Site icon Vistara News

Indian Paralympic Team: ಪದಕ ಬೇಟೆಗೆ ಹೊರಟ ಭಾರತೀಯ ಪ್ಯಾರಾಲಿಂಪಿಕ್ಸ್‌ ತಂಡಕ್ಕೆ ಬೀಳ್ಕೊಡುಗೆ

Indian Paralympic Team

Indian Paralympic Team: Indian Paralympic contingent given a grand send-off for Paris Games

ನವದೆಹಲಿ: ಪ್ಯಾರಿಸ್​ನಲ್ಲಿ ಇದೇ ತಿಂಗಳ 28ರಿಂದ ಸೆಪ್ಟೆಂಬರ್‌ 8ರವರೆಗೆ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ (Paralympic) ಕೂಟದಲ್ಲಿ ಪದಕ ಬೇಟೆಗೆ ಹೊರಟಿರುವ ಭಾರತ ಪ್ಯಾರಾಲಿಂಪಿಕ್ಸ್‌ ತಂಡಕ್ಕೆ(Indian Paralympic Team) ಶುಕ್ರವಾರ ಬೀಳ್ಕೊಡುಗೆ ನೀಡಲಾಯಿತು. ಭಾರತ ಪ್ಯಾರಾಲಿಂಪಿಕ್‌ ಸಮಿತಿ (ಪಿಸಿಐ) ಮತ್ತು ಭಾರತ ಕ್ರೀಡಾ ಪ್ರಾಧಿಕಾರ (ಎಸ್‌ಎಐ) ಈ ಸಮಾರಂಭ ಆಯೋಜಿಸಿತ್ತು.

ಕಳೆದ ಟೋಕಿಯೊ ಪ್ಯಾರಾಲಿಂಪಿಕ್ಸ್​ನಲ್ಲಿ 19 ಪದಕ ಗೆದ್ದ ಭಾರತ, ಈ ಬಾರಿ 25 ಪದಕ ಗೆಲ್ಲುವ ಗುರಿಯೊಂದಿಗೆ ಪ್ಯಾರಿಸ್​ಗೆ ಪ್ರಯಾಣ ಬೆಳೆಸಿದೆ. ಈ ಬಾರಿ ದಾಖಲೆಯ 84 ಮಂದಿ ಪ್ಯಾರಾ ಕ್ರೀಡಾಪಟುಗಳು ವಿವಿಧ 12 ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕಳೆದ ಬಾರಿ 24 ಮಂದಿ ಸ್ಪರ್ಧಿಸಿದ್ದರು.

“ನಮ್ಮ ಪ್ಯಾರಾ ಅಥ್ಲೀಟ್‌ಗಳು ಅಡೆತಡೆಗಳನ್ನು ಜಯಿಸಲು ಮತ್ತು ಸವಾಲುಗಳನ್ನು ಅವಕಾಶಗಳಾಗಿ ಪರಿವರ್ತಿಸುವ ಗಮನಾರ್ಹ ಸಾಮರ್ಥ್ಯವನ್ನು ಹೊಂದಿದ್ದಾರೆ. ಅವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ಗಾಗಿ ತಮ್ಮ ತಯಾರಿಯಲ್ಲಿ ಗಮನಾರ್ಹ ದೃಢತೆ ಮತ್ತು ಪರಿಶ್ರಮವನ್ನು ತೋರಿಸಿದ್ದಾರೆ” ಎಂದು ಕ್ರೀಡಾ ಸಚಿವ ಮನ್ಸುಖ್ ಮಾಂಡವಿಯಾ(Mansukh Mandaviya) ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಭಾಗ್ಯಶ್ರೀ ಜಾಧವ್ ಮತ್ತು ಸುಮಿತ್ ಆಂಟಿಲ್ ಅವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್ 2024 ಗಾಗಿ ಭಾರತದ ಧ್ವಜಧಾರಿಗಳಾಗಿ ಹೆಸರಿಸಲ್ಪಟ್ಟಿದ್ದಾರೆ.

ಇದನ್ನೂ ಓದಿ Paralympics 2024: ಪ್ಯಾರಾಲಿಂಪಿಕ್ಸ್​ನಲ್ಲಿ ಭಾಗ್ಯಶ್ರೀ, ಸುಮಿತ್ ತ್ರಿವರ್ಣ ಧ್ವಜಧಾರಿಗಳು

“ಖೇಲೋ ಇಂಡಿಯಾ ಉಪಕ್ರಮದಿಂದ ಅನೇಕ ಕ್ರೀಡಾಪಟುಗಳು ಪ್ರಯೋಜನ ಪಡೆದಿದ್ದಾರೆ ಮತ್ತು ಅಲ್ಲಿಂದ ಗಮನಾರ್ಹ ಸಂಖ್ಯೆಯ ಜನರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ಗೆ ಹೋಗುತ್ತಾರೆ. ಅವರಿಗೆ ಉನ್ನತ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಲು ಅಗತ್ಯವಿರುವ ಸಂಪನ್ಮೂಲಗಳು ಮತ್ತು ಬೆಂಬಲವನ್ನು ಒದಗಿಸಲು ಸರ್ಕಾರ ಬದ್ಧವಾಗಿದೆ” ಎಂದು ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ಭಾರತದ ಸ್ಪರ್ಧಿಗಳು– ಆರ್ಚರಿ, ಅಥ್ಲೆಟಿಕ್ಸ್‌, ಬ್ಯಾಡ್ಮಿಂಟನ್‌, ಕೆನೊಯಿಂಗ್‌, ಸೈಕ್ಲಿಂಗ್‌, ಅಂಧರ ಜುಡೊ, ಪವರ್‌ಲಿಫ್ಟಿಂಗ್‌, ರೋಯಿಂಗ್‌, ಶೂಟಿಂಗ್, ಈಜು, ಟೇಬಲ್ ಟೆನಿಸ್ ಮತ್ತು ಟೇಕ್ವಾಂಡೊ ಕ್ರೀಡೆಗಳಲ್ಲಿ ಸ್ಪರ್ಧಿಸಲಿದ್ದಾರೆ. ದೇಶದ ಅಥ್ಲೀಟ್​ಗಳು ಈ ಬಾರಿಯೂ ಉತ್ತಮ ಪ್ರದರ್ಶನ ನೀಡುವ ಮೂಲಕ ದೇಶದ ಕೀರ್ತಿ ಪತಾಕೆಯನ್ನು ಹಾರಿಸುವ ವಿಶ್ವಾಸ ನನಗಿದೆ ಎಂದು ಭಾರತ ಪ್ಯಾರಾಲಿಂಪಿಕ್ ಸಮಿತಿ ಅಧ್ಯಕ್ಷ ದೇವೇಂದ್ರ ಝಜಾರಿಯಾ ವಿಶ್ವಾಸ ವ್ಯಕ್ತಪಡಿಸಿದರು. ಕಳೆದ ವರ್ಷ ಹಾಂಗ್‌ಝೌನ ಪ್ಯಾರಾ ಏಷ್ಯನ್ ಗೇಮ್ಸ್‌ನಲ್ಲೂ ಭಾರತದ ಪ್ಯಾರಾಲಿಂಪಿಕ್ಸ್‌ ತಂಡ 111 ಪದಕಗಳನ್ನು ಜಯಿಸಿ, ಉತ್ತಮ ಸಾಧನೆ ಮೆರೆದಿತ್ತು. ಹೀಗಾಗಿ ಈ ಬಾರಿ ಹೆಚ್ಚಿನ ನಿರೀಕ್ಷೆ ಇರಿಸಲಾಗಿದೆ.

Exit mobile version