ಭುವನೇಶ್ವರ: ಪ್ಯಾರಿಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕಂಚಿನ ಪದಕ ಜಯಿಸಿ ಇತಿಹಾಸ ನಿರ್ಮಿಸಿರುವ ಭಾರತೀಯ ಪುರುಷರ ಹಾಕಿ ತಂಡಕ್ಕೆ(Indian hockey team) ಬುಧವಾರ ಭುವನೇಶ್ವರದಲ್ಲಿ ವೀರೋಚಿತ ಸ್ವಾಗತ ನೀಡಲಾಯಿತು. ಐತಿಹಾಸಿಕ ಸಾಧನೆಯನ್ನು ಸಂಭ್ರಮಿಸಲು ಆಯೋಜಿಸಲಾಗಿದ್ದ ರೋಡ್ ಶೋನಲ್ಲಿ ಹರ್ಮನ್‌ಪ್ರೀತ್ ಸಿಂಗ್ ನೇತೃತ್ವದ ತಂಡವು ಭಾಗವಹಿಸಿತು.
ಸೆಮಿಫೈನಲ್‌ನಲ್ಲಿ ಜರ್ಮನಿ ಎದುರು 2-3 ಅಂತರದಲ್ಲಿ ಸೋತು ಫೈನಲ್ ತಲುಪಲು ವಿಫಲಗೊಂಡಿದ್ದ ಭಾರತ ಹಾಕಿ ತಂಡ, ಆಗಸ್ಟ್ 8ರಂದು ನಡೆದಿದ್ದ ಕಂಚಿನ ಪದಕದ ಪಂದ್ಯದಲ್ಲಿ ಸ್ಪೇನ್ ತಂಡವನ್ನು 2-1 ಗೋಲ್‌ಗಳಿಂದ ಮಣಿಸಿ ಕಂಚಿನ ಪದಕಕ್ಕೆ ಕೊರಳೊಡ್ಡಿತ್ತು. ಈ ಮೂಲಕ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಹಾಕಿ ತಂಡ 52 ವರ್ಷಗಳ ನಂತರ ಮೊದಲ ಬಾರಿ ಸತತ ಪದಕಗಳನ್ನು ಜಯಿಸಿದ ಸಾಧನೆ ಮಾಡಿತ್ತು.
ಹಾಕಿ ತಂಡಕ್ಕೆ ಭವ್ಯ ಸ್ವಾಗತ ನೀಡಿರುವುದಕ್ಕೆ ಹಾಕಿ ಇಂಡಿಯಾ ಅಧ್ಯಕ್ಷ ದಿಲಿಪ್ ಟಿರ್ಕಿ ಅವರು ಒಡಿಶಾ ಸರಕಾರ ಹಾಗೂ ಮುಖ್ಯಮಂತ್ರಿ ಮೋಹನ್ ಚರಣ್‌ಗೆ ಕೃತಜ್ಞತೆ ವ್ಯಕ್ತಪಡಿಸಿದರು. ರಾಜ್ಯದ ಆಟಗಾರ ಅಮಿತ್ ರೋಹಿದಾಸ್‌ಗೆ ಒಡಿಶಾ ಸರಕಾರವು 4 ಕೋ.ರೂ. ನಗದು ಬಹುಮಾನವನ್ನು ಘೋಷಿಸಿದೆ. ತಂಡದ ಪ್ರತಿ ಸದಸ್ಯರಿಗೆ ತಲಾ 15 ಲಕ್ಷ ರೂ. ಹಾಗೂ ಸಹಾಯಕ ಸಿಬ್ಬಂದಿ ತಲಾ 10 ಲಕ್ಷ ರೂ. ಬಹುಮಾನ ನೀಡಲಾಗಿದೆ.
ಹಾಕಿಗೆ ವಿದಾಯ ಹೇಳಿದ ದಿಗ್ಗಜ ಗೋಲ್ ಕೀಪರ್ ಪಿ.ಆರ್ ಶ್ರೀಜೇಶ್ಗೆ ವಿಶೇಷವಾಗಿ ಸನ್ಮಾನ ಕಾರ್ಯಕ್ರಮ ನಡೆಸಲಾಯಿತು. ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು.
ಮುಂದಿನ 10 ವರ್ಷಗಳವರೆಗೆ ಪುರುಷರು ಹಾಗೂ ಮಹಿಳೆಯರ ರಾಷ್ಟ್ರೀಯ ಹಾಕಿ ತಂಡದ ಅಧಿಕೃತ ಪ್ರಾಯೋಜಕತ್ವವನ್ನು ಒಡಿಶಾ ಸರ್ಕಾರ ತೆಗೆದುಕೊಂಡಿದೆ. ನೆನೆಗುದಿಗೆ ಬಿದ್ದಿದ್ದ ಭಾರತೀಯ ಹಾಕಿಯನ್ನು ಉದ್ದಾರ ಮಾಡಿದ್ದೇ ಒಡಿಶಾ ಸರಕಾರ. ಮಾಜಿ ಮುಖ್ಯಮಂತ್ರಿ ನವೀನ್ ಪಾಟ್ನಾಯಕ್ ಅವರ ಕೊಡುಗೆ ಅಪಾರ.