ತಿರುವನಂತಪುರ: ಇಲ್ಲಿ ನಡೆದ ಇಂಡಿಯನ್ ಗ್ರ್ಯಾಂಡ್ ಪ್ರಿಕ್ಸ್-2(Indian Grand Prix 2) ಅಥ್ಲೆಟಿಕ್ಸ್ ಕೂಟದಲ್ಲಿ ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಜಿನ್ಸನ್ ಜಾನ್ಸನ್(Jinson Johnson) ಮತ್ತು ಅರ್ಚನಾ ಸುಸೀಂದ್ರನ್(Archana Suseendran) ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಸಾಧನೆಯೊಂದಿಗೆ ಉಭಯ ಅಥ್ಲೀಟ್ಗಳು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದುಕೊಂಡಿದ್ದಾರೆ.
1500 ಮೀಟರ್ ಓಟದಲ್ಲಿ ಜಿನ್ಸನ್ ಜಾನ್ಸನ್ 3:44.52 ನಿಮಿಷದಲ್ಲಿ ಗುರಿ ತಲುಪಿ ಚಿನ್ನದ ಪದಕ ಜಯಿಸಿದರು. 3:47:84 ನಿಮಿಷದ ಒಳಗೆ 1500 ಮೀಟರ್ ಓಟ ಮುಕ್ತಾಯಗೊಳಿಸಿದಲ್ಲಿ ಏಷ್ಯನ್ ಗೇಮ್ಸ್‌ಗೆ ಆಯ್ಕೆಯಾಗುವ ಮಾನದಂಡವನ್ನು ಅಥ್ಲೆಟಿಕ್ಸ್ ಫೆಡರೇಶನ್ ಆಫ್ ಇಂಡಿಯಾ (AFI) ನಿಗದಿ ಮಾಡಿತ್ತು. ಆದರೆ ಈ ಸಮಯಕ್ಕಿಂತ ಮುಂಚಿತವಾಗಿ ಗುರಿ ತಲುಪಿದ ಕಾರಣ ಅವರು ಏಷ್ಯನ್ ಗೇಮ್ಸ್‌ಗೆ ಅರ್ಹತೆ ಗಳಿಸಿದರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ ರಾಹುಲ್ ದ್ವಿತೀಯ ಸ್ಥಾನ ಪಡೆದರು. ಪ್ರಕಾಶ ಬಾಳು ಕಂಚು ಗೆದ್ದರು.
ಕಳೆದ ವರ್ಷ ಏಪ್ರಿಲ್ನಲ್ಲಿ ನಡೆದ ಫೆಡರೇಶನ್ ಕಪ್‌ನಲ್ಲಿ ಜಾನ್ಸನ್ ಕೊನೆಯ ಬಾರಿಗೆ ಕಾಣಿಸಿಕೊಂಡಿದ್ದರು. ಬಳಿಕ ಅವರು ಸ್ನಾಯುರಜ್ಜು ನೋವಿನ ಸಮಸ್ಯೆಯಿಂದ ವಿಶ್ರಾಂತಿಯಲ್ಲಿದ್ದರು. ಇದೀಗ ಒಂದು ವರ್ಷದ ಬಳಿಕ ಅಥ್ಲೆಟಿಕ್ ಟ್ರ್ಯಾಕ್ಗೆ ಮರಳಿದ ಅವರು ಮೊದಲ ಪ್ರಯತ್ನದಲ್ಲೇ ಚಿನ್ನ ಗೆದ್ದು ತಮ್ಮ ಸಾಮರ್ಥ್ಯ ತೋರ್ಪಡಿಸಿದ್ದಾರೆ.
ಹಿಮಾ ದಾಸ್ ಹಿಂದಿಕ್ಕಿದ ಅರ್ಚನಾ ಸುಸೀಂದ್ರನ್
ಮಹಿಳೆಯರ 100 ಮತ್ತು 200 ಮೀಟರ್ ಓಟದಲ್ಲಿ ಅರ್ಚನಾ ಸುಸೀಂದ್ರನ್ ಮೇಲುಗೈ ಸಾಧಿಸುವ ಮೂಲಕ ವಿಶೇಷ ಸಾಧನೆ ಮಾಡಿದರು. ಅವರು 100 ಮೀಟರ್ ಓಟವನ್ನು 11.52 ಸಮಯದಲ್ಲಿ ಪೂರ್ಣಗೊಳಿಸಿ ಹಿಮಾ ದಾಸ್(Hima Das) ಅವರನ್ನು ಹಿಂದಿಕ್ಕಿದರು. ಹಿಮಾ ದಾಸ್ (11.74) ಮತ್ತು ಎ.ಟಿ ದಾನೇಶ್ವರಿ (11.80) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು. ಅರ್ಚನಾ ಸುಸೀಂದ್ರನ್ 200 ಮೀಟರ್ ಓಟವನ್ನು 23.21 ಸೆಕೆಂಡ್ನಲ್ಲಿ ಪೂರೈಸಿ ಏಷ್ಯನ್ ಗೇಮ್ಸ್‌ಗೆ ಅರ್ಹತೆ ಪಡೆದರು.
ಏಷ್ಯನ್ ಗೇಮ್ಸ್ ವಿಜೇತ ತಜಿಂದರ್‌ಪಾಲ್ ಸಿಂಗ್ ತೂರ್ ಶಾಟ್‌ಪುಟ್ ಸ್ಪರ್ಧೆಯಲ್ಲಿ ಗೆಲುವು ಸಾಧಿಸಿದರು. 19.95 ಮೀ ಎಸೆತದೊಂದಿಗೆ ಚಿನ್ನದ ಪದಕ ಜಯಿಸಿದರು. ತಜಿಂದರ್‌ಪಾಲ್ ಸಿಂಗ್ ತೂರ್ ಈಗಾಗಲೇ ಏಷ್ಯನ್ ಗೇಮ್ಸ್‌ಗೆ ಪ್ರವೇಶ ಪಡೆದುಕೊಂಡಿದ್ದಾರೆ.