ಮಾಲಾಹೈಡ್ (ಐರ್ಲೆಂಡ್): ಮೊದಲ ಪಂದ್ಯದ ಗೆಲುವಿನ ಹುಮ್ಮಸ್ಸಿನಲ್ಲಿರುವ ಟೀಮ್ ಇಂಡಿಯಾ, ಆತಿಥೇಯ ಐರ್ಲೆಂಡ್ (ireland tour) ವಿರುದ್ಧದ ಎರಡನೇ ಪಂದ್ಯದಲ್ಲಿ ಮಂಗಳವಾರ ಕಣಕ್ಕೆ ಇಳಿಯಲಿದೆ. ಮಳೆಯ ಕಾರಣಕ್ಕೆ ಮೊದಲ ಪಂದ್ಯ ೧೨ ಓವರ್‌ಗಳಿಗೆ ಸೀಮಿತಗೊಂಡಿದ್ದ ಕಾರಣ ಕ್ರಿಕೆಟ್ ಅಭಿಮಾನಿಗಳು ನಿರಾಸೆ ಎದುರಿಸಿದ್ದು, ಈ ಪಂದ್ಯದಲ್ಲಿ ೨೦ ಓವರ್‌ಗಳ ಇನಿಂಗ್ಸ್ ನಡೆಯಲಿ ಎಂದು ಆಶಿಸುತ್ತಿದ್ದಾರೆ.
ಹಾರ್ದಿಕ್ ಪಾಂಡ್ಯ ನೇತೃತ್ವದ ಟೀಮ್ ಇಂಡಿಯಾ ಮೊದಲ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದು, ಅದೇ ಲಯದಲ್ಲಿ ಅಡಿ ಎರಡನೇ ಪಂದ್ಯವನ್ನೂ ಗೆಲ್ಲುವ ಮೂಲಕ ಐರ್ಲೆಂಡ್ ವಿರುದ್ಧದ ಸೋಲು ರಹಿತ ಅಭಿಯಾನ ಮುಂದುವರಿಸುವ ಸಾಧ್ಯತೆಗಳಿವೆ.
ಆರಂಭಿಕ ಬ್ಯಾಟರ್ ಋತುರಾಜ್ ಗಾಯಕ್ವಾಡ್ ಭಾನುವಾರ ನಡೆದ ಪಂದ್ಯದಲ್ಲಿ ಬ್ಯಾಟಿಂಗ್ ಮಾಡಲು ಇಳಿದಿರಲಿಲ್ಲ. ಅವರು ಕಾಲಿನ ಮಾಂಸಖಂಡದ ನೋವಿಗೆ ಒಳಗಾಗಿದ್ದರು. ಒಂದು ವೇಳೆ ಅವರು ಸಂಪೂರ್ಣವಾಗಿ ಸುಧಾರಿಸದಿದ್ದರೆ ಮಂಗಳವಾರದ ಪಂದ್ಯಕ್ಕೆ ಬೇರೆ ಬ್ಯಾಟ್ಸ್‌ಮನ್‌ಗಳು ಅವಕಾಶ ಪಡೆಯುವ ಸಾಧ್ಯತೆಗಳಿವೆ.
ಜುಲೈಯಲ್ಲಿ ಇಂಗ್ಲೆಂಡ್ ವಿರುದ್ಧ ನಡೆಯಲಿರುವ ಪೂರ್ಣ ಪ್ರಮಾಣದ ಟಿ೨೦ ಸರಣಿಯಲ್ಲಿ ಆಡಲಿರುವ ಭಾರತ ತಂಡಕ್ಕೆ ಈ ಪಂದ್ಯ ಪ್ರಮುಖವಾಗಿದೆ. ಹೀಗಾಗಿ ಹನ್ನೊಂದರ ಬಳಗದಲ್ಲಿ ಅವಕಾಶ ಪಡೆದ ಆಟಗಾರರು ತಮ್ಮ ನೈಜ ಸಾಮರ್ಥ್ಯ ಬಹಿರಂಗಪಡಿಸಬೇಕಾಗಿದೆ. ಪ್ರಮುಖವಾಗಿ ಮೊದಲ ಪಂದ್ಯದಲ್ಲಿ ಕೇವಲ ಒಂದು ಓವರ್ ಮಾತ್ರ ಎಸೆಯಲು ಅವಕಾಶ ಪಡೆದಿದ್ದ ಉಮ್ರಾನ್ ಮಲಿಕ್‌ಗೆ ಮತ್ತೊಮ್ಮೆ ತಮ್ಮ ಅತಿ ವೇಗದ ಬೌಲಿಂಗ್‌ನ ಕರಾಮತ್ತು ತೋರಿಸಲು ಅವಕಾಶ ಲಭಿಸಲಿದೆ. ಏತನ್ಮಧ್ಯೆ, ನಾಯಕ ಹಾರ್ದಿಕ್ ಪಾಂಡ್ಯ, ಹಳೆ ಚೆಂಡಿನಲ್ಲಿ ಮಲಿಕ್ ಪ್ರಭಾವ ಬೀರಬಲ್ಲರು ಎಂದು ಹೇಳಿಕೆ ನೀಡಿದ್ದಾರೆ. ಹೀಗಾಗಿ ಪವರ್ ಪ್ಲೇ ಬಳಿಕ ಅವರ ಸ್ಪೆಲ್ ಆರಂಭವಾಗಬಹುದು.
ಭುವನೇಶ್ವರ್ ಕುಮಾರ್ ಮತ್ತೊಮ್ಮೆ ಐರ್ಲೆಂಡ್ ಪಿಚ್‌ನ ಲಾಭ ಪಡೆಯಲಿದ್ದಾರೆ. ಆದರೆ ಆವೇಶ್ ಖಾನ್ ಡೆತ್ ಓವರ್‌ಗಳಲ್ಲಿ ವೈಫಲ್ಯ ಕಂಡಿರುವ ಕಾರಣ ಆ ಅವಧಿಯಲ್ಲಿ ಹೆಚ್ಚು ರನ್ ಬಿಟ್ಟುಕೊಡದಿರುವ ಬಗ್ಗೆ ಯೋಜನೆ ರೂಪಿಸಬೇಕಾಗುತ್ತದೆ.
ಟೆಕ್ಟರ್ ಅಪಾಯಕಾರಿ
ಐರ್ಲೆಂಡ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟರ್ ಹ್ಯಾರಿ ಟೆಕ್ಟರ್ ಭಾರತ ತಂಡದ ಬೌಲರ್‌ಗಳ ಪಾಲಿಗೆ ಸಿಂಹ ಸ್ವಪ್ನವಾಗಿದ್ದಾರೆ. ಅವರು ಅಜೇಯ ೬೪ ರನ್ ಬಾರಿಸುವ ಮೂಲಕ ಪ್ರವಾಸಿ ತಂಡಕ್ಕೆ ಆತಂಕ ತಂದೊಡ್ಡಿದ್ದರು. ಅಂತೆಯೇ ಅವರು ಭಾರತದ ಅನುಭವಿ ಬೌಲರ್‌ಗಳನ್ನು ದಂಡಿಸುವ ಪರಿಗೆ ಕ್ರಿಕೆಟ್ ವಿಶ್ಲೇಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ಐರ್ಲೆಂಡ್ ಬೌಲರ್‌ಗಳ ಟೀಮ್ ಇಂಡಿಯಾದ ಬ್ಯಾಟರ್‌ಗಳಿಗೆ ಕಡಿವಾಣ ಹಾಕುವಲ್ಲಿ ವೈಫಲ್ಯ ಅನುಭವಿಸಿದ್ದರು.
ತಂಡಗಳು:
ಭಾರತ: ಹಾರ್ದಿಕ್ ಪಾಂಡ್ಯ (ನಾಯಕ), ಭುವನೇಶ್ವರ್ ಕುಮಾರ್, ಇಶಾನ್ ಕಿಶನ್, ಋತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡ, ರಾಹುಲ್ ತ್ರಿಪಾಠಿ, ದಿನೇಶ್ ಕಾರ್ತಿಕ್, ಯಜ್ವೇಂದ್ರ ಚಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯಿ, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಶ್‌ದೀಪ್ ಸಿಂಗ್, ಉಮ್ರಾನ್ ಮಲಿಕ್.
ಐರ್ಲೆಂಡ್: ಆಂಡ್ರ್ಯೂ ಬಲ್ಬಿರಿನ್ (ನಾಯಕ), ಮಾರ್ಕ್ ಅಡೈರ್, ಕರ್ಟಿಸ್ ಕ್ಯಾಂಫೆರ್, ಗರೆಥ್ ಡೆಲಾನಿ, ಜಾರ್ಜ್ ಡಾಕ್‌ರೆಲ್, ಸ್ಟೀಫನ್ ಡೊಹೆನಿ, ಜೋಶ್ ಲಿಟಲ್, ಆಂಡ್ರ್ಯೂ ಮ್ಯಾಕ್‌ಬ್ರೈನ್, ಬ್ಯಾರಿ ಮೆಕಾರ್ಥಿ, ಕಾನರ್ ಓಲ್ಫರ್ಟ್, ಪಾಲ್ ಸ್ಟಿರ್ಲಿಂಗ್, ಹ್ಯಾರಿ ಟೆಕ್ಟರ್, ಲೋರ್ಕಾನ್ ಟಕ್ಟರ್, ಕ್ರೇಗ್ ಯಂಗ್.
ಇದನ್ನೂ ಓದಿ: ಐರ್ಲೆಂಡ್ ಪ್ರವಾಸ ಮುಗಿಸಿದ Team India ಭಾರತಕ್ಕೆ ವಾಪಸಾಗುವುದಿಲ್ಲ, ಯಾಕೆ ಗೊತ್ತೇ?