ಮುಂಬಯಿ : ಪ್ರವಾಸಿ ನ್ಯೂಜಿಲ್ಯಾಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳ ವಿರುದ್ಧದ ಸರಣಿ ಭಾರತ ತಂಡವನ್ನು ಪ್ರಕಟಿಸಲಾಗಿದೆ. ತಂಡದಲ್ಲಿ ಹಲವು ಬದಲಾವಣೆಗಳು ನಡೆದಿದ್ದು, ಯುವ ಆಟಗಾರರಿಗೆ ಅವಕಾಶಗಳನ್ನು ನೀಡಲಾಗಿದೆ. ಸೂರ್ಯಕುಮಾರ್ ಯಾದವ್ ಹಾಗೂ ಇಶಾನ್ ಕಿಶನ್ ಆಸೀಸ್ ವಿರುದ್ಧದ ಟೆಸ್ಟ್ ಸರಣಿಯ ತಂಡದಲ್ಲೂ ಸ್ಥಾನ ಪಡೆದಿದ್ದಾರೆ. ಇವೆಲ್ಲದರ ನಡುವೆ ನಿರಾಸೆಯಾಗಿದ್ದು ಮುಂಬಯಿ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಸರ್ಫರಾಜ್ ಖಾನ್ಗೆ. ಅವರು ರಣಜಿ ಟ್ರೋಫಿಯಲ್ಲಿ ಸಿಕ್ಕಾಪಟ್ಟೆ ಸಾಧನೆ ಮಾಡಿರುವ ಹೊರತಾಗಿಯೂ ತಂಡಕ್ಕೆ ಸೇರ್ಪಡೆಯಾಗದಿರುವ ಬಗ್ಗೆ ಕ್ರಿಕೆಟ್ ವಿಶ್ಲೇಷಕ ಹರ್ಷ ಬೋಗ್ಲೆ ಬೇಸರ ವ್ಯಕ್ತಪಡಿಸಿದ್ದಾರೆ.
ದೇಶಿ ಕ್ರಿಕೆಟ್ ಋತುವಿನಲ್ಲಿ ಸರ್ಫರಾಜ್ ಖಾನ್ ಜೀವನಶ್ರೇಷ್ಠ ಪ್ರದರ್ಶನ ನೀಡುತ್ತಿದ್ದಾರೆ. 2022-23ನೇ ಋತುವಿನಲ್ಲಿ ಅವರು ಸರಾಸರಿ 89.00ರಂತೆ 801 ರನ್ ಬಾರಿಸಿದ್ದಾರೆ. ಅದೇ ಕಳೆದ ಎರಡು ಆವೃತ್ತಿಯಲ್ಲಿ 982 ಹಾಗೂ 928 ರನ್ಗಳನ್ನು ಬಾರಿಸಿದ್ದಾರೆ. ಅನುಕ್ರಮವಾಗಿ 122.75 ಹಾಗೂ 154.66 ಸರಾಸರಿಯನ್ನೂ ಹೊಂದಿದ್ದಾರೆ. ಇದೇ ಅಂಕಿ ಅಂಶಗಳನ್ನು ಮುಂದಿಟ್ಟುಕೊಂಡು ಹರ್ಷ ಬೋಗ್ಲೆ ಸರ್ಫರಾಜ್ಗೆ ಅತ್ಯಂತ ಕೆಟ್ಟ ದಿನಗಳು ಎಂಬರ್ಥದಲ್ಲಿ ಟ್ವೀಟ್ ಮಾಡಿದ್ದಾರೆ.
ಸರ್ಫರಾಜ್ ಖಾನ್ ದೇಶಿಯ ಕ್ರಿಕೆಟ್ನಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ಅವಕಾಶದ ಬಾಗಿಲು ತಟ್ಟುವ ಬದಲು ಭೇದಿಸಿದ್ದಾರೆ. ಇದಕ್ಕಿಂತ ಅವರು ಇನ್ನೇನು ಸಾಧನೆ ಮಾಡಲು ಸಾಧ್ಯ ಎಂದು ಬೋಗ್ಲೆ ಬರೆದುಕೊಂಡಿದ್ದಾರೆ.
ಸರ್ಫರಾಜ್ ಖಾನ್ ಮುಂಬಯಿ ತಂಡದ ಆಧಾರ ಸ್ತಂಭ ಎನಿಸಿಕೊಂಡಿದ್ದಾರೆ. 34 ಪಂದ್ಯಗಳನ್ನು ಆಡಿರುವ ಅವರು 77.43 ಸರಾಸರಿಯಂತೆ 3175 ರನ್ ಬಾರಿಸಿದ್ದಾರೆ. ಅದರಲ್ಲಿ 11 ಶತಕಗಳು ಹಾಗೂ 9 ಅರ್ಧ ಶತಕಗಳು ಸೇರಿಕೊಂಡಿವೆ.