ನವದೆಹಲಿ: ಶ್ರೇಷ್ಠ ಪ್ರದರ್ಶನ ತೋರುತ್ತಿರುವ ಭಾರತೀಯ ಫುಟ್ಬಾಲ್ ತಂಡ(Indian Football Team) ಸತತ ಎರಡನೇ ಬಾರಿಗೆ ಏಷ್ಯನ್ ಗೇಮ್ಸ್(Asian Games) ಕ್ರೀಡಾಕೂಟದಿಂದ ಹೊರಗುಳಿಯುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಕ್ರೀಡಾಕೂಟದಲ್ಲಿ ಭಾಗಿಯಾಗುವ ಅಗ್ರ ಎಂಟು ತಂಡಗಳಲ್ಲಿ ಸ್ಥಾನ ಪಡೆಯುವ ಕ್ರೀಡಾ ಸಚಿವಾಲಯದ ಮಾನದಂಡಗಳನ್ನು ಪೂರೈಸುವಲ್ಲಿ ಭಾರತ ಫುಟ್ಬಾಲ್ ತಂಡ ವಿಫಲವಾಗಿರುವುದರಿಂದ ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.
ಭಾರತೀಯ ಒಲಿಂಪಿಕ್ ಅಸೋಸಿಯೇಷನ್ (ಐಒಎ) ಮತ್ತು ಎಲ್ಲ ರಾಷ್ಟ್ರೀಯ ಕ್ರೀಡಾ ಫೆಡರೇಶನ್‍ಗಳಿಗೆ(NSFS) ಕಳುಹಿಸಲಾದ ಪತ್ರದಲ್ಲಿ ಕ್ರೀಡಾ ಸಚಿವಾಲಯವು ಟೀಮ್ ಈವೆಂಟ್‍ಗಳಿಗೆ, ಏಷ್ಯಾದ ಭಾಗವಹಿಸುವ ದೇಶಗಳಲ್ಲಿ ಎಂಟನೇ ಸ್ಥಾನವನ್ನು ಗಳಿಸಿದ ಕ್ರೀಡೆಗಳು ಮಾತ್ರ ಭಾಗವಹಿಸಬಹುದಾಗಿದೆ. ಜತೆಗೆ ಕಳೆದ ಒಂದು ವರ್ಷವನ್ನು ಪರಿಗಣಿಸಬೇಕು.
ಏಷ್ಯಾದ ಅಗ್ರ-8ರ ತಂಡಗಳ ಸಮೀಪದಲ್ಲಿ ಭಾರತ ಎಲ್ಲಿಯೂ ಇಲ್ಲ. ಪ್ರಸ್ತುತ ಭಾರತ ಏಷ್ಯನ್ ಫುಟ್ಬಾಲ್ ಒಕ್ಕೂಟದ ಅಡಿಯಲ್ಲಿ ಬರುವ ದೇಶಗಳ ಶ್ರೇಯಾಂಕದಲ್ಲಿ 18ನೇ ಸ್ಥಾನದಲ್ಲಿದೆ. ಹೀಗಾಗಿ ಭಾರತ ತಂಡಕ್ಕೆ ಈ ಟೂರ್ನಿಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ ಎಂದು ತಿಳಿದುಬಂದಿದೆ. ಆದರೆ ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕ್ರೀಡಾ ಸಚಿವಾಲಯಕ್ಕೆ ಮನವಿ ಮಾಡುವುದಾಗಿ ಎಐಎಫ್‍ಎಫ್(AIFF ) ಹೇಳಿಕೊಂಡಿದೆ.
ಇದನ್ನೂ ಓದಿ ರಾಜ ಮಾರ್ಗ ಅಂಕಣ : ರೊನಾಲ್ಡೋ, ಮೆಸ್ಸಿಗಿಂತ ಏನೂ ಕಮ್ಮಿ ಇಲ್ಲ ನಮ್ಮ ಸುನೀಲ್ ಚೆಟ್ರಿ
“ಇದು ಸರ್ಕಾರ ತೆಗೆದುಕೊಂಡಿರುವ ನಿರ್ಧಾರ. ಹಾಗಾಗಿ ನಾವು ಅದನ್ನು ಪಾಲಿಸಬೇಕು. ಆದರೆ, ಫುಟ್‌ಬಾಲ್‌ಗೆ ಸಂಬಂಧಿಸಿದಂತೆ ನಿರ್ಧಾರವನ್ನು ಮರುಪರಿಶೀಲಿಸುವಂತೆ ನಾವು ಸರ್ಕಾರಕ್ಕೆ ಮನವಿ ಮಾಡುತ್ತೇವೆ” ಎಂದು ಎಐಎಫ್‌ಎಫ್ ಪ್ರಧಾನ ಕಾರ್ಯದರ್ಶಿ ಶಾಜಿ ಪ್ರಭಾಕರನ್ ಪಿಟಿಐಗೆ ತಿಳಿಸಿದರು.
ಕಳೆದ ಒಂದು ವರ್ಷಗಳಿಂದ ಭಾರತದ ಫುಟ್ಬಾಲ್ ತಂಡ ಆಡಿದ ಎಲ್ಲ ಟೂರ್ನಿಗಳಲ್ಲಿಯೂ ಉತ್ತಮ ಪ್ರದರ್ಶನ ತೋರುತ್ತಲೇ ಬಂದಿದೆ. ಇಚ್ಚೀಚೆಗಷ್ಟೇ ಸ್ಯಾಫ್ ಟೂರ್ನಿಯಲ್ಲಿಯೂ ಚಾಂಪಿಯನ್ ಪಟ್ಟ ಅಲಂರಿಸಿತ್ತು. ಅದರಲ್ಲೂ ನಾಯಕ ಸುನೀಲ್ ಚೆಟ್ರಿ(Sunil Chhetri) ಅವರು ಪ್ರತಿ ಪಂದ್ಯದಲ್ಲಿಯೂ ಗೋಲು ಬಾರಿಸಿ ಮಿಂಚಿದ್ದರು. ಪ್ರಗತಿಯ ಹಂತದಲ್ಲಿದ್ದ ಭಾರತ ಫುಟ್ಬಾಲ್ ತಂಡಕ್ಕೆ ಇದೀಗ ಏಷ್ಯಾನ್ ಗೇಮ್ಸ್ ತೂಗುಯ್ಯಾಲೆಯಲ್ಲಿದೆ.