Site icon Vistara News

INDvsWI 2023 : ಟೆಸ್ಟ್‌ ಸರಣಿಗೆ ಮೊದಲು ಎರಡು ಅಭ್ಯಾಸ ಪಂದ್ಯಗಳಲ್ಲಿ ಆಡಲಿದೆ ರೋಹಿತ್‌ ಬಳಗ

Team India

#image_title

ಮುಂಬಯಿ: ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ಫೈನಲ್ ಪಂದ್ಯದ ಸೋಲಿನ ನಂತರ ಭಾರತ ಕ್ರಿಕೆಟ್‌ ತಂಡದ ಪ್ರದರ್ಶನದ ಬಗ್ಗೆ ವಿಶೇಷ ಕಾಳಜಿ ವಹಿಸುತ್ತಿದೆ ಬಿಸಿಸಿಐ. ಐಸಿಸಿ ಟೂರ್ನಿಗೆ ಮೊದಲು ತಂಡಕ್ಕೆ ಅಭ್ಯಾಸ ಪಂದ್ಯಗಳನ್ನು ಆಯೋಜಿಸದೇ ಇರುವುದೇ ಹಿನ್ನಡೆಗೆ ಕಾರಣ ಎಂಬುದಾಗಿ ಸೋಲಿನ ಬಳಿಕ ಆರೋಪಗಳು ಕೇಳಿ ಬಂದಿದ್ದವು. ಹೀಗಾಗಿ ವೆಸ್ಟ್‌ ಇಂಡೀಸ್‌ ಪ್ರವಾಸದಲ್ಲಿ ಜುಲೈ 12ರಂದು ಡೊಮಿನಿಕಾದಲ್ಲಿ ಪ್ರಾರಂಭವಾಗುವ ಟೆಸ್ಟ್‌ ಸರಣಿಯ ಮೊದಲ ಪಂದ್ಯಕ್ಕೆ ಮುನ್ನ ಭಾರತ ಕ್ರಿಕೆಟ್ ತಂಡಕ್ಕೆ ಬಾರ್ಬಡೋಸ್‌ನಲ್ಲಿ ಎರಡು ಅಭ್ಯಾಸ ಪಂದ್ಯಗಳನ್ನು ಆಯೋಜಿಸಲಾಗಿದೆ. ರೋಹಿತ್ ಶರ್ಮಾ ಮತ್ತು ಬಳಗ ಈ ಅಭ್ಯಾಸ ಶಿಬಿರದ ಜತೆಗೆ ಅಭ್ಯಾಸ ಪಂದ್ಯಗಳಲ್ಲೂ ಆಡಲಿದೆ. ಜುಲೈ 2ರೊಳಗೆ ಬ್ರಿಜ್‌ಟೌನ್‌ ಸೇರಲಿರುವ ತಂಡ ಒಂದು ವಾರದ ಶಿಬಿರದಲ್ಲಿ ಪಾಲ್ಗೊಳ್ಳಲಿದೆ.

ಭಾರತ ಕ್ರಿಕೆಟ್‌ ತಂಡದ ಆಟಗಾರರು ರಜೆಯಲ್ಲಿದ್ದಾರೆ. ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಇನ್ನೂ ಲಂಡನ್‌ನಲ್ಲಿ ಸುತ್ತುತ್ತಿದ್ದಾರೆ. ಅವರೆಲ್ಲರೂ ವಿವಿಧ ಬ್ಯಾಚ್‌ಗಳಲ್ಲಿ ಕೆರಿಬಿಯನ್ ದ್ವೀಪಗಳಿಗೆ ಹಾರಲಿದ್ದಾರೆ. ಕ್ರಿಕ್‌ಬಜ್‌ ಪ್ರಕಾರ ದೊಡ್ಡ ಬಳಗ ವೆಸ್ಟ್‌ ಇಂಡೀಸ್‌ಗೆ ಏಕಕಾಲಕ್ಕೆ ಹೋಗುವ ಪ್ರಯಾಣ ಸೌಕರ್ಯಗಳು ಇಲ್ಲ. ಹೀಗಾಗಿ ತಂಡವಾಗಿ ಹೋಗಲು ನಿರ್ಧರಿಸಲಾಗಿದೆ.

ಇದನ್ನೂ ಓದಿ : INDvsWI 2023 : 15 ತಿಂಗಳು ತಂಡದಲ್ಲೇ ಇಲ್ಲದ ಆಟಗಾರ ಈಗ ಏಕಾಏಕಿ ಟೆಸ್ಟ್‌ ತಂಡದ ಉಪನಾಯಕ!

ಭಾರತ ತಂಡ ಕೆಲವು ಆಟಗಾರರು ಅಭ್ಯಾಸ ಶಿಬಿರಕ್ಕಾಗಿ ಬಾರ್ಬಡೋಸ್‌ಗೆ ತೆರಳುವ ಮೊದಲು ಜಾರ್ಜ್‌ಟೌನ್‌ ಹಾಗೂ ಗಯಾನಾಕ್ಕೆ ಆಗಮಿಸಲಿದ್ದಾರೆ. ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮತ್ತು ಇತರ ಕೋಚಿಂಗ್ ಸಿಬ್ಬಂದಿಯನ್ನು ಅವರು ಬಾರ್ಬಡೋಸ್‌ನಲ್ಲಿ ಎದುರಾಗಲಿದ್ದಾರೆ.

ಭಾರತ ತಂಡ ಆಡಲಿರುವ ಎರಡು ಅಭ್ಯಾಸ ಪಂದ್ಯಗಳು ಪ್ರಥಮ ದರ್ಜೆ ಸ್ಥಾನಮಾನ ಹೊಂದಿರುವುದಿಲ್ಲ. ಬಿಸಿಸಿಐ ಮೂಲಕ ಟೀಮ್ ಮ್ಯಾನೇಜ್ಮೆಂಟ್ ಪ್ರಥಮ ದರ್ಜೆ ಪಂದ್ಯಗಳಿಗಾಗಿ ಕ್ರಿಕೆಟ್ ವೆಸ್ಟ್ ಇಂಡೀಸ್‌ಗೆ ವಿನಂತಿಸಿತ್ತು. ಆದರೆ ಅದಕ್ಕೆ ಅವಕಾಶ ಸಿಕ್ಕಿಲ್ಲ. ಹೀಗಾಗಿ ಮಿಶ್ರ ತಂಡದ ಪಂದ್ಯಗಳಾಗಿರುತ್ತವೆ. ಕೆಲವು ಸ್ಥಳೀಯ ಆಟಗಾರರು ಅಭ್ಯಾಸ ಪಂದ್ಯಗಳಿಗಾಗಿ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ. ಸೌಲಭ್ಯಗಳ ಕೊರತೆಯ ಕಾರಣಕ್ಕೆ ಟೀಮ್ ಇಂಡಿಯಾ ರೋಸೌ ಬದಲಿಗೆ ಬಾರ್ಬಡೋಸ್ ಆಯ್ಕೆ ಮಾಡಿದೆ.

ಟೆಸ್ಟ್ ಸರಣಿ ಪ್ರಾರಂಭವಾಗುವ ಮೊದಲು ನಾವು ಅವರನ್ನು ಡೊಮಿನಿಕಾಗೆ ಖಾಸಗಿ ವಿಮಾನದ ಮೂಲಕ ಕರೆಯೊಯ್ಯಲಿದ್ದೇವೆ. ಅದಕ್ಕಿಂತ ಮೊದಲು ಅವರು ಕೆನ್ಸಿಂಗ್ಟನ್ ಓವಲ್‌ನಲ್ಲಿ ತರಬೇತಿ ಪಡೆಯಲಿದ್ದಾರೆ ಎಂದು ಅವರು ಕ್ರಿಕ್‌ಬಜ್‌ಗೆ ತಿಳಿಸಿದ್ದಾರೆ.

ವೆಸ್ಟ್ ಇಂಡೀಸ್ ತಂಡವು ಆಂಟಿಗುವಾದಲ್ಲಿ ಕೂಲಿಡ್ಜ್ ಕ್ರಿಕೆಟ್ ಗ್ರೌಂಡ್‌ನ ಹೈ ಪರ್ಫಾರ್ಮೆನ್ಸ್ ಸೆಂಟರ್‌ನಲ್ಲಿ ತಮ್ಮ ಶಿಬಿರವನ್ನು ನಡೆಸಲಿದೆ. ಟೆಸ್ಟ್ ಗೆ ಮುಂಚಿತವಾಗಿ ಆ ತಂಡ ಡೊಮಿನಿಕಾಗೆ ಪ್ರಯಾಣಿಸಲಿದ್ದಾರೆ. ಟೆಸ್ಟ್ ಸ್ಪೆಷಲಿಸ್ಟ್ ಗಳನ್ನು ಹೊರತುಪಡಿಸಿ, ವಿಶ್ವಕಪ್ 2023ರ ಅರ್ಹತಾ ಪಂದ್ಯಗಳಲ್ಲಿ ಆಡುತ್ತಿರುವ ಕೆಲವು ಆಟಗಾರರು ನೇರವಾಗಿ ಡೊಮಿನಿಕಾ ತಲುಪಲಿದ್ದಾರೆ. ಜುಲೈ 9ರಂದು ನಿಗದಿಯಾಗಿರುವ ವಿಶ್ವಕಪ್ ಅರ್ಹತಾ ಸುತ್ತಿನ ಫೈನಲ್ ಪಂದ್ಯದಿಂದ ಅವರು ಹೊರಗುಳಿಯಲಿದ್ದಾರೆ.

ವಿಂಡೀಸ್‌ ಪ್ರವಾಸಕ್ಕೆ ಭಾರತ ತಂಡ

ಟೆಸ್ಟ್‌ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ (ಉಪನಾಯಕ), ಕೆಎಸ್ ಭರತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಮೊಹಮ್ಮದ್ ಶಮಿ. ಸಿರಾಜ್, ಮುಖೇಶ್ ಕುಮಾರ್, ಜಯದೇವ್ ಉನಾದ್ಕಟ್, ನವದೀಪ್ ಸೈನಿ.

ಏಕ ದಿನ ಸರಣಿಗೆ ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ (ಉಪನಾಯಕ), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಯಜುವೇಂದ್ರ ಚಾಹಲ್, ಕುಲದೀಪ್ ಯಾದವ್, ಜಯದೇವ್ ಉನಾದ್ಕತ್, ಮೊಹಮ್ಮದ್ ಶಮಿ. ಸಿರಾಜ್, ಉಮ್ರಾನ್ ಮಲಿಕ್, ಮುಖೇಶ್ ಕುಮಾರ್.

Exit mobile version