ನವದೆಹಲಿ: ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ. ಸಿಂಧು(PV Sindhu) ಅವರು ನೂತನ ಕೋಚ್ ಹೆಸರನ್ನು ಪ್ರಟಿಸಿದ್ದಾರೆ. ಆಲ್ ಇಂಗ್ಲೆಂಡ್ ಓಪನ್ ಮಾಜಿ ಚಾಂಪಿಯನ್ ಹಾಗೂ ಮಲೇಷ್ಯಾದ ಮಾಜಿ ಬ್ಯಾಡ್ಮಿಂಟನ್ ಆಟಗಾರ ಮೊಹಮ್ಮದ್ ಹಫೀಜ್ ಹಶೀಮ್ (Muhammad Hafiz Hashim) ಬಳಿ ತರಬೇತಿ ಪಡೆಯಲು ನಿರ್ಧರಿಸಿರುವುದಾಗಿ ಭಾರತೀಯ ಕ್ರೀಡಾ ಪ್ರಾಧಿಕಾರಕ್ಕೆ (Sports Authority of India) ತಿಳಿಸಿದ್ದಾರೆ. ಈಗಾಗಲೇ ಐವರು ತರಬೇತುದಾರರನ್ನು ಬದಲಿಸಿರುವ ಸಿಂಧು ಕಳೆದೊಂದು ವರ್ಷಗಳಿಂದ ತೀರಾ ಕಳಪೆ ಪ್ರದರ್ಶನ ತೋರುತ್ತಿದ್ದಾರೆ. ಇದೀಗ ನೂತನ ಕೋಚ್ ಹಫೀಜ್ ಮಾರ್ಗದರ್ಶನದಲ್ಲಿ ಮತ್ತೆ ಗೆಲುವಿನ ಲಯಕ್ಕೆ ಮರಳಲಿದ್ದಾರಾ ಎಂದು ಕಾದು ನೋಡಬೇಕಿದೆ.
ಇದೇ ವರ್ಷದ ಆರಂಭದಲ್ಲಿ ಸಿಂಧು ಅವರ ನಿರಾಶಾದಾಯಕ ಪ್ರದರ್ಶನದಿಂದ ಬೇಸತ್ತು ಕೋಚ್ ಆಗಿದ್ದ ದಕ್ಷಿಣ ಕೊರಿಯಾದ ಪಾರ್ಕ್ ಟೇ ಸಾಂಗ್ ಈ ಜವಾಬ್ದಾರಿ ಯಿಂದ ಹಿಂದೆ ಸರಿದಿದ್ದರು. ಇದಾದ ಬಳಿಕ ಸಿಂಧು ಯಾವುದೇ ಕೋಚ್ ನೇಕಮ ಮಾಡಿಕೊಂಡಿರಿಲ್ಲ. ಸಾಂಗ್ ಅವರು ಕೋಚ್ ಆಗುವ ಮೊದಲು 2019ರಲ್ಲಿ ದಕ್ಷಿಣ ಕೊರಿಯಾದವರೇ ಆಗಿದ್ದ ಕಿಮ್ ಜಿ ಹ್ಯುನ್ ಅವರು ಕೋಚ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅವರ ಮಾರ್ಗದರ್ಶನದಲ್ಲೇ ಸಿಂಧು ವಿಶ್ವ ಚಾಂಪಿಯನ್ಶಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಜತೆಗೆ ಏಷ್ಯಾನ್ ಗೇಮ್ಸ್ನಲ್ಲಿಯೂ ಸ್ವರ್ಣಕ್ಕೆ ಕೊರಳೊಡ್ಡಿದ್ದರು. ಇವರ ಮಾರ್ಗದರ್ಶನದಲ್ಲೇ ಸಿಂಧು ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆಲ್ಲಲಿದ್ದಾರೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಕಿಮ್ ಜಿ ಅವರ ಪತಿ ತೀವ್ರ ಅನಾರೋಗ್ಯಕ್ಕೆ ಒಳಗಾದ ಕಾರಣ ಅವರು ಕೋಚಿಂಗ್ ಹುದ್ದೆ ಅರ್ಧಕ್ಕೆ ಮೊಟಕುಗೊಳಿಸಿ ಸ್ವದೇಶಕ್ಕೆ ಮರಳಿದರು.
ಕಿಮ್ ಜಿ ಹ್ಯುನ್ ಬಳಿಕ ಪಾರ್ಕ್ ಟೇ ಸಾಂಗ್ ಅವರು ಸಿಂಧು ಅವರ ಕೋಚ್ ಆಗಿ ನೇಮಕಗೊಂಡರು. ಸಾಂಗ್ ಕಾರ್ಯಾವಧಿಯಲ್ಲಿ ಸಿಂಧು ಟೋಕಿಯೊ ಒಲಿಂಪಿಕ್ಸ್ ಹಾಗೂ ಕಾಮನ್ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು. ಇದಾದ ಬಳಿಕ ಸಿಂಧು ಸತತ ಸೋಲು ಕಂಡರು. ಇದೇ ವಿಷಯದಲ್ಲಿ ಇವರಿಬ್ಬರ ಮಧ್ಯೆ ಕೆಲ ಮನಸ್ತಾಪ ಉಂಟಾಗಿ ಅಂತಿಮವಾಗಿ ಪಾರ್ಕ್ ಟೇ ಸಾಂಗ್ ಅವರು ತಮ್ಮ ಕೋಚಿಂಗ್ ಹುದ್ದಗೆ ರಾಜಿನಾಮೆ ನೀಡಿದ್ದರು.
ಇದನ್ನೂ ಓದಿ Madrid Masters: ಮ್ಯಾಡ್ರಿಡ್ ಸ್ಪೇನ್ ಮಾಸ್ಟರ್; ಫೈನಲ್ನಲ್ಲಿ ಪಿ.ವಿ. ಸಿಂಧುಗೆ ನಿರಾಸೆ
ಇದೀಗ ನೂತನ ಕೋಚ್ ಆಗಿ ನೇಮಕಗೊಂಡಿರುವ 40 ವರ್ಷದ ಹಫೀಜ್ ಅವರ ಬಳಿ ಸಿಂಧು ಕೆಲ ತಿಂಗಳುಗಳ ಹಿಂದೆಯೇ ತರಬೇತಿ ಆರಂಭಿಸಿದ್ದಾರೆ ಎಂದು ತಿಳಿದುಬಂದಿದೆ. ಒಟ್ಟಾರೆ ಸಿಂಧು ಅವರು ಹಫೀಜ್ ಅವರ ಮಾರ್ಗದರ್ಶನದಲ್ಲಿ ಉತ್ತಮ ಲಯ ಕಂಡುಕೊಳ್ಳುವ ಮೂಲಕ ಮುಂದಿನ ವರ್ಷ ಪ್ಯಾರಿಸ್ನಲ್ಲಿ ನಡೆಯುವ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವಂತಾಗಲಿ ಎನ್ನುವುದು ಸಿಂಧು ಅಭಿಮಾನಿಗಳ ಆಶಯವಾಗಿದೆ.