ಭುವನೇಶ್ವರ : ವಿಶ್ವ ಕಪ್ ಟೂರ್ನಿಯಲ್ಲಿ ಭಾರತ ಹಾಕಿ ತಂಡ ಕಳಪೆ ಪ್ರದರ್ಶನ ನೀಡಿದ ಹಿನ್ನೆಲೆಯಲ್ಲಿ ಮುಖ್ಯ ಕೋಚ್ ಗ್ರಹಾಂ ರೀಡ್ ತಮ್ಮ ಸ್ಥಾನಕ್ಕೆ ಸೋಮವಾರ (ಜನವರಿ30ರಂದು) ರಾಜೀನಾಮೆ ನೀಡಿದ್ದಾರೆ. ಭಾನುವಾರ ಮುಕ್ತಾಯಗೊಂಡ ವಿಶ್ವ ಕಪ್ ಟೂರ್ನಿಯಲ್ಲಿ ಭಾರತ ತಂಡ 9ನೇ ಸ್ಥಾನವನ್ನು ಪಡೆದುಕೊಂಡಿತ್ತು. ಈ ಹಿನ್ನೆಲೆಯಲ್ಲಿ ಟೀಕೆಗಳು ವ್ಯಕ್ತಗೊಂಡಿದ್ದವು. ಅದರ ಬೆನ್ನಲ್ಲೇ ರೀಡ್ ವಿದಾಯ ಘೋಷಿಸಿದ್ದು, ರಾಜೀನಾಮೆ ಪತ್ರವನ್ನು ಹಾಕಿ ಇಂಡಿಯಾದ ಅಧ್ಯಕ್ಷ ದಿಲೀಪ್ ಟಿರ್ಕಿ ಅವರಿಗೆ ಸಲ್ಲಿದ್ದಾರೆ
ಗ್ರಹಾಂ ರೀಡ್ ಅವರು 2019ರಲ್ಲಿ ಭಾರತ ತಂಡದ ಕೋಚ್ ಆಗಿ ನೇಮಕಗೊಂಡಿದ್ದರು. ಅವರ ಗರಡಿಯಲ್ಲಿ ಪಳಗಿದ್ದ ಭಾರತ ತಂಡ 2021ರಲ್ಲಿ ಜಪಾನ್ ಟೋಕಿಯೊದಲ್ಲಿ ನಡೆದ ಒಲಿಂಪಿಕ್ಸ್ನಲ್ಲಿ ಕಂಚಿನ ಪದಕ ಗೆದ್ದು ಸಾಧನೆ ಮಾಡಿತ್ತು. ಅದೇ ರೀತಿ 2022ರಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿಯ ಪದಕ ಗೆದ್ದುಕೊಂಡಿತ್ತು.
ರಾಜೀನಾಮೆ ನೀಡಲು ಇದು ಸಕಾಲ ಎಂದು ಅಂದುಕೊಂಡಿದ್ದೇನೆ. ಹಾಕಿ ಇಂಡಿಯಾದ ಜತೆ ಕಾರ್ಯನಿರ್ವಹಿಸಲು ಅವಕಾಶ ಪಡೆದಿರುವುದು ಗೌರವದ ಸಂಗತಿಯಾಗಿದೆ. ಭಾರತ ಹಾಕಿ ತಂಡದ ಜತೆಗಿನ ಪಯಣದ ಪ್ರತಿ ಕ್ಷಣವನ್ನೂ ಆಸ್ವಾದಿಸಿದ್ದೇನೆ. ತಂಡಕ್ಕೆ ಶುಭ ಹಾರೈಸಿದ್ದೇನೆ ಎಂದು ರೀಡ್ ಹೇಳಿದ್ದಾರೆ. ರೀಡ್ ಅವರ ಕೋಚಿಂಗ್ ಅವಧಿ 2024ರವರೆಗೆ ಇತ್ತು.
ಇದನ್ನೂ ಓದಿ : Hockey World Cup | ಹಾಕಿ ವಿಶ್ವ ಕಪ್ ಗೆದ್ದ ಜರ್ಮನಿ, ಬೆಲ್ಜಿಯಮ್ ತಂಡ ರನ್ನರ್ಅಪ್
ರೀಡ್ ಅವರಲ್ಲದೆ, ಅನಾಲಿಟಿಕಲ್ ಕೋಚ್ ಗ್ರೆಗ್ ಕ್ಲಾರ್ಕ್, ವೈಜ್ಱನಿಕ ಸಲಹೆಗಾರ ಡೇವಿಡ್ ಪೆಂಬರ್ಟನ್ ಕೂಡ ರಾಜೀನಾಮೆ ಕೊಟ್ಟಿದ್ದಾರೆ. ಅವರೆಲ್ಲರೂ ಒಂದು ತಿಂಗಳ ನೋಟಿಸ್ ಪಿರಿಯೆಡ್ನಲ್ಲಿ ಕಾರ್ಯನಿರ್ವಹಿಸಲಿದ್ದಾರೆ.