಶಾಲಿ ಎನಿಸಿಕೊಂಡಿದೆ. ಅದರೆ, ಕ್ರಿಕೆಟ್ ಜಗತ್ತು ಭಾರತ, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳನ್ನು ಹೆಚ್ಚು ನೆಚ್ಚಿಕೊಂಡಿದೆ ಎಂದು ಬರೆದುಕೊಂಡಿದ್ದಾರೆ.
ಇನ್ನೊಬ್ಬರು ಭಾರತ ಮತ್ತು ಜಿಂಬಾಬ್ವೆ ನಡುವೆ ಇತ್ತೀಚೆಗೆ ನಡೆದ ಟಿ೨೦ ವಿಶ್ವ ಕಪ್ ಪಂದ್ಯವನ್ನು ಉದಾಹರಣೆಯನ್ನಾಗಿ ಇಟ್ಟುಕೊಂಡು ಬಿಸಿಸಿಐ ಸಾಮರ್ಥ್ಯವನ್ನು ಬಣ್ಣಿಸಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೆ ೮೨,೫೦೭ ಮಂದಿ ಪ್ರೇಕಕ್ಷರು ಬಂದಿದ್ದರೆ, ಪಾಕಿಸ್ತಾನ ಮತ್ತು ಇಂಗ್ಲೆಂಡ್ ನಡುವಿನ ಫೈನಲ್ ಪಂದ್ಯವನ್ನು ೮೦, ೪೬೨ ಮಂದಿ ವೀಕ್ಷಿಸಿದ್ದರು. ಇದನ್ನೇ ಉದಾಹರಣೆಯಾಗಿ ಕೊಟ್ಟು, ನೀವು ಬರದಿದ್ದರೇ ಏನೂ ಆಗುವುದಿಲ್ಲ ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ | Ramiz Raja | ಭಾರತದ ಜತೆ ಕ್ರಿಕೆಟ್ ಆಡದಿದ್ದರೆ ಪಾಕ್ ಕ್ರಿಕೆಟ್ ಮಂಡಳಿ ಕುಸಿತ ಗ್ಯಾರಂಟಿ: ರಮೀಜ್ ರಾಜಾ