ನವದೆಹಲಿ: ಭಾರತೀಯ ಕ್ರೀಡಾ ಕ್ಷೇತ್ರದಲ್ಲಿ ಅತ್ಯುನ್ನತ ಸಾಧನೆಗೈದ ಹಾಲಿ ಮತ್ತು ಮಾಜಿ ಕ್ರೀಡಾಪಟುಗಳಿಗೆ ಭಾರತೀಯ ಒಲಿಂಪಿಕ್ ಸಂಸ್ಥೆ(Indian Olympic Association) ವೈದ್ಯಕೀಯ ವಿಮೆ ಒದಗಿಸಲು ಮುಂದಾಗಿದೆ.
ಒಲಿಂಪಿಕ್ ಭವನದಲ್ಲಿ ನಡೆದ ಭಾರತೀಯ ಒಲಿಂಪಿಕ್ ಸಂಸ್ಥೆಯ ಕಾರ್ಯಕಾರಿಣಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಹಾಲಿ ಹಾಗೂ ಮಾಜಿ ಕ್ರೀಡಾಪಟುಗಳಿಗೆ ಮಾತ್ರವಲ್ಲದೇ ಭವಿಷ್ಯದಲ್ಲಿ ಪದಕ ಗೆಲ್ಲಬಲ್ಲ ಸಂಭಾವ್ಯ ಕ್ರೀಡಾಪಟುಗಳಿಗೂ ವೈದ್ಯಕೀಯ ವಿಮೆ ನೀಡಲು ತೀರ್ಮಾನಿಸಲಾಗಿದೆ ಎಂದು ಐಒಎಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ವಿವಿಧ ಕ್ರೀಡೆಗಳಲ್ಲಿ ದೇಶಕ್ಕಾಗಿ ಪದಕ ಗೆದ್ದ ಹಲವಾರು ಮಾಜಿ ಕ್ರೀಡಾಪಟುಗಳು ಒಳ್ಳೆಯ ಜೀವನ ನಡೆಸುತ್ತಿಲ್ಲ. ಕೆಲವರು ಆರೋಗ್ಯ ಯೋಗಕ್ಷೇಮ ನಿರ್ವಹಿಸಲು ಸದೃಢವಾಗಿಲ್ಲ. ಹೀಗಾಗಿ ಭಾರತೀಯ ಒಲಿಂಪಿಕ್ ಸಂಸ್ಥೆಯು ಈ ಕ್ರಿಡಾಪಟುಗಳಿಗೆ ಉಚಿತ ವೈದ್ಯಕೀಯ ವಿಮೆ ಒದಗಿಸಲು ತೀರ್ಮಾನಿಸಿದೆ ಎಂದು ಐಒಎ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಇದನ್ನೂ ಓದಿ Indian Olympic Association ಮೇಲೆ ನಿಷೇಧದ ಭೀತಿ, ಯಾಕೆ ಈ ದುಸ್ಥಿತಿ?
ಮಾಜಿ ಕ್ರೀಡಾಪಟುಗಳ ಜತೆಗೆ ಹಾಲಿ ಮತ್ತು ದೇಶಕ್ಕಾಗಿ ಪದಕ ಗೆಲ್ಲಬಲ್ಲ ಸಾಮರ್ಥ್ಯ ಹೊಂದಿರುವ ಸಂಭಾವ್ಯ ಕ್ರೀಡಾಪಟುಗಳಿಗೂ ಈ ಪ್ರಯೋಜನ ದೊರೆಯಲಿದೆ. ಕ್ರೀಡಾಪಟುಗಳಿಗೆ ಈ ವೈದ್ಯಕೀಯ ವಿಮೆ ಒದಗಿಸಬೇಕು ಎನ್ನುವ ವಿಚಾರದಲ್ಲಿ ನ್ಯಾಷನಲ್ ಸ್ಪೋರ್ಟ್ಸ್ ಫೆಡರೇಷನ್ ಸಹಕಾರ ಪಡೆದು ವಿಮೆ ಮಾಡಿಸಲಿದ್ದೇವೆ ಎಂದು ಭಾರತೀಯ ಒಲಿಂಪಿಕ್ ಸಂಸ್ಥೆ ತಿಳಿಸಿದೆ.