Site icon Vistara News

CWG- 2022 | ಆಯೋಜಕರ ಮೇಲೆ ಕೋಪ; ಕಾಮನ್ವೆಲ್ತ್‌ ಬಹಿಷ್ಕಾರಕ್ಕೆ ಮುಂದಾಗಿತ್ತು ಭಾರತ

CWG- 2022

ಬರ್ಮಿಂಗ್‌ಹ್ಯಾಮ್‌
ಕಾಮನ್ವೆಲ್ತ್‌ ಒಕ್ಕೂಟದ ರಾಷ್ಟ್ರಗಳ ನಡುವಿನ ಬೃಹತ್‌ ಕ್ರೀಡಾಕೂಟ ಕಾಮನ್ವೆಲ್ತ್‌ ಗೇಮ್ಸ್‌-೨೦೨೨ (CWG- 2022) ಜುಲೈ ೨೮ರಂದು ಆರಂಭಗೊಳ್ಳಲಿದೆ. ಭಾರತದಿಂದ ೨೧೫ ಸ್ಪರ್ಧಿಗಳು ಬರ್ಮಿಂಗ್‌ಹ್ಯಾಮ್‌ಗೆ ತೆರಳಿದ್ದಾರೆ. ಅದರಲ್ಲಿ ೧೦೪ ಮಹಿಳೆಯರು ಇದ್ದಾರೆ. ಆದರೆ, ಹಾಲಿ ಕ್ರೀಡಾಕೂಟವನ್ನು ಬಹಿಷ್ಕರಿಸಲು ಭಾರತ ಕೆಲವು ಕ್ರೀಡಾಪಟುಗಳು ನಿರಂತರ ಒತ್ತಡ ಹೇರಿದ್ದರು. ಆಯೋಜಕರು ಅನ್ಯಾಯ ಮಾಡಿದ್ದಾರೆ ಎಂಬುದೇ ಅವರ ಆರೋಪವಾಗಿತ್ತು.

ಏನಿದು ಅನ್ಯಾಯ ಎಂದರೆ, ಬರ್ಮಿಂಗ್‌ಹ್ಯಾಮ್‌ ಕಾಮನ್ವೆಲ್ತ್‌ ಗೇಮ್ಸ್‌ನಿಂದ ಶೂಟಿಂಗ್‌ ಹಾಗೂ ಆರ್ಚರಿ ಸ್ಪರ್ಧೆಯನ್ನು ಕೈಬಿಡಲಾಗಿದೆ. ಸ್ಥಳಾವಕಾಶದ ಕೊರತೆಯೇ ಅದಕ್ಕೆ ಕಾರಣ ಎಂದು ಸಬೂಬು ಹೇಳಿದೆ. ಅದರೆ, ಭಾರತದ ಆರ್ಚರಿ ಪಟುಗಳು ಹಾಗೂ ಶೂಟರ್‌ಗಳು ಇದನ್ನು ಒಪ್ಪುತ್ತಿಲ್ಲ. ಇದು ಸುಳ್ಳು ಎಂದು ಹೇಳುತ್ತಿದ್ದಾರೆ.

ಭಾರತ ಶೂಟಿಂಗ್ ಹಾಗೂ ಆರ್ಚರಿ ಸ್ಪರ್ಧೆಯಲ್ಲಿ ಪ್ರಾಬಲ್ಯ ಹೊಂದಿದೆ. ಶೂಟಿಂಗ್‌ನಲ್ಲಿ ಸೌರಭ್ ಚೌಧರಿ, ಮನು ಭಾಕರ್, ಎಲವೆನಿಲ್ ವಲಾರಿವನ್, ದಿವ್ಯಾಂಶ್ ಸಿಂಗ್ ಪನ್ವಾರ್‌ ಮತ್ತು ಅಭಿಷೇಕ್ ವರ್ಮಾ ಸೇರಿದಂತೆ ಹಲವು ಸಮರ್ಥ ಸ್ಪರ್ಧಿಗಳಿದ್ದಾರೆ. ಇವೆರಲ್ಲರೂ ಐಎಸ್‌ಎಸ್‌ಎಫ್‌ ವಿಶ್ವ ಕಪ್‌ ಸೇರಿದಂತೆ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಸಾಧನೆ ಮಾಡಿದವರು. 2018ರ ಗೋಲ್ಡ್ ಕೋಸ್ಟ್‌ ಆವೃತ್ತಿಯಲ್ಲಿ ಭಾರತ ಗೆದ್ದ ಒಟ್ಟು ಪದಕಗಳ ಪೈಕಿ 7 ಚಿನ್ನ ಸೇರಿ 16 ಪದಕಗಳು ಶೂಟಿಂಗ್‌ನಿಂದ ಬಂದಿರುವುದು. ಹೀಗಾಗಿ ಈ ಸ್ಪರ್ಧಿಗಳಿಗೆ ಭಾಗವಹಿಸಲು ಅವಕಾಶ ಸಿಗದೇ ಹೋಗಿರುವುದು ಭಾರತದ ಕೋಪಕ್ಕೆ ಕಾರಣವಾಗಿತ್ತು.

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಇದುವರೆಗೆ ಗೆದ್ದ ಒಟ್ಟು ಪದಕಗಳ ಪೈಕಿ 135 ಪದಕಗಳು ಶೂಟಿಂಗ್‌ ಸ್ಪರ್ಧೆಯದ್ದು. ಇದರಲ್ಲಿ 63 ಚಿನ್ನ, 44 ಬೆಳ್ಳಿ ಮತ್ತು 28 ಕಂಚಿನ ಪದಕ ಸೇರಿವೆ. ಜಸ್ಪಾಲ್ ರಾಣಾ, 9 ಚಿನ್ನ ಸೇರಿದಂತೆ ಒಟ್ಟು 15 ಪದಕ ಗೆದ್ದಿದ್ದಾರೆ.

ಇನ್ನು ಆರ್ಚರಿಯನ್ನೂ ಈ ಬಾರಿ ಕೈಬಿಟ್ಟಿರುವುದು ಭಾರತ ಬೇಸರಕ್ಕೆ ಕಾರಣವಾಗಿದೆ. ಈ ಕಾರಣಕ್ಕೂ ಬಹಿಷ್ಕಾರದ ಮಾತುಗಳು ಹರಿದಾಡಿದ್ದವು. ಬಳಿಕ ಅಯೋಜಕರು, 2022ರಲ್ಲಿ ಚಂಡೀಗಢದಲ್ಲಿ ಕಾಮನ್ವೆಲ್ತ್‌ ಗೇಮ್ಸ್‌ ಶೂಟಿಂಗ್ ಹಾಗೂ ಆರ್ಚರಿ ಚಾಂಪಿಯನ್‌ಷಿಪ್ ನಡೆಸಲು ನಿರ್ಧರಿಸಿದ್ದರು. ಇಲ್ಲಿನ ಪದಕಗಳನ್ನು ಅಂತಿಮ ಪಟ್ಟಿಯಲ್ಲಿ ಪರಿಗಣಿಸಲಾಗುವುದು ಎಂದು ಹೇಳಿತ್ತು. ಆದರೆ ಕೋವಿಡ್ ಕಾರಣ ಚಾಂಪಿಯನ್‌ಷಿಪ್ ನಡೆದಿಲ್ಲ.

ಆರ್ಚರಿ ಸ್ಪರ್ಧೆ ಕಾಮನ್ವೆಲ್ತ್‌ ಗೇಮ್ಸ್‌ಗೆ ಸೇರ್ಪಡೆಯಾಗಿರುವುದು ಎರಡೇ ಬಾರಿ. 1982 ಮತ್ತು 2010ರಲ್ಲಿ ಮಾತ್ರ. ಈ ಕ್ರೀಡೆಯಲ್ಲೂ ಭಾರತ ೩ ಚಿನ್ನ ಸೇರಿ ಒಟ್ಟು ೮ ಪದಕಗಳನ್ನು ಗೆದ್ದಿದೆ.

ಇದನ್ನೂ ಓದಿ | CWG- 2022 | 26ನೇ ಆವೃತ್ತಿಯ ಕಾಮನ್ವೆಲ್ತ್‌ ಗೇಮ್ಸ್‌ಗೆ ಇಂದು ಚಾಲನೆ

Exit mobile version